ದಾವಣಗೆರೆ (ಫೆ. 19) : ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ಚಲಾಯಿಸಲು ಅವಕಾಶ ಕೊಡುವ ಪೋಷಕರ ವಿರುದ್ಧ ಟ್ರಾಫಿಕ್ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಅಪ್ರಾಪ್ತರು ವಾಹನ ಚಲಾಯಿಸಿ ಅಪಘಾತಗಳಾಗುವ ಸಾಧ್ಯತೆಯನ್ನು ತಡೆಯುವುದಕ್ಕಾಗಿ ಸಾರಿಗೆ ಇಲಾಖೆಯೂ ಕಠಿಣ ನಿಯಮಗಳನ್ನು ರೂಪಿಸಿದೆ.ದಾವಣಗೆರೆಯಲ್ಲಿ, ಮಗಳಿಗೆ ಆಕ್ಟಿವಾ ಹೋಂಡಾ ಚಾಲನೆಗೆ ಅವಕಾಶ ಮಾಡಿಕೊಟ್ಟ ತಾಯಿಗೆ ಸಂಚಾರ ಪೊಲೀಸರು 25 ಸಾವಿರ ರೂ. ದಂಡ ವಿಧಿಸಿದ್ದಾರೆ.

ಇದನ್ನೂ ಓದಿ: ತುಮಕೂರು: ಪ್ರೀತಿಸಿ ಮದ್ವೆಯಾಗಿದ್ದ ಪತ್ನಿ ಸ್ನೇಹಿತನ ಜತೆ ಪರಾರಿ
ದಾವಣಗೆರೆ ನಗರದ ಗಡಿಯಾರ ಕಂಬದ ಬಳಿ ಅಪ್ರಾಪ್ತ ಬಾಲಕಿಯೊಬ್ಬಳು ಆಕ್ಟಿವಾ ಹೋಂಡಾ ಚಲಾಯಿಸುತ್ತಿದ್ದಳು. ಅದನ್ನು ತಡೆದ ಟ್ರಾಫಿಕ್ ಪೊಲೀಸರು ದಾಖಲೆ ಪರಿಶೀಲನೆ ಮಾಡಿದ್ದಾರೆ. ಇದೇ ವೇಳೆ, ಅದನ್ನು ಚಲಾಯಿಸುತ್ತಿರುವುದು ಅಪ್ರಾಪ್ತ ಬಾಲಕಿ ಎಂಬುದು ದೃಢವಾಗಿದೆ. ನಂತರ ಪೊಲೀಸರು ಆಕೆಯ ತಾಯಿಗೆ 25 ಸಾವಿರ ರೂ. ದಂಡ ವಿಧಿಸಿದ್ದಾರೆ. ದಾವಣಗೆರೆ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.




ಸಂಚಾರ ನಿಯಮಗಳಲ್ಲಿ ಏನಿದೆ?
ಕರ್ನಾಟಕದಲ್ಲಿ, ಸಣ್ಣ ಮಕ್ಕಳಿಗೆ ವಾಹನ ಚಲಾಯಿಸಲು ಅವಕಾಶ ನೀಡುವುದು ಅಪರಾಧವಾಗಿದೆ. ಅಂಥ ಪೋಷಕರು ಅಥವಾ ಪಾಲಕರಿಗೆ ಕಠಿಣ ದಂಡವನ್ನು ವಿಧಿಸಲು ಅವಕಾಶವಿದೆ. ‘ಮೋಟಾರು ವಾಹನಗಳ ಕಾಯ್ದೆ, 1988’ ರ ಅಡಿಯಲ್ಲಿ, ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸಿದರೆ, ವಾಹನದ ಮಾಲೀಕರಿಗೆ (ಸಾಮಾನ್ಯವಾಗಿ ಪೋಷಕರು) ಮೂರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 25,000 ರೂ. ಮೇಲ್ಪಟ್ಟು ದಂಡ, ಅಥವಾ ಎರಡೂ ಶಿಕ್ಷೆಯನ್ನು ವಿಧಿಸಬಹುದಾಗಿದೆ. ವಾಹನದ ನೋಂದಣಿಯನ್ನು 12 ತಿಂಗಳ ಅವಧಿಗೆ ಅಮಾನತಿನಲ್ಲಿ ಇಡುವುದಕ್ಕೂ ಅವಕಾಶವಿದೆ.
