ಚಿಕ್ಕಮಗಳೂರು:(ಫೆ.21) ಚಿಕ್ಕಮಗಳೂರಿನಲ್ಲಿ ಬೆಂಗಳೂರು ಮೂಲದ ಯುವಕ ಹಾಗೂ ಯುವತಿಯ ಶವ ಸಿಕ್ಕ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಚಿಕ್ಕಮಗಳೂರು ತಾಲೂಕಿನ ದಾಸರಹಳ್ಳಿ ಗ್ರಾಮದಲ್ಲಿ ಯುವಕ ಮತ್ತು ಯುವತಿಯ ಶವ ಪತ್ತೆಯಾಗಿದ್ದು, ಯುವತಿಯನ್ನು ಹತ್ಯೆಗೈದು, ಯುವಕನೇ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗುತ್ತಿದೆ.

ಮೃತ ಮಧು ಮೂಲತಃ ಶಿವಮೊಗ್ಗದ ಭದ್ರಾವತಿಯವನಾಗಿದ್ದು, ಕಾರು ಡ್ರೈವರ್ ಆಗಿದ್ದ. ಮೃತ ಯುವತಿ ಪೂರ್ಣಿಮಾ ಮಾಗಡಿಯ ಖಾಸಗಿ ಹೈಸ್ಕೂಲ್‌ನಲ್ಲಿ ಶಿಕ್ಷಕಿಯಾಗಿದ್ದರು. ಇಬ್ಬರು ಅಕ್ಕಪಕ್ಕದ ಮನೆಯವರಾಗಿದ್ದರು. ಇಬ್ಬರ ಕುಟುಂಬದ ಜೊತೆ ವಿಶ್ವಾಸ-ಸ್ನೇಹ ಇತ್ತು. ಅವರ ಮನೆಯ ಎಲ್ಲಾ ಕಾರ್ಯಕ್ರಮಗಳಲ್ಲೂ ಮಧು ಭಾಗವಹಿಸುತ್ತಿದ್ದ.

ಕಳೆದ ಏಳೆಂಟು ತಿಂಗಳ ಹಿಂದೆ ಪೂರ್ಣಿಮಾ ತಂಗಿಯ ಮದುವೆಯಾಗಿತ್ತು. ಆ ಮದುವೆಯಲ್ಲೂ ಮಧು ಭಾಗಿಯಾಗಿ ಎಲ್ಲಾ ಕೆಲಸ ಮಾಡಿದ್ದನು. ಮದುವೆಗೆ ಈತನ ಕಾರನ್ನು ಬಾಡಿಗೆ ಪಡೆದಿದ್ದರು.

ಕಳೆದ ಬುಧವಾರ ಸಂಜೆ ಶಾಲೆ ಮುಗಿಸಿ ಪೂರ್ಣಿಮಾ ಮನೆಗೆ ಬರುತ್ತಿದ್ದಾಗ, ಶಾಲೆಯಿಂದ 20 ಕಿ.ಮೀ. ದೂರದ ಊರಿಗೆ ಡ್ರಾಪ್ ಮಾಡುತ್ತೇನೆ ಎಂದು ಕರೆದುಕೊಂಡು ಹೋಗಿದ್ದಾನೆ. ಅಲ್ಲಿಂದ ನೇರವಾಗಿ ಚಿಕ್ಕಮಗಳೂರಿಗೆ ಬಂದಿದ್ದಾನೆ. ಈ ವೇಳೆ ಯುವತಿಯನ್ನು ಕೊಲೆ ಮಾಡಿದ್ದು, ಯುವತಿಯ ಕುತ್ತಿಗೆ ಮೇಲೆ ಕತ್ತು ಹಿಸುಕಿರುವ ಗುರುತುಗಳು ಪತ್ತೆಯಾಗಿವೆ.

ಸದ್ಯ ಮೇಲ್ನೋಟಕ್ಕೆ ಹುಡುಗಿ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಆಕೆಯನ್ನು ಕೊಲೆ ಮಾಡಿ, ಆತ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

