ಬೆಳ್ತಂಗಡಿ :(ಫೆ.13) “ಎಚ್ಚರಿಕೆ”, “ಇಲ್ಲಿ ನಾಯಿ ಮರಿಗಳನ್ನು ತಂದು ಬಿಡುವವರು ನಿಮ್ಮ ಹೆಂಡತಿ ಮಕ್ಕಳನ್ನು ಇಲ್ಲಿಯೇ ತಂದು ಬಿಡಿ, ಅವರನ್ನು ಕೂಡ ನಾವು ಚೆನ್ನಾಗಿ ನೋಡಿ ಕೊಳ್ಳುತ್ತೇವೆ. (“ನಾಯಿಗಳನ್ನು ಸಾಕಲು ಯೋಗ್ಯತೆ ಇಲ್ಲದವರು ದಯವಿಟ್ಟು ನಾಯಿಗಳನ್ನು ಸಾಕಬೇಡಿ, ನಾಯಿಗೆ ಹಳಸಿದ ಅನ್ನ ಮಣ್ಣಿನಲ್ಲಿ ಹಾಕಿದರೂ ಕೂಡ ತಿಂದು ನಿಯತ್ತಿನಲ್ಲಿರುತ್ತದೆ”) ಇಂತಹದೊಂದು ಆಕ್ರೋಶದ ವಾಕ್ಯಗಳು ಬೆಳ್ತಂಗಡಿ ತಾಲೂಕು ಕೊಯ್ಯೂರು ಗ್ರಾಮದ ಪಿಜಕ್ಕಳ ಬಸ್ ನಿಲ್ದಾಣದ ಬಳಿ ಕಂಡು ಬಂದಿದೆ.
ಇದನ್ನೂ ಓದಿ: ಬೆಳ್ತಂಗಡಿ: ಯುವವಾಹಿನಿ ಬೆಳ್ತಂಗಡಿ ಘಟಕದ ಪದಪ್ರದಾನ ಸಮಾರಂಭದ ಪೂರ್ವಭಾವಿ ಸಭೆ


ಈ ಬಸ್ ನಿಲ್ದಾಣದ ಹತ್ತಿರ ಯಾರೋ ಪಾಪಿಗಳು, ಇನ್ನೂ ಕಣ್ಣು ಬಿಡದ ನಾಯಿಮರಿಗಳನ್ನು ತಂದು ಬಿಡುತ್ತಾರೆ. ಪಾಪ . ಅದೆಷ್ಟೋ ನಾಯಿ ಮರಿಗಳು ಹೊಟ್ಟೆಗೆ ಅನ್ನವಿಲ್ಲದೇ ಸತ್ತಿದೆಯೋ, ಎಷ್ಟು ನಾಯಿ ಮರಿಗಳು ವಾಹನದಡಿಗೆ ಸಿಲುಕಿ ಸತ್ತಿದೆಯೋ ಆ ದೇವರೇ ಬಲ್ಲ. ಇದನ್ನೆಲ್ಲಾ ನೋಡಿ, ಮನನೊಂದು, ಯಾರೋ ಈ ಫ್ಲೆಕ್ಸ್ ಅನ್ನು ರಸ್ತೆ ಬದಿಯಲ್ಲಿ ಹಾಕಿದ್ದಾರೆ. ಮನೆಯಲ್ಲಿ ಸಾಕಿದ ಹೆಣ್ಣು ನಾಯಿ ಹಾಕಿದ ಹೆಣ್ಣು ಮರಿಗಳನ್ನು ರಸ್ತೆ ಬದಿಯಲ್ಲಿ ಬಿಟ್ಟು , ಅದನ್ನು ಅದರ ತಾಯಿಯಿಂದ ದೂರ ಮಾಡಿ, ಅದಕ್ಕೆ ಹಾಲು ಇಲ್ಲದೆ ಅದು ಅನಾಥ ವಾಗಿ, ಕೊನೆಗೆ ನರಳಿ ನರಳಿ ಪ್ರಾಣಬಿಡುತ್ತದೆ, ಹೀಗೆ ಮಾಡುವುದರಿಂದ ಮನುಜನಿಗೆ ಸಿಗುವ ಲಾಭವಾದರೂ ಏನು?.



ಫ್ಲೆಕ್ಸ್ ಬರಹವನ್ನು ನೂರಾರು ಜನ ಕುತೂಹಲದಿಂದ ಓದಿಕೊಂಡು ಹೋಗುತ್ತಿದ್ದಾರೆ. ಫ್ಲೆಕ್ಸ್ ನಲ್ಲಿ ಮನುಜನ ಮನಸ್ಸಿಗೆ ತಲುಪುವಂತಹ ಬರಹಗಳಿವೆ. ಇದು ಕೆಲವರ ಅಮಾನವೀಯತೆಯನ್ನು ಶುಚಿಗೊಳಿಸಲು ಪ್ರೇರಣೆಯಾದರೆ, ಈ ಅನಾಮಿಕ ಫ್ಲೆಕ್ಸ್ ಹಾಕಿದವರ ಉದ್ದೇಶ ಈಡೇರಬಹುದು!! ಇದರಿಂದಲಾದರೂ ಅಲ್ಲಿ ನಾಯಿ ಮರಿಗಳನ್ನು ತಂದು ಬಿಡುವ ಬುದ್ಧಿಯನ್ನು ಬಿಡಲಿ. ರಸ್ತೆ ಬದಿಯಲ್ಲಿ ಹಾಕಲಾಗಿರುವ ಈ ಫ್ಲೆಕ್ಸ್ ಎಲ್ಲರ ಗಮನ ಸೆಳೆಯುತ್ತಿದೆ ಎಂಬುದು ಮಾತ್ರ ಸತ್ಯದ ಮಾತಾಗಿದೆ.

