ವಿಟ್ಲ:(ಫೆ.17) ಸಿಂಗಾರಿ ಬೀಡಿ ಮಾಲಕನ ಮನೆಯಲ್ಲಿ ಇಡಿ ಅಧಿಕಾರಿಗಳ ಹೆಸರಿನಲ್ಲಿ 30 ಲಕ್ಷ ರೂಪಾಯಿ ದರೋಡೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.

ದರೋಡೆ ಪ್ರಕರಣದ ಕಿಂಗ್ ಪಿನ್ ಸೇರಿದಂತೆ ಮೂವರು ಆರೋಪಿಗಳನ್ನು ದಕ್ಷಿಣ ಕನ್ನಡ ಪೊಲೀಸರು ಬಂಧಿಸಿದ್ದು, ಕೇರಳ ಮೂಲದ ಎಎಸ್ ಐ ಪ್ರಕರಣದ ಮಾಸ್ಟರ್ ಮೈಂಡ್ ಎಂಬ ಆಘಾತಕಾರಿ ಅಂಶ ಬಯಲಾಗಿದೆ.

ಇಡೀ ಪ್ರಕರಣದ ಮಾಸ್ಟರ್ ಮೈಂಡ್ ಕೇರಳದ ಶಫೀರ್ ಬಾಬು (48), ದರೋಡೆ ಕೃತ್ಯ ಎಸಗಲು ಮನೆಯ ಕುರಿತಾಗಿ ಮಾಹಿತಿ ನೀಡಿದ್ದ ಬಂಟ್ವಾಳ ನಿವಾಸಿ ಮೊಹಮ್ಮದ್ ಇಕ್ಬಾಲ್ (38) ಮತ್ತು ಮಂಗಳೂರಿನ ಪಡೀಲ್ ನಿವಾಸಿ ಮೊಹಮ್ಮದ್ ಅನ್ಸಾರ್(27), ಸ್ಥಳಿಯ ಆರೋಪಿ ಕೊಳ್ಳಾಡು ಬಂಟ್ವಾಳ ನಿವಾಸಿ ಸಿರಾಜುದ್ದೀನ್ (37) ಬಂಧಿತ ಆರೋಪಿಗಳಾಗಿದ್ದಾರೆ.

ಈ ಪೈಕಿ ಬಂಧಿತ ಆರೋಪಿ ಶಫೀರ್ ಬಾಬು ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯ ಕೋಡಂಗಲ್ಲೂರು ಪೊಲೀಸ್ ಠಾಣೆಯಲ್ಲಿ ಎಎಸ್ ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎನ್ನಲಾಗಿದೆ.

ಜನವರಿ 3 ರಂದು ಬಂಟ್ವಾಳ ತಾಲೂಕಿನ ಬೋಳಂತೂರು ಸಮೀಪ ಸಿಂಗಾರಿ ಬೀಡಿ ಉದ್ಯಮಿ ಸುಲೈಮಾನ್ ಅವರ ನಿವಾಸಕ್ಕೆ ತಡ ರಾತ್ರಿ ಕಾರಿನಲ್ಲಿ ಬಂದಿದ್ದ ಖದೀಮರು, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಎಂದು ನಂಬಿಸಿ ಮೂವತ್ತು ಲಕ್ಷ ರೂಪಾಯಿಗಳಿಗೂ ಅಧಿಕ ನಗದು ಮತ್ತು ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದರು.

ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಗೆ ದಕ್ಷಿಣ ಕನ್ನಡ ಎಸ್ಪಿ ಯತೀಶ್ ನಾಲ್ಕು ತನಿಖಾ ತಂಡಗಳನ್ನು ರಚಿಸಿದ್ದರು.
