Sun. Feb 23rd, 2025

Belthangady: ಕೊಲ್ಪೆದಬೈಲ್ ಉಮೇಶ್ ಶೆಟ್ಟಿಯವರ ಮನೆಯಲ್ಲಿ ಪ್ರೇತ ಬಾಧೆ ಪ್ರಕರಣ – ಹುಲಿಕಲ್‌ ನಟರಾಜ್ ಬರುವುದು ಬೇಡ, ಎಲ್ಲಾ ಸಮಸ್ಯೆ ಸರಿಯಾಗಿದೆ ಎಂದ ಕುಟುಂಬ!!

ಬೆಳ್ತಂಗಡಿ:(ಫೆ.10) ವೈಜ್ಞಾನಿಕತೆ ಬೆಳೆದಂತೆಲ್ಲ ಜನರು ಮೂಢನಂಬಿಕೆಗಳಿಂದಲೂ ದೂರಾಗಲು ಆರಂಭಿಸಿದ್ದಾರೆ. ಆದರೂ ಅಲ್ಲಲ್ಲಿ ಕೇಳಿಬರುವ ಭೂತ, ಪ್ರೇತದ ಕತೆಗಳು ಯಾವುದನ್ನು ನಂಬಬೇಕು ಯಾವುದನ್ನು ಬಿಡಬೇಕು ಅನ್ನೋ ಅನುಮಾನವನ್ನು ಹುಟ್ಟಿಸಿಬಿಡುತ್ತವೆ.

ಇದನ್ನೂ ಓದಿ: ಬಂದಾರು: ಚಂದ್ರಹಾಸ ಕುಂಬಾರ ಬಂದಾರು ರವರಿಗೆ “ಸಾಹಿತ್ಯ ರತ್ನ” ಪ್ರಶಸ್ತಿ

ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ಸಮೀಪದ ಕೊಲ್ಪೆದಬೈಲ್‌ ಎಂಬಲ್ಲಿ ಕೆಲವು ದಿನಗಳಿಂದ ವಿಚಿತ್ರ ಘಟನೆಗಳು ನಡೆಯುತ್ತವೆ. ಇಲ್ಲಿನ ಉಮೇಶ್‌ ಶೆಟ್ಟಿ ಅವರ ಮನೆಯಲ್ಲಿ ಇಂತಹ ಘಟನಾವಳಿಗಳು ನಡೆಯುತ್ತಿದ್ದು, ಮನೆಯಲ್ಲಿ ಯಾರೋ ಅಗೋಚರವಾಗಿ ಓಡಾಡಿದಂತೆ ಭಾಸವಾಗುವುದು. ಕತ್ತಲು ಆವರಿಸುತ್ತಿದ್ದಂತೆ, ಮನೆಯೊಳಗೆ ಇರುವ ಬಟ್ಟೆಗೆ ಬೆಂಕಿ ಹಿಡಿದು ಉರಿಯುವುದು, ಮನೆಯ ಪಾತ್ರೆಗಳು ಬೀಳುವುದು, ಮನೆಯಲ್ಲಿದ್ದ ವಸ್ತುಗಳು ಚಲಿಸಿದಂತಾಗುವುದು, ಗಂಧ-ಪ್ರಸಾದ ನಾಪತ್ತೆಯಾಗುವುದು ಇತ್ಯಾದಿ ವಿಚಿತ್ರ ಘಟನೆಗಳು ನಡೆಯುತ್ತಿದ್ದು ಉಮೇಶ್‌ ಶೆಟ್ಟಿ ಅವರನ್ನು ಆತಂಕಕ್ಕೆ ತಳ್ಳಿತ್ತು. ಆದರೀಗ ಈ ಎಲ್ಲಾ ಸಮಸ್ಯೆ ಇದ್ದಕ್ಕಿದ್ದಂತೆ ಪರಿಹಾರವಾಗಿದೆ ಎನ್ನಲಾಗಿದೆ.

ಈ ಸುದ್ದಿ ವೈರಲ್ ಆಗುತ್ತಿದ್ದಂತೆ ನೂರಾರು ಜನರು ಉಮೇಶ್ ಶೆಟ್ಟಿ ಅವರ ಮನೆ ಹತ್ತಿರ ಆಗಮಿಸಿದ್ದರು. ಈ ನಡುವೆ ಇಡೀ ಕುಟುಂಬ ಮನೆ ಬಿಟ್ಟು ತೆರಳಿತ್ತು, ಇದೀಗ ಮರಳಿ ಬಂದಿರುವ ಅವರು ಸಮಸ್ಯೆ ಎಲ್ಲಾ ನಿವಾರಣೆ ಆಗಿದೆ ಎಂದಿದ್ದಾರೆ. ನಮ್ಮ ಮನೆಯ ದೈವದ ತೊಂದರೆಯಿಂದ ಹೀಗಾಗುತ್ತಿತ್ತು. ಅದಕ್ಕೆ ಪರಿಹಾರ ಮಾಡಿಕೊಳ್ಳಲಾಗಿದೆ ಅನಂತರ ಯಾವುದೇ ಸಮಸ್ಯೆ ಇಲ್ಲ, ಈಗ ಎಲ್ಲಾ ಸರಿಯಾಗಿದೆ ಎಂದು ಮನೆಯವರು ತಿಳಿಸಿದ್ದಾರೆ.

ಬೀಗ ಹಾಕಿದ್ದ ಕಪಾಟಿನಲ್ಲಿದ್ದ ಚಿನ್ನವೂ ನಾಪತ್ತೆಯಾಗಿತ್ತು ಎಂದು ಮನೆಯವರು ಹೇಳಿದ್ದರು. ಆದರೆ ಇದೀಗ ಪತ್ತೆಯಾಗಿದೆ. ಅದು ದೇವರ ಫೋಟೋದ ಹಿಂದೆ ಇತ್ತು ಎಂದು ತಿಳಿಸಿದ್ದಾರೆ.

ಏನಿದು ಘಟನೆ?
ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದಲ್ಲಿ ಕಳೆದ 18 ವರ್ಷಗಳಿಂದ ಉಮೇಶ್ ಶೆಟ್ಟಿ ಎಂಬವರು ತಮ್ಮ ಕುಟುಂಬದ ಜೊತೆ ನೆಲೆಸಿದ್ದಾರೆ. ಆದರೆ ಇವರು ಕಳೆದ ಮೂರು ತಿಂಗಳಿನಿಂದ ಪ್ರೇತ ಬಾಧೆಯಿಂದ ಸಂಪೂರ್ಣವಾಗಿ ಕಂಗಲಾಗಿ ಹೋಗಿದ್ದಾರೆ. ರಾತ್ರಿಯಾಗುತ್ತಿದ್ದಂತೆ ಈ ಕುಟುಂಬ ಭಯದಿಂದಲೇ ಕಾಲ ಕಳೆಯುವಂತಾಗಿದೆ.

ಪತ್ನಿ, ಇಬ್ಬರು ಪುತ್ರಿಯರ ಜೊತೆ ನೆಲೆಸಿರುವ ಉಮೇಶ್ ಅವರಿಗೆ ಅಗೋಚರ ಶಕ್ತಿಯ ಬಾಧೆ ತಟ್ಟಿದೆಯಂತೆ. ಪ್ರತಿನಿತ್ಯ ರಾತ್ರಿ ಈ ಮನೆಯ ಕುಟುಂಬ ಸದಸ್ಯರು ವಿಚಿತ್ರ ಅನುಭವಗಳಿಗೆ ಸಾಕ್ಷಿಯಾಗುತ್ತಿದ್ದಾರೆ. ಮನೆಯೊಳಗೆ ಮಲಗಿದಾಗ ಯಾರೋ ಕುತ್ತಿಗೆ ಹಿಸುಕಿದಂತ ಅನುಭವ ಆಗುತ್ತಂತೆ. ಏಕಾಏಕಿ ಮನೆಯೊಳಗೆ ಇರುವ ಸ್ಟೀಲ್ ಲೋಟ, ಪಾತ್ರೆ ಪಗಡೆಗಳು ಚೆಲ್ಲಾಪಿಲ್ಲಿಯಾಗುತ್ತಂತೆ. ಮನೆ ಹೊರಗಿದ್ದ ಬಟ್ಟೆ ಒಳಗೆ ಬಂದು ಆ ಬಟ್ಟೆಗೆ ಬೆಂಕಿ ಹತ್ತಿಕೊಳ್ಳುತ್ತ0ತೆ.

ಪ್ರೇತಾತ್ಮದ ಭಾವಚಿತ್ರ ಸೆರೆ:
ಕೇವಲ ಇಷ್ಟು ಮಾತ್ರವಲ್ಲದೇ ಉಮೇಶ್ ಶೆಟ್ಟಿ ಪುತ್ರಿ ಕಗ್ಗತ್ತಲ ರಾತ್ರಿಯಲ್ಲಿ ತಮ್ಮ ಮೊಬೈಲ್‌ನಲ್ಲಿ ತೆಗೆದಿರುವ ಫೋಟೋದಲ್ಲಿ ಪ್ರೇತಾತ್ಮದ ಭಾವಚಿತ್ರ ಸೆರೆಯಾಗಿದೆ. ಈ ಫೋಟೋದಲ್ಲಿ ಬಿಳಿಯ ಮುಖ ಹೊಂದಿರುವ ವ್ಯಕ್ತಿ ನಿಂತಂತೆ ಕಾಣುತ್ತಿತ್ತು.

Leave a Reply

Your email address will not be published. Required fields are marked *