ವಿಟ್ಲ :(ಫೆ.6) ಸಿಂಗಾರಿ ಬೀಡಿ ಮಾಲೀಕರ ಮನೆಯಲ್ಲಿ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತಿಬ್ಬರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ. ಕೇರಳ ಕೊಲ್ಲಂನ ಶಬಿನ್ ಮತ್ತು ಸಚಿನ್ ಬಂಧಿತರು.
ಇದನ್ನೂ ಓದಿ: ಉಡುಪಿ: ರೈಲು ಢಿಕ್ಕಿ ಹೊಡೆದು ಯುವಕ ಮೃತ್ಯು!!!
ಆರೋಪಿ ಶಬಿನ್ ಎಂಬಾತನನ್ನು ತಿರುವನಂತಪುರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಆತ ವಿದೇಶಕ್ಕೆ ಪರಾರಿಯಾಗಲು ಯತ್ನಿಸಿದ್ದ. ಆತನ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿಗೊಳಿಸಲಾಗಿತ್ತು. ಆತ ವಿಮಾನ ನಿಲ್ದಾಣಕ್ಕೆ ಬಂದಾಗ ಮತ್ತಿಯಲ್ಲಿದ್ದ ಪೊಲೀಸರು ವಶಕ್ಕೆ ಪಡೆದಿದ್ದರು ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ತಿಳಿಸಿದ್ದಾರೆ.
ಸಚಿನ್‌ನನ್ನು ವಿಟ್ಲ ಪೊಲೀಸರ ತಂಡ ಮುಂಬಯಿಯ ಪನ್ವೇಲ್‌ನಲ್ಲಿ ಬಂಧಿಸಿದ್ದು, ಆತನಿಂದ ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಆರೋಪಿ ಶಬಿನ್ ನನ್ನು ಕೇರಳದ ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ. ಬಂಧಿತ ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ, ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.
ಕೇರಳದ ಕೊಟ್ಟಾಯಂ ನಿವಾಸಿ ಅನಿಲ್ ಫೆರ್ನಾಂಡಿಸ್ ಎನ್ನುವ ಆರೋಪಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದರು. ಈ ಪ್ರಕರಣದಲ್ಲಿ ಒಟ್ಟು ಮೂವರು ಆರೋಪಿಗಳ ಬಂಧನವಾಗಿದೆ. ಈ ಪ್ರಕರಣದಲ್ಲಿ ಆರೋಪಿಗಳ ಪತ್ತೆಗಾಗಿ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಪ್ರಸ್ತುತ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನೂ ಮೂರು ಮಂದಿ ತಲೆಮರೆಸಿಕೊಂಡಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.