Mon. Feb 24th, 2025

Padangady:: ಉಜಿರೆ ಬೆನಕ ಆಸ್ಪತ್ರೆಯ ವತಿಯಿಂದ ಪಡಂಗಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಪಡಂಗಡಿ:(ಫೆ.12) “ನ ಭಯಂ ಚಾಸ್ತಿ ಜಾಗ್ರತ” ಸದಾ ಜಾಗೃತರಾಗಿರುವವರಿಗೆ ಭಯವಿಲ್ಲ ಅಂದರೆ ನಾವು ಆರೋಗ್ಯದ ವಿಷಯದಲ್ಲಿ ಎಚ್ಚರವಾಗಿರಬೇಕೆ ಹೊರತು ಭಯ ಪಡಬೇಕಾದ ಅವಶ್ಯಕತೆ ಇಲ್ಲ. ಮನುಷ್ಯನ ದೇಹಕ್ಕೆ ರೋಗರುಜಿನಗಳು ಸಾಮಾನ್ಯ. ಅವುಗಳಿಗೆ ಹೆದರುವ ಅಗತ್ಯ ಇಲ್ಲ. ಚಿಕಿತ್ಸೆಗಿಂತ ಮುಂಜಾಗ್ರತೆ ಮೇಲು ಎಂಬಂತೆ ಅದರ ಬಗ್ಗೆ ತಿಳಿದುಕೊಂಡು ಬರದಂತೆ ಎಚ್ಚರ ವಹಿಸುವುದು ಅಗತ್ಯ. ನಮ್ಮ ಆರೋಗ್ಯ ತಪಾಸಣಾ ಶಿಬಿರಗಳ ಆಶಯ ಕೂಡಾ ಜನಸಾಮಾನ್ಯರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಮೂಡಿಸುವುದು ಹಾಗೂ ಆರಂಭಿಕ ಹಂತದಲ್ಲಿ ಅವುಗಳನ್ನು ಗುರುತಿಸಿ ಅಗತ್ಯ ಚಿಕಿತ್ಸೆಯನ್ನು ತೆಗೆದುಕೊಳ್ಳಲು ಮಾರ್ಗದರ್ಶನ ನೀಡುವುದು ಎಂದು ಉಜಿರೆಯ ಬೆನಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಗೋಪಾಲಕೃಷ್ಣ ತಿಳಿಸಿದರು.

ಡಾ.ಗೋಪಾಲಕೃಷ್ಣ ಅವರು ಉಜಿರೆ ಬೆನಕ ಆಸ್ಪತ್ರೆಯ ರಜತ ಸಂಭ್ರಮ ಹಾಗೂ ಸಾಮಾಜಿಕ ಬದ್ಧತೆಯ ಅಂಗವಾಗಿ ಉಜಿರೆಯ ಬೆನಕ ಆಸ್ಪತ್ರೆ ಮತ್ತು ಬೆನಕ ಚಾರಿಟೇಬಲ್ ಟ್ರಸ್ಟ್ ನ ಪ್ರಾಯೋಜಕತ್ವದಲ್ಲಿ ಪಡಂಗಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ(ರಿ.) ಮತ್ತು ಪಡಂಗಡಿ ಹಾಲು ಉತ್ಪಾದಕರ ಸಹಕಾರ ಸಂಘದ ಸಹಯೋಗದಲ್ಲಿ ಪಡಂಗಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ “ಸಮೃದ್ಧಿ
ಸಭಾಭವನ” ದಲ್ಲಿ ಇತ್ತೀಚೆಗೆ ಆಯೋಜಿಸಲಾದ ಉಚಿತ ಆರೋಗ್ಯ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಪಡಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ವಸಂತ ಪೂಜಾರಿ ಅವರು ಶಿಬಿರವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ಜನರ ಬಳಿಗೆ ಬಂದು ಉಚಿತ ಆರೋಗ್ಯ ತಪಾಸಣೆ ಮಾಡುವ ಮೂಲಕ ಅರೋಗ್ಯ ಜಾಗೃತಿಯನ್ನು ಮೂಡಿಸುವುದು ಅಭಿನಂದನೀಯ ಎಂದು ಶ್ಲಾಘಿಸಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಪಡಂಗಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಆಂತೋನಿ ಫೆರ್ನಾಂಡಿಸ್, ಉಪಾಧ್ಯಕ್ಷರಾದ ಶ್ರೀ ನರೇಂದ್ರ ಕುಮಾರ್ ಜೈನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸುಕೇಶಿನಿ, ಪಡಂಗಡಿ ಗ್ರಾಮ ಪಂಚಾಯತ್ ಸದಸ್ಯ ಶ್ರೀ ಸಂತೋಷ್ ಕುಮಾರ್ ಜೈನ್, ಪಡಂಗಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಸುಬ್ರಮಣ್ಯ ಭಟ್, ಕಾರ್ಯದರ್ಶಿ ಶ್ರೀಮತಿ ಮೇಬಲ್ ಕ್ರಾಸ್ತಾ ಮೊದಲಾದವರು ಉಪಸ್ಥಿತರಿದ್ದರು.

ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ಹಾಗೂ ತುರ್ತು ಚಿಕಿತ್ಸಾ ತಜ್ಞರಾದ ಡಾ. ಆದಿತ್ಯ ರಾವ್, ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆಯಾಗಿರುವ ಡಾ.ಅಂಕಿತಾ ಜಿ,ಭಟ್, ಎಲುಬು ಮತ್ತು ಕೀಲು ತಜ್ಞರಾಗಿರುವ ಡಾ.ರೋಹಿತ್.ಜಿ.ಭಟ್ ಹಾಗೂ ಮಕ್ಕಳ ತಜ್ಞರಾದ ಡಾ.ಗೋವಿಂದ್ ಕಿಶೋರ್ ಅವರು ಉಪಸ್ಥಿತರಿದ್ದು, ಉಚಿತ ತಪಾಸಣೆ ನಡೆಸಿದರು. ವಿಶೇಷವಾಗಿ ಈ ಶಿಬಿರದಲ್ಲಿ ಉಚಿತವಾಗಿ ಇ.ಸಿ.ಜಿ, ರಕ್ತದೊತ್ತಡ, ಮಧುಮೇಹ ತಪಾಸಣೆ ಹಾಗೂ ಅಗತ್ಯ ಔಷಧ ವಿತರಣೆ ಮಾಡಲಾಯಿತು. ಈ ಶಿಬಿರದಲ್ಲಿ ಸ್ಥಳೀಯ 105 ಜನ ಉಚಿತ ತಪಾಸಣೆಯ ಸೌಲಭ್ಯ ಪಡೆದುಕೊಂಡರು.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು