ಬಂಟ್ವಾಳ :(ಫೆ.15)ಡೆತ್ ನೋಟ್ ನೀಡಿದ ಸುಳಿವು ಸ್ನೇಹಿತರ ಪಾಲಿಗೆ ಯಮಸ್ವರೂಪಿಯಾದರೆ , ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬಹುದಾ? ….. ಕಳೆದ ಮೂರು ದಿನಗಳ ಹಿಂದೆ ನಡೆದ ಅವಿವಾಹಿತ ಯುವಕನ ಆತ್ಮಹತ್ಯೆ ಹಿಂದೆ ಲಕ್ಷಾಂತರ ರೂ ಹಣದ ವಹಿವಾಟಿನ ಸಾಕ್ಷ್ಯ ದೊರೆತಿದ್ದು ಆತ್ಮಹತ್ಯೆ ಪ್ರಕರಣ ತಿರುವು ಪಡೆಯುವ ಲಕ್ಷಣಗಳು ಕಂಡುಬಂದಿವೆ.

ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮ ತನಿಯ ಎಂಬಲ್ಲಿ ವಾಸವಾಗಿರುವ ಮ್ಯಾಕ್ಸಿನ್ ತಾವ್ರೋ ಅವರ ಮಗ ಜೀವನ್ ತಾವ್ರೋ ಅವರ ಆತ್ಮಹತ್ಯೆ ಹಿಂದೆ ಸ್ನೇಹಿತರ ಮಾನಸಿಕ ಕಿರುಕುಳವೇ ಕಾರಣ ಎಂಬ ಆರೋಪ ವ್ಯಕ್ತವಾಗಿದ್ದು, ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.

ಫೆ.10 ರಂದು ಬೆಳಿಗ್ಗೆ ಮನೆಯಲ್ಲಿ ಕೋಣೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಯುವಕನಿಗೆ ಪದೇ ಪದೇ ಪೋನ್ ಕಾಲ್ ಹಾಗೂ ಮೆಸೇಜ್ ಬರುತ್ತಿದ್ದು, ಇದೇ ಕಾರಣಕ್ಕೆ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಆದರೆ ಎರಡು ದಿನಗಳ ಬಳಿಕ ಪ್ರಕರಣ ತಿರುವು ಪಡೆದಿದ್ದು, ಈತನ ಸ್ನೇಹಿತರ ಕಿರುಕುಳವೇ ಈತನ ಸಾವಿಗೆ ಕಾರಣ ಎಂದು ಈತನ ತಂದೆ ಮತ್ತೊಂದು ದೂರು ನೀಡಿದ್ದಾರೆ.

ದೂರಿನಲ್ಲಿ ಏನಿದೆ?
ಜೀವನ್ ಅವರು ಕೃಷಿ ಕೆಲಸ ಮತ್ತು ಷೇರು ಮಾರುಕಟ್ಟೆಯಲ್ಲಿ ಹಣ ವಿನಿಯೋಗಿಸಿ ಆದಾಯ ಗಳಿಸುತ್ತಿದ್ದು, ಈತನ ಸ್ನೇಹಿತರಾದ ರೋಹನ್ ಪಿಂಟೋ, ಪ್ರವೀಣ್ ಡೇಸಾ, ಸಂತೋಷ್, ಪ್ರೀತಂ ಮತ್ತು ರೋಬಿನ್ ಅವರು ಒಂದು ವರ್ಷದಿಂದ ವಿನಾ ಕಾರಣ ಮಾನಸಿಕ ಕಿರುಕುಳ ನೀಡಿದ್ದಲ್ಲದೆ, ಇಲ್ಲಸಲ್ಲದ ಆರೋಪ ಮಾಡಿ ಸುಮಾರು 60,00,000 ಹಣವನ್ನು ಹಂತಹಂತವಾಗಿ ಪಡೆದುಕೊಂಡಿದ್ದಾರೆ. ಇದಕ್ಕೂ ತೃಪ್ತಿ ಪಡದ ಅವರು ಇನ್ನೂ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇವರ ಕಿರುಕುಳ ತಾಳಲಾರದೆ, ಆರ್ಥಿಕ ಮುಗ್ಗಟ್ಟು ಎದುರಿಸಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಅವರಿಗೆ ನೀಡಿದ ಹಣದ ಮೊತ್ತವನ್ನು ಯಾವ ಉದ್ದೇಶಕ್ಕಾಗಿ ಯಾರಿಗೆ ನೀಡಿದ್ದಾನೆಂದು ಡೆತ್ ನೋಟ್ ನಲ್ಲಿ ಸ್ಪಷ್ಟವಾಗಿ ವಿವರಿಸಿ ಬರೆದಿರುವ ಬಗ್ಗೆ ಕೂಡ ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
