ಬೆಳ್ತಂಗಡಿ:(ಫೆ.7) ಅಗೋಚರ ಶಕ್ತಿ, ಪ್ರೇತಾತ್ಮ ಬಾಧೆ, ಇದ್ದಕ್ಕಿದ್ದಂತೆ ಬೆಂಕಿ ಬೀಳುತ್ತೆ, ಸ್ಟೀಲ್ ಲೋಟ, ಪಾತ್ರೆಗಳು ಚೆಲ್ಲಾಪಿಲ್ಲಿ ಆಗುತ್ತವೆ. ರಾತ್ರಿ ಹೊತ್ತು ಯಾರೋ ಓಡಾಡುತ್ತಿರುವ ಅನುಭವ ಆಗುತ್ತೆ. ಮಲಗಿದವರ ಕತ್ತು ಹಿಸುಕುತ್ತಿರೋ ಹಾಗೆ ಅನ್ನಿಸುತ್ತೆ. ಹೀಗೆ ಮಾಲಾಡಿ ಗ್ರಾಮದಲ್ಲೊಂದು ವಿಲಕ್ಷಣ ಘಟನೆ ನಡೆಯುತ್ತಿದೆ. ಕುಟುಂಬವೊಂದಕ್ಕೆ ಅಗೋಚರ ಶಕ್ತಿ ಕಾಡುತ್ತಿದೆ.

ಇದನ್ನೂ ಓದಿ: ಬೆಳ್ತಂಗಡಿ: ಕಾರು ಡಿಕ್ಕಿ ಹೊಡೆದು ವ್ಯಕ್ತಿ ಸಾವು
ವೈಜ್ಞಾನಿಕತೆ ಬೆಳೆದಂತೆಲ್ಲ ಜನರು ಮೂಢನಂಬಿಕೆಗಳಿಂದಲೂ ದೂರಾಗಲು ಆರಂಭಿಸಿದ್ದಾರೆ. ಆದರೂ ಅಲ್ಲಲ್ಲಿ ಕೇಳಿಬರುವ ಭೂತ, ಪ್ರೇತದ ಕತೆಗಳು ಯಾವುದನ್ನು ನಂಬಬೇಕು ಯಾವುದನ್ನು ಬಿಡಬೇಕು ಅನ್ನೋ ಅನುಮಾನವನ್ನು ಹುಟ್ಟಿಸಿಬಿಡುತ್ತವೆ. ಇದೇ ರೀತಿಯ ಘಟನೆಯೊಂದು ನಡೆದಿದೆ. ಆ ಮನೆಯಲ್ಲಿ ನಿಗೂಢ ದುಷ್ಟ ಶಕ್ತಿಯೊಂದು ತಾಂಡವವಾಡ್ತಿದೆ ಎನ್ನಲಾಗಿದ್ದು, ಮನೆ ಮಂದಿಯ ಜೀವನ ಅಕ್ಷರಶಃ ನರಕವಾಗಿದೆ.
ಮಾಲಾಡಿ ಗ್ರಾಮದ ಕುಟುಂಬವೊಂದಕ್ಕೆ ಪ್ರೇತ ಬಾಧೆ!
ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮ ವಿಲಕ್ಷಣ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಕಳೆದ 18 ವರ್ಷಗಳಿಂದ ಉಮೇಶ್ ಶೆಟ್ಟಿ ಎಂಬವರು ತಮ್ಮ ಕುಟುಂಬದ ಜೊತೆ ನೆಲೆಸಿದ್ದಾರೆ. ಆದರೆ ಇವರು ಕಳೆದ ಮೂರು ತಿಂಗಳಿನಿಂದ ಪ್ರೇತ ಬಾಧೆಯಿಂದ ಸಂಪೂರ್ಣವಾಗಿ ಕಂಗಲಾಗಿ ಹೋಗಿದ್ದಾರೆ. ರಾತ್ರಿಯಾಗುತ್ತಿದ್ದಂತೆ ಆ ಕುಟುಂಬ ಭಯದಿಂದಲೇ ಕಾಲ ಕಳೆಯುವಂತಾಗಿದೆ.
ಪತ್ನಿ, ಇಬ್ಬರು ಪುತ್ರಿಯರ ಜೊತೆ ನೆಲೆಸಿರುವ ಉಮೇಶ್ ಅವರಿಗೆ ಅಗೋಚರ ಶಕ್ತಿಯ ಬಾಧೆ ತಟ್ಟಿದೆಯಂತೆ. ಪ್ರತಿನಿತ್ಯ ರಾತ್ರಿ ಈ ಮನೆಯ ಕುಟುಂಬ ಸದಸ್ಯರು ವಿಚಿತ್ರ ಅನುಭವಗಳಿಗೆ ಸಾಕ್ಷಿಯಾಗುತ್ತಿದ್ದಾರೆ. ಮನೆಯೊಳಗೆ ಮಲಗಿದಾಗ ಯಾರೋ ಕುತ್ತಿಗೆ ಹಿಸುಕಿದಂತಹ ಅನುಭವ ಆಗುತ್ತಂತೆ. ಏಕಾಏಕಿ ಮನೆಯೊಳಗೆ ಇರುವ ಸ್ಟೀಲ್ ಲೋಟ, ಪಾತ್ರೆ ಪಗಡೆಗಳು ಚೆಲ್ಲಾಪಿಲ್ಲಿಯಾಗುತ್ತಂತೆ. ಮನೆ ಹೊರಗಿದ್ದ ಬಟ್ಟೆ ಒಳಗೆ ಬಂದು ಆ ಬಟ್ಟೆಗೆ ಬೆಂಕಿ ಹತ್ತಿಕೊಳ್ಳುತ್ತಂತೆ.

ಮೊಬೈಲ್‌ನಲ್ಲಿ ಪ್ರೇತಾತ್ಮದ ಭಾವಚಿತ್ರ ಸೆರೆ:
ಕೇವಲ ಇಷ್ಟು ಮಾತ್ರವಲ್ಲದೇ ಉಮೇಶ್ ಶೆಟ್ಟಿ ಪುತ್ರಿ ಕಗ್ಗತ್ತಲ ರಾತ್ರಿಯಲ್ಲಿ ತಮ್ಮ ಮೊಬೈಲ್‌ನಲ್ಲಿ ತೆಗೆದಿರುವ ಫೋಟೋದಲ್ಲಿ ಪ್ರೇತಾತ್ಮದ ಭಾವಚಿತ್ರ ಸೆರೆಯಾಗಿದೆ. ಈ ಫೋಟೋದಲ್ಲಿ ಬಿಳಿಯ ಮುಖ ಹೊಂದಿರುವ ವ್ಯಕ್ತಿ ನಿಂತಂತೆ ಭಾಸವಾಗುತ್ತಿದ್ದು, ಈ ಎಲ್ಲಾ ಬೆಳವಣಿಗೆಗಳು ಉಮೇಶ್ ಶೆಟ್ಟಿ ಕುಟುಂಬವನ್ನು ಆತಂಕಕ್ಕೆ ದೂಡಿದೆ.
ಸಂಜೆಯಾಗುತ್ತಿದ್ದಂತೆ ಉಮೇಶ್ ಶೆಟ್ಟಿ ಮನೆಯಲ್ಲಿ ಈ ವಿಚಿತ್ರ ಘಟನೆಗಳು ನಡೆಯುತ್ತಿದೆ. ಆದರೆ ಈ ಭಾಗದಲ್ಲಿ ಇಪ್ಪತೈದ್ದಕ್ಕೂ ಹೆಚ್ಚು ಮನೆಗಳಿದ್ದರೂ ಸಹ ಉಮೇಶ್ ಶೆಟ್ಟಿ ಕುಟುಂಬವನ್ನು ಮಾತ್ರ ಈ ಪ್ರೇತಾತ್ಮ ಕಾಡುತ್ತಿದೆಯಂತೆ. ಈ ಪ್ರೇತಾತ್ಮದ ಬಾಧೆಯ ಬಗ್ಗೆ ಸ್ಥಳೀಯ ನಿವಾಸಿಗಳಿಗೂ ಅನುಭವಕ್ಕೆ ಬಂದಿದ್ದು, ರಾತ್ರಿ ವೇಳೆ ಪಾತ್ರೆ, ಪಗಡೆ ಬೀಳುವ ಸದ್ದು ಕೇಳಿಸುತ್ತದೆಯಂತೆ ನೆರೆಮನೆ ನಿವಾಸಿ ದೇವಕಿ ಎನ್ನುವವರು ಹೇಳಿದ್ದಾರೆ.

ಉಮೇಶ್ ಶೆಟ್ಟಿ ಮಕ್ಕಳಿಗೆ ಮನೆಯೊಳಗೆ ಯಾರೋ ಓಡಾಡಿದ ಅನುಭವ ಆಗಿದೆಯಂತೆ. ಹೀಗಾಗಿ ರಾತ್ರಿಯಾಗುತ್ತಿದಂತೆ ಕುಟುಂಬ ಸದಸ್ಯರು ಹೊರಗಡೆಯೇ ಕಾಲ ಕಳೆಯುವಂತಾಗಿದೆ. ಈ ವಿಚಾರವನ್ನು ಉಮೇಶ್ ಶೆಟ್ಟಿ ಕುಟುಂಬವೇ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿರುವುದರಿಂದ ಸಂಜೆಯಾಗುತ್ತಿದ್ದಂತೆ ಈ ಮನೆ ಸಮೀಪ ಕುತೂಹಲದಿಂದ ಸಾಕಷ್ಟು ಜನ ಒಟ್ಟು ಸೇರುತ್ತಿದ್ದಾರೆ.

ಉಮೇಶ್ ಶೆಟ್ಟಿ ಕುಟುಂಬ ಈ ಮನೆಯನ್ನು ಬಿಟ್ಟು ಹೋಗುವಂತೆ ಮಾಡಲು ಯಾರೋ ಮಾಟ ಮಂತ್ರದ ಮೂಲಕ ಈ ರೀತಿ ಮಾಡುತ್ತಿದ್ದಾರಂತೆ. ಆದರೆ ಈ ಮನೆಯಲ್ಲಿ ಆಗುತ್ತಿರುವ ಈ ಬೆಳವಣಿಗೆಗಳು ಸಾಕಷ್ಟು ಕುತೂಹಲ ಹಾಗೂ ಸಂಶಯಕ್ಕೆ ಕಾರಣವಾಗಿದ್ದು, ಕೆಲ ಸ್ಥಳೀಯರು ಇದು ಭ್ರಮೆ, ಇದೆಲ್ಲ ಕೇವಲ ಕಟ್ಟು ಕಥೆಯಷ್ಟೇ ಎಂದೇ ಹೇಳಿದ್ದಾರೆ.

ಒಟ್ಟಿನಲ್ಲಿ ಪ್ರೇತ ಬಾಧೆಯ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗುವುದರ ಜೊತೆ, ಕುಟುಂಬ ಸದಸ್ಯರಿಗೆ, ಸ್ಥಳೀಯರಿಗೆ ಅನುಭವಕ್ಕೆ ಬಂದಿದೆ. ಈ ಬಗ್ಗೆ ಸಮಗ್ರವಾದ ಅಧ್ಯಯನ, ತನಿಖೆ ಆಗಬೇಕಾದ ಅವಶ್ಯಕತೆಯಿದ್ದು ಊರವರು, ಮನೆಯವರು ಒಟ್ಟು ಸೇರಿ ಈ ಗೊಂದಲಕ್ಕೆ ಉತ್ತರವನ್ನು ಕಂಡುಕೊಳ್ಳಬೇಕಾಗಿದೆ.
