ಉಜಿರೆ : ಪ್ರಕೃತಿ ವಿಕೋಪದಿಂದ ಉಂಟಾಗುವ ನೆರೆ, ಭೂ ಕುಸಿತ, ಮನೆಗಳ ಕುಸಿತ, ಪ್ರಾಕೃತಿಕ ಅಥವಾ ಮಾನವಕೃತ ಅಗ್ನಿದುರಂತಗಳು ಸಂಭವಿಸಿದಾಗ ಉಂಟಾಗುವ ಅಪಾರ ಹಾನಿಯ ತಡೆ ,ಜನ -ಜಾನುವಾರುಗಳ ರಕ್ಷಣೆ, ತೆರವು ಕಾರ್ಯಾಚರಣೆ,ತುರ್ತು ಸೌಲಭ್ಯಗಳನ್ನು ಒದಗಿಸುವ ಉದ್ದೇಶಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಕಲ್ಪನೆ ಮತ್ತು ಶ್ರೀಮತಿ ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನದಂತೆ 2020 ಜೂನ್ 21 ರಂದು ಬೆಳ್ತಂಗಡಿ ಮತ್ತು ಗುರುವಾಯನಕೆರೆ ಘಟಕಗಳೊಂದಿಗೆ ಧರ್ಮಸ್ಥಳದಲ್ಲಿ ಶೌರ್ಯತಂಡ ಲೋಕಾರ್ಪಣೆಗೊಂಡಿತು.

ಶ್ರೀ ಕ್ಷೇತ್ರ ಧರ್ಮಸ್ಥಳದ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯು ತರಬೇತಿಗೊಂಡ ಸ್ಥಳೀಯ ಸ್ವಯಂಸೇವಕರ ತಂಡದೊಂದಿಗೆ ಸೂಕ್ತ ಪರಿಕರಗಳನ್ನು ಹೊಂದಿದ್ದು ಸಂತ್ರಸ್ತ ಪ್ರದೇಶಕ್ಕೆ ತಕ್ಷಣ ಧಾವಿಸಿ ಅತ್ಯುತ್ತಮ ಸೇವಾ ಕಾರ್ಯಗಳನ್ನು ನಡೆಸುತ್ತದೆ.ಕೋವಿಡ್ ನಂತಹ ಸಂದರ್ಭದಲ್ಲಿ ವಿಶೇಷವಾದ ಸೇವಾ ಕಾರ್ಯಗಳನ್ನು ನಡೆಸಿದೆ.
ಇದಲ್ಲದೆ ಸಾಮಾಜಿಕವಾಗಿ ಉಪಯುಕ್ತವಾದ ಸ್ವಚ್ಛತೆ, ಪರಿಸರ ಜಾಗೃತಿ, ಸಾಂಕ್ರಾಮಿಕ ರೋಗಗಳ ತಡೆ ಮತ್ತು ನಿರ್ವಹಣೆ,ವ್ಯಸನ ಮುಕ್ತಗೊಳಿಸುವ ಶಿಬಿರಗಳಲ್ಲಿ ಸಹಕಾರ, ಕೆರೆ ಬಾವಿಗಳ ಸ್ವಚ್ಛತೆ, ಬಡ ಕುಟುಂಬ, ಅನಾಥರಿಗೆ ಮತ್ತು ಅಸ್ವಸ್ಥರಿಗೆ ನೆರವು, ಸರಕಾರದ ಸವಲತ್ತುಗಳನ್ನು ಕೊಡಿಸುವಲ್ಲಿ ಪ್ರಯತ್ನ, ಬರಪೀಡಿತ ಪ್ರದೇಶಗಳಲ್ಲಿ ನೆರವು ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸುತ್ತಾ ಕೇಂದ್ರ ಮತ್ತು ರಾಜ್ಯ ಸರಕಾರದ ವ್ಯವಸ್ಥೆಗಳೊಂದಿಗೆ ಸಹಕರಿಸಿಕೊಂಡು ರಾಜ್ಯದ 80 ತಾಲೂಕುಗಳಲ್ಲಿ ಕಾರ್ಯಾಚರಿಸುತ್ತಿದೆ. ಈ ರೀತಿ ಆಪತ್ಕಾಲದ ಆಪ್ತರಕ್ಷಕರಂತೆ ಸ್ಥಳೀಯವಾಗಿ ಇರುವ ಶೌರ್ಯ ತಂಡದ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಯಕ್ಷ ಭಾರತಿ ರಿ.ಕನ್ಯಾಡಿ ಬೆಳ್ತಂಗಡಿ ಸಂಸ್ಥೆಯು ದಶಮಾನೋತ್ಸವದ ಸಂದರ್ಭದಲ್ಲಿ ಉಜಿರೆ ಶ್ರೀ ರಾಮಕೃಷ್ಣ ಸಭಾಭವನದಲ್ಲಿ ಜರಗಿದ ಭಾರತ ಮಾತಾ ಪೂಜನ ವಿಶೇಷ ಕಾರ್ಯಕ್ರಮದಲ್ಲಿ ಶೌರ್ಯ ತಂಡಕ್ಕೆ ದಶಮಾನೋತ್ಸವ ಸೇವಾ ತಂಡ ಗೌರವ ನೀಡಿ ಪುರಸ್ಕರಿಸಿತು.

ಎಸ್ ಕೆ ಡಿ ಆರ್ ಡಿ ಪಿ ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ.ಪಾಯ್ಸ್ ಶೌರ್ಯ ತಂಡದ 50 ಕ್ಕಿಂತಲೂ ಹೆಚ್ಚು ಸದಸ್ಯರೊಂದಿಗೆ ಈ ಗೌರವವನ್ನು ಸ್ವೀಕರಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್ ಮಾತನಾಡಿ ಶೌರ್ಯ ತಂಡದ ಕಾರ್ಯಕ್ರಮದ ವಿವರವನ್ನು ನೀಡಿ 2 ಲಕ್ಷಕ್ಕಿಂತಲೂ ಹೆಚ್ಚು ಸೇವಾ ಕಾರ್ಯಗಳನ್ನು ರಾಜ್ಯಾದ್ಯಂತ ನಿರ್ವಹಿಸಿರುವುದಾಗಿ ತಿಳಿಸಿದರು.

ಯಕ್ಷ ಭಾರತಿ ಸಂಸ್ಥೆಯ ಕಲಾ ಮತ್ತು ಸೇವಾ ಚಟುವಟಿಕೆಗಳ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು. ಸಭಾ ಅಧ್ಯಕ್ಷತೆಯನ್ನು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀ ಶರತ್ ಕೃಷ್ಣ ಪಡ್ವೆಟ್ನಾಯ ವಹಿಸಿದ್ದರು. ಯಕ್ಷ ಭಾರತಿಯ ಅಧ್ಯಕ್ಷರಾದ ರಾಘವೇಂದ್ರ ಬೈಪಡಿತ್ತಾಯ, ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ,


ಸಂಚಾಲಕ ಮಹೇಶ್ ಕನ್ಯಾಡಿ, ಟ್ರಸ್ಟಿಗಳಾದ ಹರಿದಾಸ್ ಗಾಂಭೀರ್, ಮುರಳೀಧರ ದಾಸ್, ಶಿತಿಕಂಠ ಭಟ್ ಉಜಿರೆ, ಹರೀಶ್ ಕೊಳ್ತಿಗೆ, ಯಶೋಧರ ಇಂದ್ರ, ಕುಸುಮಾಕರ ಕುತ್ತೋಡಿ, ಭವ್ಯ ಹೊಳ್ಳ, ದಶಮಾನೋತ್ಸವ ಸಮಿತಿಯ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಬಳಂಜ, ಕಾರ್ಯದರ್ಶಿ ವಿದ್ಯಾ ಕುಮಾರ ಕಾಂಚೋಡು ಹಾಗೂ ಬಿ. ಭುಜಬಲಿ ಧರ್ಮಸ್ಥಳ, ಸುಮಂತ ಕುಮಾರ್ ಜೈನ್, ಕಲಾವಿದ ಸಬ್ಬಣಕೊಡಿ ರಾಮ ಭಟ್, ರಾಮಕೃಷ್ಣ ಭಟ್ ಚೊಕ್ಕಾಡಿ, ಸಾಂತೂರು ಶ್ರೀನಿವಾಸ ತಂತ್ರಿ ಮೊದಲಾದವರು ಉಪಸ್ಥಿತರಿದ್ದರು. ಗುರುರಾಜ ಹೊಳ್ಳ ಬಾಯಾರು ಕಾರ್ಯಕ್ರಮ ನಿರ್ವಹಿಸಿದರು.
