ಮಂಗಳೂರು:(ಫೆ.10) ಆಟವಾಡುತ್ತಿದ್ದ ಬಾಲಕನೊಬ್ಬನ ಮೇಲೆ ತೆಂಗಿನಗರಿ ಬಿದ್ದು ಅದರ ತುಂಡು ಒಂದು ಬಾಲಕನ ಎದೆಗೆ ಹೊಕ್ಕಿ ಹಾಗೂ ಆತ ತೊಟ್ಟಿದ್ದ ಚೈನ್ ಕೂಡ ಕುತ್ತಿಗೆ ಮೂಲಕ ಎದೆಯ ಒಳಗೆ ಸೇರಿದ ಘಟನೆ ಮಡಿಕೇರಿಯಲ್ಲಿ ಸಂಭವಿಸಿದೆ. ಬಳಿಕ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಗರಿ ಮತ್ತು ಸರವನ್ನು ಹೊರ ತೆಗೆಯಲಾಗಿದೆ.

ಇದನ್ನೂ ಓದಿ: ಬೆಳ್ತಂಗಡಿ: ಆಟೋ ರಿಕ್ಷಾ ಹಾಗೂ ಬೈಕ್ ನಡುವೆ ಭೀಕರ ಅಪಘಾತ
ಅಸ್ಸಾಂ ಮೂಲದ ಬಾಲಕ ಕಮಲ್ ಹುಸೇನ್(12)ನ ಹೆತ್ತವರು ಮಡಿಕೇರಿಯ ಮನೆಯಲ್ಲಿ ಕಾರ್ಮಿಕರಾಗಿದ್ದರು. ಅವರು ಶನಿವಾರ ತೋಟ ದಲ್ಲಿ ಕೆಲಸ ಮಾಡುತ್ತಿದ್ದಾಗ ಬಾಲಕ ಪಕ್ಕದಲ್ಲಿ ಆಟವಾಡುತ್ತಿದ್ದ. ಈ ವೇಳೆ ತೆಂಗಿನ ಮರದ ಗರಿ ಬಾಲಕನ ಮೇಲೆ ಬಿದ್ದಿದೆ.


ಅದರ ಒಂದು ಭಾಗ ಬಾಲಕನ ಕುತ್ತಿಗೆಯ ಮೂಲಕ ಎದೆಯ ಒಳಗಡೆ ಪ್ರವೇಶಿಸಿದೆ. ಈ ವೇಳೆ ಬಾಲಕನ ಕೊರಳಲ್ಲಿದ್ದ ಚೈನ್ ಕೂಡ ಕೊಂಬೆಗೆ ಸುತ್ತಿ ಒಳಗೆ ಸೇರಿದೆ. ಕೂಡಲೇ ಆತನನ್ನು ಮಡಿಕೇರಿಯ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಹೆಚ್ಚಿನ ಚಿಕಿತ್ಸೆ ಅಗತ್ಯ ಇದ್ದುದರಿಂದ ಮಂಗಳೂರಿಗೆ ಕರೆತರಲಾಯಿತು.
ಈ ಕುರಿತು ಡಾ| ಸುರೇಶ್ ಪೈ ಪ್ರತಿಕ್ರಿಯಿಸಿ, “ತೆಂಗಿನ ಗರಿ ಬಿದ್ದು ಬಾಲಕನ ಕುತ್ತಿಗೆಯಿಂದ ನುಗ್ಗಿ ಎದೆಯ ಒಳಗಡೆ ಹೋಗಿತ್ತು. ಅದೃಷ್ಟವಶಾತ್ ಎದೆಯ ಒಳಗಿನ ಯಾವುದೇ ಭಾಗಕ್ಕೆ ಗಾಯಗಳಾಗಿರಲಿಲ್ಲ.

ಬಾಲಕನಿಗೆ ರಕ್ತಸ್ರಾವ ಆಗುತ್ತಿರಲಿಲ್ಲ. ರಕ್ತನಾಳ, ನರ, ಶ್ವಾಸಕೋಶ, ಹೃದಯಕ್ಕೆ ತೊಂದರೆಯಾಗದ ರೀತಿಯಲ್ಲಿ ತೆಂಗಿನ ಮರದ ಗರಿಯ ತುಂಡನ್ನು ಯಶಸ್ವಿಯಾಗಿ ತೆಗೆದಿದ್ದೇವೆ. ಬಾಲಕ ಚೇತರಿಸುತ್ತಿದ್ದು, ಕೆಲವು ವಾರಗಳ ವಿಶ್ರಾಂತಿ ಅಗತ್ಯವಿದೆ” ಎಂದು ತಿಳಿಸಿದ್ದಾರೆ.

