ಬೆಂಗಳೂರು:(ಫೆ.21) ಬೆಂಗಳೂರಿನ ವೈದ್ಯರ ಬಳಿ ಅತ್ತೆಯನ್ನು ಸಾಯಿಸಲು ಮಾತ್ರೆ ಕೇಳಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ವೈದ್ಯ ಸುನಿಲ್ ಕುಮಾರ್ ನೀಡಿದ ದೂರಿನ ಮೇರೆ ವಿಚಾರಣೆ ನಡೆಸಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ.


ಇದನ್ನೂ ಓದಿ:ಉಡುಪಿ: ರಸ್ತೆ ಅಪಘಾತದಲ್ಲಿ ಬ್ರೈನ್ ಡೆಡ್
ಅತ್ತೆಯನ್ನು ಸಾಯಿಸಲು ಮಾತ್ರೆ ಕೇಳಿದ ಮಹಿಳೆ ಸ್ವತಃ ತಾನೇ ಸಾಯಲು ನಿರ್ಧರಿಸಿದ್ದರು ಎನ್ನುವ ಆಘಾತಕಾರಿ ವಿಚಾರ ತಿಳಿದು ಬಂದಿದೆ.
ಮಹಿಳೆಯನ್ನು ವಿಚಾರಣೆ ಮಾಡಿದಾಗ ಅತ್ತೆಯನ್ನು ಸಾಯಿಸಲು ಅಲ್ಲ, ತಾನೇ ಸಾಯಬೇಕಾಗಿತ್ತು ಹಾಗಾಗಿ ವೈದ್ಯರ ಬಳಿ ಮಾತ್ರೆ ಕೇಳಿದ್ದೆ ಎಂದು ಮಹಿಳೆ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. ಇನ್ನು ವಿಚಾರಣೆ ವೇಳೆ ಈ ಮಹಿಳೆ ಖಿನ್ನತೆಗೆ ಒಳಗಾಗಿರುವುದು ಕೂಡ ತಿಳಿದು ಬಂದಿದೆ. ಈ ಹಿಂದೆ ಎರಡು ಬಾರಿ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದ ಮಹಿಳೆ, ಒಮ್ಮೆ ಮನೆಯನ್ನು ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ.
ಸಂಪೂರ್ಣವಾಗಿ ಖಿನ್ನತೆಗೆ ಜಾರಿದ್ದ ಮಹಿಳೆ ಗೂಗಲ್‌ನಲ್ಲಿ ಡಾಕ್ಟರ್‌ಗಳ ನಂಬರ್ ಹುಡುಕಿದ್ದು, ಆ ಬಳಿಕ ಡಾ.ಸುನಿಲ್ ನಂಬರ್ ಸಿಕ್ಕಿ ಮೆಸೇಜ್ ಮಾಡಿ ಸಾಯಿಸುವ ಮಾತ್ರೆ ಕೇಳಿದ್ದಾಳೆ. ಆದರೆ ವಿಚಾರಣೆ ವೇಳೆ ಮಹಿಳೆಯೇ ಸಾಯಲು ನಿರ್ಧರಿಸಿರುವ ಮಾಹಿತಿ ತಿಳಿದು ಬಂದಿದ್ದು, ಸದ್ಯ ಮಹಿಳೆಯನ್ನು ಕೌನ್ಸಿಲಿಂಗ್ ರವಾನಿಸಲಾಗಿದೆ.


ಏನಿದು ಪ್ರಕರಣ?
ಡಾ. ಸುನಿಲ್ ಕುಮಾರ್ ಅವರ ದೂರವಾಣಿ ಸಂಖ್ಯೆ ಪಡೆದ ಮಹಿಳೆ, ಫೆಬ್ರವರಿ 17ರಂದು ಸಂದೇಶ ಕಳುಹಿಸಿದ್ದಾಳೆ. ಈ ವೇಳೆ ಡಾ. ಸುನಿಲ್ ಕುಮಾರ್ ನೇರವಾಗಿ ಮೆಸೇಜ್ ಮಾಡಿದ ಉದ್ದೇಶವನ್ನು ಕೇಳಿದ್ದಾರೆ. ಈ ವೇಳೆ ಅತ್ತೆ ಸಾಯಿಸಲು ಎರಡೇ ಎರಡು ಮಾತ್ರೆ ಕೇಳಿದ್ದಳು. ಬಳಿಕ ವೈದ್ಯರು ತಮ್ಮ ಬೇಡಿಕೆಗೆ ಸ್ಪಂದಿಸದ ಕಾರಣ ಮಹಿಳೆ ಕೂಡಲೇ ಸಂದೇಶಗಳನ್ನು ಡಿಲೀಟ್ ಮಾಡಿ ವೈದ್ಯರ ನಂಬರ್ ಬ್ಲಾಕ್ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಈ ಮಹಿಳೆಯ ಆಲೋಚನೆಯಿಂದ ಶಾಕ್ ಆಗಿರುವ ವೈದ್ಯ ಸುನಿಲ್ ಕುಮಾರ್ ಮೆಸೇಜ್‌ಗಳು ಡಿಲೀಟ್ ಆಗುವ ಮೊದಲೇ ಎಲ್ಲವನ್ನೂ ಸ್ಕ್ರೀನ್ ಶಾಟ್ ತೆಗೆದುಕೊಂಡು ಸಂಜಯ್ ನಗರದ ಪೊಲೀಸ್ ಠಾಣೆಯಲ್ಲಿ ಮಹಿಳೆ ವಿರುದ್ಧ ದೂರು ನೀಡಿದ್ದರು.
