ಹುಬ್ಬಳ್ಳಿ:(ಫೆ.19) ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ಒಂದು ವಿಚಿತ್ರ ಲವ್ ಸ್ಟೋರಿ ಪ್ರಕರಣ ಬೆಳಕಿಗೆ ಬಂದಿತ್ತು. ಮುದಿ ಅಂಕಲ್ ಮೊಮ್ಮಗಳ ವಯಸ್ಸಿನ 18 ವರ್ಷದ ಹುಡುಗಿ ಜೊತೆ ಲವ್ವಿ ಡವ್ವಿ ಅಂತ ಶುರು ಮಾಡಿದ್ದು, ಆ ಯುವತಿಯ ತಲೆಕೆಡಿಸಿ ಆಕೆಯೊಂದಿಗೆ ಅಂಕಲ್ ಊರು ಬಿಟ್ಟು ಪರಾರಿಯಾಗಿಯಾಗಿದ್ದನು. ಅಚ್ಚರಿಯೇನೆಂದರೆ ಇವರಿಬ್ಬರು ಮದುವೆಯಾಗಿ ಪತ್ತೆಯಾಗಿದ್ದರು. ಆದರೆ ಇದೀಗ ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಮದುವೆಯಾದ ಬಳಿಕ ಯುವತಿಯು ಇದೀಗ ತಪ್ಪಿಸಿಕೊಂಡು ಮನೆಗೆ ಬಂದಿದ್ದು ಭಯಾನಕ ಕಥೆ ಯೊಂದನ್ನು ತೆರೆದಿಟ್ಟಿದ್ದಾಳೆ.

ಅಲ್ಲದೆ ಆಕೆ ಹಲವು ಭಯಾನಕ ಕಥೆಗಳನ್ನು ತೆರೆದಿಟ್ಟಿದ್ದಾಳೆ. ಅದೇನೆಂದರೆ ಹುಡುಗಿಯನ್ನು ಬಲವಂತವಾಗಿ ಮದುವೆಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲದೆ ಮನೆಯೊಂದರಲ್ಲಿ ಕೂಡಿ ಹಾಕಿ 15 ದಿನ ಚಿತ್ರ ಹಿಂಸೆ ನೀಡಿದ್ದಾನೆ ಎನ್ನಲಾಗಿದೆ.
ಯುವತಿ ಹೇಳಿದ್ದೇನು?
ಓಡಿಹೋಗಿ ಮದುವೆ ಆದ ಎರಡೇ ದಿನಕ್ಕೆ ಅಂಕಲ್ ಪ್ರಕಾಶ್‌ನ ನಿಜ ಬಣ್ಣ ಬಯಲಾಗಿದೆ. ಮದುವೆಯಾಗಿದ್ದೇ ತಡ, ತನ್ನ ಹೆಂಡತಿಗೆ ನೀಡಿದಂತೆ ಯುವತಿಗೂ ಟಾರ್ಚರ್ ಕೊಡಲಾರಂಭಿಸಿದ್ದನಂತೆ ಪ್ರಕಾಶ್. ಅಲ್ಲದೆ ನಿತ್ಯ ಅಸಭ್ಯ ವಿಡಿಯೋ ಚಿತ್ರಗಳನ್ನು ತೋರಿಸಿ ಯುವತಿ ಮೇಲೆ ರಾಕ್ಷಸರಂತೆ ವರ್ತಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಅಂಕಲ್ ನಿಂದ ನರಕಯಾತನೆ ಅನುಭವಿಸಿದ 18 ವಯಸ್ಸಿನ ಯುವತಿ, ಅಲ್ಲಿಂದ ತಪ್ಪಿಸಿಕೊಂಡು ಮರಳಿ ತಂದೆ-ತಾಯಿ ಬಳಿ ಬಂದಿದ್ದಾಳೆ. ಈ ವೇಳೆ, ನನಗೆ ಮೋಸ ಮಾಡಿ ಮದುವೆ ಮಾಡಿಕೊಂಡಿದ್ದಾನೆ. ಮೋಸ ಮಾಡಿದ ಅಂಕಲ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಯುವತಿ ಆಗ್ರಹಿಸಿದ್ದಾಳೆ. ಕೊಲ್ಲಾಪುರದಲ್ಲಿದ್ದ ನನ್ನನ್ನು ಫೋನ್ ಮೂಲಕ ಕರೆಸಿಕೊಂಡಿದ್ದ. ಬಳಿಕ ಅಜ್ಞಾತ ಸ್ಥಳಕ್ಕೆ ಕೊಂಡೊಯ್ದಿದ್ದ. ಆ ನಂತರ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡು ಕೋಣೆಯೊಂದರಲ್ಲಿ ಕೂಡಿಹಾಕಿ ಹಿಂಸೆ ನೀಡಿದ್ದಾನೆ ಎಂದು ಆರೋಪಿಸಿದ್ದಾಳೆ.


ನಾನು ಕಾಣೆಯಾಗಿದ್ದ ಕುರಿತು ನಮ್ಮ ತಂದೆ ತಾಯಿ ಹೇಳಿಕೆ ನೀಡಿದ್ದರು. ಅದು ಟಿವಿಯಲ್ಲಿ ಬಂದ ನಂತರ ಅದನ್ನು ತೋರಿಸಿ ನನಗೆ ಧಮ್ಕಿ ಹಾಕಿದ್ದ. ನಿಮ್ಮ ತಂದೆ ತಾಯಿ ನನ್ನ ಮರ್ಯಾದೆ ತೆಗೆಯುತ್ತಿದ್ದಾರೆ, ಅವರ ಮೇಲೆ ದೂರು ದಾಖಲಿಸುವಂತೆಯೂ ಹೇಳಿದ್ದ. ಅದನ್ನೇ ನೆಪ ಮಾಡಿಕೊಂಡು ನಾನು ಹುಬ್ಬಳ್ಳಿಗೆ ಬಂದಿದ್ದೇನೆ. ಸದ್ಯ ಪ್ರಕಾಶ್ ಏನು ಅಂತ ನನಗೆ ಈಗ ಗೊತ್ತಾಗಿದೆ. ನನ್ನ ಜೀವನ ಹಾಳು ಮಾಡಿದ ಪ್ರಕಾಶ್ ಮೇಲೆ ಕಠಿಣ ಕ್ರಮವಾಗಲೇಬೇಕು. ಬೇರೆ ಯಾರಿಗೂ ಈ ರೀತಿ ಆಗದಂತೆ ಪೊಲೀಸರು ಎಚ್ಚರ ವಹಿಸಲಿ ಯುವತಿ ಆಗ್ರಹಿಸಿದ್ದಾಳೆ.


ಪ್ರೇಮ್ ಕಹಾನಿ ಶುರುವಾಗಿದ್ದು ಹೇಗೆ?
ಕರೀಷ್ಮಾ ಹಾಗೂ ಪ್ರಕಾಶ್ ಈ ಮೊದಲೇ ಪ್ರೀತಿ, ಪ್ರೇಮ ಅಂತ ಇದ್ದರು. ಮದುವೆಯಾಗಿ ಎರಡು ಮಕ್ಕಳಿರುವ ಆರೋಪಿ ಪ್ರಕಾಶ್, 2 ವರ್ಷದ ಹಿಂದೆಯೇ ಕರೀಷ್ಮಾಳನ್ನಪ್ರೀತಿಸುತ್ತಿದ್ದ. ಆಗ ಕರೀಷ್ಮಾ ಅಪ್ರಾಪ್ತೆಯಾಗಿದ್ದಳು. ಇದಕ್ಕೆ ಹುಡುಗಿಯ ಮನೆಯವರು ಆಕ್ಷೇಪ ವ್ಯಕ್ತಪಡಿಸಿ, ಆಕೆಯ ಮನಃ ಪರಿವರ್ತನೆ ಮಾಡಲು ಮುಂದಾಗಿದ್ದರು. ಅಷ್ಟೇ ಅಲ್ಲದೆ, ಆರೋಪಿಯ ವಿರುದ್ಧ ದೂರು ನೀಡಿದ್ದರು. ಇದರಂತೆ ಪ್ರಕಾಶನ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿತ್ತು.ಬಳಿಕ ಹುಬ್ಬಳ್ಳಿಯಲ್ಲಿಯೇ ಇದ್ದರೆ ಸಮಸ್ಯೆ ಆಗುತ್ತದೆ ಎಂದು ಹುಡುಗಿಯನ್ನು ಮನೆಯವರು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಇರುವ ಅಜ್ಜಿ ಮನೆಯಲ್ಲಿ ಬಿಟ್ಟಿದ್ದರು. ಅಂದಿನಿಂದ ಆಕೆ ಅಲ್ಲಿಯೇ ವಾಸವಾಗಿದ್ದಳು. ಆದರೆ ಆಕೆ, ಜನವರಿ 3 ರಂದು ಅಲ್ಲಿಂದ ನಾಪತ್ತೆಯಾಗಿದ್ದಳು. ಆ ಬಳಿಕ ಆಕೆಯ ಬಗ್ಗೆ ಯಾವುದೇ ಮಾಹಿತಿ ದೊರೆತಿರಲಿಲ್ಲ. ಬಳಿಕ ಕರೀಷ್ಮಾಗೆ 18 ವರ್ಷ ತುಂಬಿದ್ದರಿಂದ ಮದುವೆ ಮಾಡಿಕೊಂಡು ಪ್ರಕಾಶನ ಜೊತೆಯಲ್ಲೇ ಇರುವುದು ಗೊತ್ತಾಗಿದೆ. ಇದೀಗ ಅಂಕಲ್ನ ನಿಜ ಬಣ್ಣ ಬಯಲಾಗುತ್ತಿದ್ದಂತೆ ಯುವತಿ ಮನೆಗೆ ಬಂದು ಎಲ್ಲ ವಿಚಾರವನ್ನು ತಿಳಿಸಿದ್ದಾಳೆ.
