ಮೂಡಬಿದಿರೆ, (ಫೆ.17): ಹಾಡಹಗಲೇ ದರೋಡೆಕೋರರು ಮನೆಗೆ ನುಗ್ಗಿ ಮೂರೂವರೆ ಲಕ್ಷ ರೂ. ಮೌಲ್ಯದ ಸುಮಾರು 30 ಪವನ್ ತೂಕದ ಚಿನ್ನಾಭರಣಗಳನ್ನು ದೋಚಿದ ಘಟನೆ ತಾಲೂಕಿನ ಅಳಿಯೂರಿನ ನೇಲಡೆಯಲ್ಲಿ ಫೆ. 16ರಂದು ನಡೆದಿದೆ.

ಇದನ್ನೂ ಓದಿ: ಉಜಿರೆ: ಶ್ರೀ ಜನಾರ್ದನ ದೇವಸ್ಥಾನ ಉಜಿರೆ ಇದರ ರಾಜಗೋಪುರ “ವಿಜಯಗೋಪುರ”ದ ಶಿಲಾನ್ಯಾಸ ಕಾರ್ಯಕ್ರಮ
ಪಾಕ ಶಾಸ್ತ್ರಜ್ಞ ಪ್ರಶಾಂತ್ ಜೈನ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ.
ಪ್ರಶಾಂತ್ ಜೈನ್ ಮತ್ತು ಅವರ ಪುತ್ರ ಮೂಲ್ಕಿಯಲ್ಲಿ ಅಡುಗೆ ಕೆಲಸಕ್ಕೆ ತೆರಳಿದ್ದರು. ಹಾಗೂ ಅವರ ಪತ್ನಿ ಶಿರ್ತಾಡಿಗೆ ಹೋಗಿದ್ದರು. ಅವರ ಪುತ್ರಿಯ ಹೊರತಾಗಿ ಮನೆಯಲ್ಲಿ ಯಾರೂ ಇರಲಿಲ್ಲ. ಈ ವೇಳೆ ದರೋಡೆಕೋರರು ಈ ಕೃತ್ಯ ಎಸಗಿದ್ದಾರೆ.



ಭಾನುವಾರ ಬೆಳಗ್ಗೆ ಸುಮಾರು 10.30ರ ವೇಳೆಗೆ ಈ ಘಟನೆ ನಡೆದಿದೆ. ದರೋಡೆಕೋರರು ಪ್ರಶಾಂತ್ ಅವರ ಪುತ್ರಿಯ ಬಾಯಿಯನ್ನು ಒತ್ತಿ ಹಿಡಿದು, ಅರಿವಳಿಕೆ ಸ್ಪ್ರೇ ಮಾಡಿ ಆಕೆ ಪ್ರಜ್ಞೆ ತಪ್ಪಿದ ಬಳಿಕ ಚಿನ್ನಾಭರಣಗಳನ್ನು ದೋಚಿದ್ದಾರೆ. ಸುಮಾರು 2 ತಾಸುಗಳ ಬಳಿಕ ನೆರೆಮನೆಯ ಸಂಬಂಧಿಕ ಮಹಿಳೆ ಬಂದಿದ್ದು, ಆಗ ಎಚ್ಚರಗೊಂಡಿದ್ದ ಪ್ರಶಾಂತ್ ಅವರ ಪುತ್ರಿ ಮಹಿಳೆಗೆ ನಡೆದ ಘಟನೆ ಬಗ್ಗೆ ವಿವರಿಸಿದ್ದಾರೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಪಣಂಬೂರು ಎಸಿಪಿ ಶ್ರೀಕಾಂತ್, ಮೂಡಬಿದಿರೆ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ. ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜೊತೆಗೆ ಶ್ವಾನದಳ, ಪ್ರಾಯೋಗಿಕ ವಿಧಿ ವಿಜ್ಞಾನ ವಿಭಾಗದವರೂ ಭೇಟಿ ನೀಡಿದ್ದಾರೆ. ಮನೆಯವರ ಓಡಾಟ ಗಮನಿಸಿದ್ದ ಪರಿಚಿತರೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
