ಬಂಟ್ವಾಳ:(ಫೆ.19) ಬೋಳಂತೂರು ನಾರ್ಶದ ಉದ್ಯಮಿಯ ಮನೆಗೆ ಇಡಿ ಅಧಿಕಾರಿಗಳ ಸೋಗಿನಲ್ಲಿ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನ ಸೂತ್ರಧಾರ ಕೇರಳದ ಎಎಸ್‌ಐ ಸಹಿತ ಒಟ್ಟು 7 ಮಂದಿಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಮಂಗಳೂರು: 119 ಕೆಜಿ ಗಾಂಜಾ ಸಹಿತ ನಾಲ್ವರು ಆರೋಪಿಗಳ ಬಂಧನ
ಪ್ರಕರಣದಲ್ಲಿ ಸುಮಾರು 30 ಲಕ್ಷ ರೂ. ಅನ್ನು ದರೋಡೆಮಾಡಲಾಗಿದ್ದು, ದರೋಡೆಕೋರರಿಂದ ಕೇವಲ 5 ಲಕ್ಷ ರೂ ಅನ್ನು ಮಾತ್ರ ವಶಪಡಿಸಿಕೊಳ್ಳಲಾಗಿದೆ.

ದಾಖಲಾದ ದೂರಿನ ಪ್ರಕಾರ ಇನ್ನೂ 25 ಲಕ್ಷ ರೂ.ನಷ್ಟು ಮೊತ್ತ ವಸೂಲಾಗಬೇಕಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಘಟನೆ ನಡೆದ 20 ದಿನಗಳ ಬಳಿಕ ಮೊದಲ ಆರೋಪಿ ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ಕೇರಳದ ಕೊಲ್ಲಂ ಮೂಲದ ಅನಿಲ್ ಫೆರ್ನಾಂಡಿಸ್ ಎಂಬಾತನನ್ನು ಬಂಧಿಸಲಾಗಿದೆ. ಈತನ ಬಳಿಯಲ್ಲಿದ್ದ 5 ಲಕ್ಷ ರೂ. ಹಾಗೂ ಒಂದು ಮಾರುತಿ ಎರ್ಟಿಗಾ ಕಾರನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.

ಕೇರಳದ ಎಎಸ್‌ಐ ಪ್ರಕರಣದ ಮೂಲ ಸೂತ್ರಧಾರನಾಗಿದ್ದರೂ, ಮುಖ್ಯವೆಂಬಂತೆ ಈತ ನಕಲಿ ಇ.ಡಿ. ದಾಳಿಯ ಸಂದರ್ಭ ಸ್ಥಳದಲ್ಲಿರಲಿಲ್ಲ. ಈತ ದರೋಡೆ ತಂಡಕ್ಕೆ ಸಂಪೂರ್ಣ ತರಬೇತಿ ನೀಡಿ ದಾಳಿಗೆ ಸಿದ್ಧಪಡಿಸಿದ್ದ. ಅಷ್ಟೇ ಅಲ್ಲದೆ ದಾಳಿಗೆ ಮೊದಲು ಮಂಗಳೂರಿಗೆ ಆಗಮಿಸಿ ಮಾಲೊಂದರಲ್ಲಿ ತನ್ನ ತಂಡದ ದರೋಡೆಕೋರರ ಜತೆಗೆ ಸ್ಥಳೀಯರಿಗೆ ಮಾರ್ಗದರ್ಶನ ಮಾಡಿದ್ದ ಎನ್ನಲಾಗಿದೆ.

ಇನ್ನು ದರೋಡೆ ಪ್ರಕರಣದಲ್ಲಿ ಕೊಲ್ಲಂ ಮೂಲದ ಸಚಿನ್, ಶಬಿನ್ ಹಾಗೂ ಅನಿಲ್ ಫೆರ್ನಾಂಡಿಸ್ ನೇರ ಭಾಗಿಯಾಗಿದ್ದು ಇವರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಸದ್ಯ ಇತರರ ಪತ್ತೆಗಾಗಿ ಜಿಲ್ಲಾ ಪೊಲೀಸ್ ತಂಡಗಳು ಕೇರಳದತ್ತ ವಿಚಾರಣೆಗೆ ತೆರಳಲಿವೆ ಎನ್ನಲಾಗಿದೆ.

