ಬೆಳ್ತಂಗಡಿ :(ಫೆ.22) ಬಹುವರ್ಷಗಳಿಂದ ಅಗತ್ಯತೆ ಇದ್ದ ಬೆಳ್ತಂಗಡಿ ಪರಿಸರದ ಸರ್ಕಾರಿ ಶಾಲೆಗಳಿಗೆ ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ ರೋಟರಿ ಕ್ಲಬ್ ಇಂದಿರಾನಗರ ಬೆಂಗಳೂರು ಮತ್ತು ನುವೇರ್ ಸಿಸ್ಟಮ್ಸ್ ಎಲ್ ಎಲ್ ಪಿ ಸಾಫ್ಟ್‌ವೇರ್ ಕಂಪನಿ ಬೆಂಗಳೂರು ಸಹಭಾಗಿತ್ವದಲ್ಲಿ ಕಂಪ್ಯೂಟರ್ ಗಳನ್ನು ಹಸ್ತಾಂತರಿಸಲಾಯಿತು. ಈ ಕಾರ್ಯಕ್ರಮವು ಕಾಶಿಬೆಟ್ಟು, ರೋಟರಿ ಸೇವಾ ಭವನದಲ್ಲಿ ನಡೆಯಿತು.

ಇದನ್ನೂ ಓದಿ: ಉಡುಪಿ: ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ!!
ತಾಲೂಕಿನ ಶಾಲೆಗಳಲ್ಲಿ 40,000 ಕ್ಕೂ ಅಧಿಕ ವಿದ್ಯಾರ್ಥಿಗಳು ಈಗಾಗಲೇ ವಿಧ್ಯಾಭ್ಯಾಸ ಮಾಡುತ್ತಿದ್ದಾರೆ. ಬಹುತೇಕ ಶಾಲೆಗಳಲ್ಲಿ ಶಿಕ್ಷಕರ ಹಾಗು ವಿದ್ಯಾರ್ಥಿಗಳ ಆಡಳಿತಾತ್ಮಕ ಕೆಲಸಗಳಿಗಾಗಿ ಮಾತ್ರ ಕಂಪ್ಯೂಟರ್ ಇದ್ದು,
ವಿದ್ಯಾರ್ಥಿಗಳ ಕಲಿಕೆಗೆ ಕಂಪ್ಯೂಟರ್ ಗಳ ಅಗತ್ಯತೆ ಬಹುದಿನಗಳಿಂದ ಇತ್ತು. ಈ ಅಗತ್ಯತೆಗೆ ಮನ್ನಣೆ ನೀಡಿದ ಬೆಳ್ತಂಗಡಿ ರೋಟರಿ ಸಂಸ್ಥೆಯು ತಾಲೂಕಿನ 12 ಶಾಲೆಗಳಿಗೆ 30 ಕಂಪ್ಯೂಟರ್ ಗಳನ್ನು ಕೊಡುಗೆಯಾಗಿ ನೀಡಿದೆ.ಇದು ತಾಲೂಕಿನ 2,500ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿದೆ. 13,50,000 ರೂ. ಕಂಪ್ಯೂಟರ್ ಖರೀದಿಗೆ ವಿನಿಯೋಗ ಮಾಡಲಾಗಿದೆ.
ಈ ಹಿಂದೆ ಶಿಕ್ಷಕರ ಆಡಳಿತಾತ್ಮಕ ಕೆಲಸಗಳನ್ನು ನಿರ್ವಹಿಸಲು ಕಂಪ್ಯುಟರ್ ಗಳ ತುರ್ತು ಅಗತ್ಯತತೆ ಇದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಸರಿಯಾಗಿ ಅನುದಾನ ಸಿಗದೇ ಕಳೆದ ನಾಲ್ಕು ವರ್ಷಗಳಿಂದ ಕಂಪ್ಯೂಟರ್ ಗಳ ಕೊರತೆ ಅನುಭವಿಸುತ್ತಿದ್ದ ಶಿಕ್ಷಣಾಧಿಕಾರಿಗಳ ಕಚೇರಿಯು ತನ್ನ ಇಲಾಖೆಯ ಮುಂದೆ 5 ಕಂಪ್ಯೂಟರ್ ಗಳ ಬೇಡಿಕೆಯನ್ನು ಇರಿಸಿತ್ತು. ಕಂಪ್ಯೂಟರ್ ಗಳು ಲಭಿಸಿದೆ ಇದ್ದುದರಿಂದ , ಬೆಳ್ತಂಗಡಿ ರೋಟರಿ ಕ್ಲಬ್ ಗೆ ಮನವಿ ನೀಡಿತ್ತು. ಮನವಿಯ ಬೆನ್ನಲ್ಲೆ ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಕಂಪ್ಯೂಟರ್ ಗಳನ್ನು ನೀಡಿ ಸಹಕರಿಸಲಾಗಿತ್ತು.
ಕಂಪ್ಯೂಟರ್ ಗಳನ್ನು ಹಸ್ತಾಂತರಿಸಿ ಮಾತನಾಡಿದ ರೋಟರಿ ಕ್ಲಬ್ ಇಂದಿರಾನಗರ ಬೆಂಗಳೂರಿನ ರೋ. ಸುಬ್ಬು ಕೃಷ್ಣನ್, ಕೋವಿಡ್ ನಂತರದಿಂದ ಕಂಪ್ಯೂಟರ್ ಗಳ ಅಗತ್ಯತೆ ಎಷ್ಟಿದೆ ಎಂಬುದು ಈಗಾಗಲೇ ಎಲ್ಲರಿಗು ತಿಳಿದಿದೆ. ನಗರದ ವಿದ್ಯಾರ್ಥಿಗಳು ಸಾಮಾನ್ಯವಾಗಿ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುತ್ತಾರೆ. ಆದರೆ ಬೆಳ್ತಂಗಡಿ ಪರಿಸರದಂತ ಹಳ್ಳಿಯ ಶಾಲೆಗಳ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಬೆಳೆಯಬೇಕು. ಒಟ್ಟಾರೆಯಾಗಿ ಈ ಕಂಪ್ಯೂಟರ್ ಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಉಪಯೋಗವಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ರೋಟರಿ ಕ್ಲಬ್ ಇಂದಿರಾನಗರ ಬೆಂಗಳೂರು ಇದರ ಅಧ್ಯಕ್ಷೆ ರೋ. ಸುಪ್ರಿಯಾ ಖಾಂಡರಿ ಮಾತನಾಡಿ, ರೋಟರಿ ಸಂಸ್ಥೆಗಳು ಸದಾ ಸಾಮಾಜಿಕ ಸೇವೆ ಮತ್ತು ಬೆಳವಣಿಗೆಯೊಂದಿಗೆ ತಳುಕು ಹಾಕಿಕೊಂಡಿದೆ. ರೋಟರಿ ಯಿಂದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾದಾಗ ಮೂಲ ರೋಟರಿಯ ಉದ್ದೇಶವು ಈಡೇರಿದಂತಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ ಮಾತನಾಡಿ, ಕಂಪ್ಯೂಟರ್ ವ್ಯವಸ್ಥೆಗಳು ಬೆಳ್ತಂಗಡಿಗೆ ಬಂದ ಆರಂಭದ ದಿನಗಳು ಮತ್ತು ಅಂದಿನ ಸಂದರ್ಭದಲ್ಲಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು, ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ದಿವಂಗತ ಡಾ.ಯಶೋವರ್ಮರು ಬೆಳ್ತಂಗಡಿ ಯಂತಹ ಹಳ್ಳಿಯ ಪರಿಸರದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಎಷ್ಟು ಮುಖ್ಯ ಎಂಬ ಸಲುವಾಗಿ ಕಾಲೇಜುಗಳ ಗ್ರಂಥಾಲಯದಲ್ಲಿ ಟ್ಯಾಬ್ ಗಳ ಬಳಕೆ , ಕಂಪ್ಯೂಟರ್ ಲ್ಯಾಬ್ ಗಳ ಸ್ಥಾಪನೆ ಇತ್ಯಾದಿ ದೂರದೃಷ್ಟಿತ್ವದ ಕಾರ್ಯಗಳನ್ನು ನೆನಪಿಸಿಕೊಂಡರು.
ಇದೇ ಸಂದರ್ಭದಲ್ಲಿ ದಿಡುಪೆಯ ಕಡಿರುದ್ಯಾವರ ಸರಕಾರಿ ಶಾಲೆಗೆ ಬೆಳ್ತಂಗಡಿ ರೋಟರಿ ಕ್ಲಬ್ ನ ಸದಸ್ಯ ರೋ. ಕಿರಣ್ ಹೆಬ್ಬಾರ್ ಯು.ಪಿ.ಎಸ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿಯ ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್ ಗಳನ್ನು ನೀಡಲು ಅನುಕೂಲ ಮಾಡಿಕೊಟ್ಟ ರೋಟರಿ ಕ್ಲಬ್ ಇಂದಿರಾನಗರ ಬೆಂಗಳೂರಿನ ರೋ. ಸುಬ್ಬು ಕೃಷ್ಣನ್ ರವರನ್ನು ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದದಲ್ಲಿ ಅನೇಕ ಶಾಲೆಯ ಶಿಕ್ಷಕರು, ಎಸ್.ಡಿ. ಎಂ.ಸಿ ಸದಸ್ಯರು ಮತ್ತು ಬೆಳ್ತಂಗಡಿ ರೋಟರಿ ಕ್ಲಬ್ ಸದಸ್ಯರು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ವಲಯ ಸೇನಾನಿ ರೋ. ಮನೋರಮಾ ಭಟ್ ನಿರೂಪಿಸಿ, ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ಕುಮಾರ್ ರಾವ್ ವಂದಿಸಿದರು.

ಪ್ರಸ್ತುತ ಸಂದರ್ಭದಲ್ಲಿ ಕಂಪ್ಯೂಟರ್ ಶಿಕ್ಷಣ ಎಲ್ಲಾ ವಿದ್ಯಾರ್ಥಿಗಳಿಗೂ ಅತ್ಯವಶ್ಯಕವಾಗಿದೆ. ತಂತ್ರಜ್ಞಾನದಲ್ಲಿ ಪ್ರತಿನಿತ್ಯ ಹೊಸ ಹೊಸ ಬೆಳವಣಿಗೆಯನ್ನು ನಾವು ಕಾಣಬವುದು. ಈ ಎಲ್ಲಾ ಮಾಹಿತಿ ಮತ್ತು ಜ್ಞಾನ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕೈಗೆಟುಕದ ತುತ್ತಾಗಬಾರದು ಎಂಬ ಉದ್ದೇಶದಿಂದ ಈ ಕಂಪ್ಯೂಟರ್ ಗಳನ್ನು ನೀಡಲಾಗಿದೆ. ಈ ಎಲ್ಲಾ ಕಂಪ್ಯೂಟರ್ ಗಳು ವಿಶೇಷವಾಗಿ ವಿದ್ಯಾರ್ಥಿಗಳ ಕಲಿಕೆ ಮಾತ್ರ ಉಪಯೋಗವಾಗಬೇಕು ಎಂಬುದು ಸಂಸ್ಥೆಯ ಉದ್ದೇಶವಾಗಿದೆ ಎಂದು ರೋಟರಿ ಕ್ಲಬ್ ಬೆಳ್ತಂಗಡಿಯ ಅಧ್ಯಕ್ಷರಾದ ಪೂರನ್ ವರ್ಮ ಹೇಳಿದರು.


ಬೆಳ್ತಂಗಡಿ ರೋಟರಿ ಸಂಸ್ಥೆಯು ಈಗಾಗಲೇ ಸ್ಕಾಲರ್ಶಿಪ್ ವಿತರಣೆ, ಶಾಲೆಗಳ ನವೀಕರಣ, ಶಾಲಾ ಕೊಠಡಿಗಳ ನಿರ್ಮಾಣ, ನೂತನ ಶೌಚಾಲಯದ ನಿರ್ಮಾಣದಂತಹ ಅನೇಕ ಸೇವಾ ಕಾರ್ಯಗಳನ್ನು ತಾಲೂಕಿನ ಸರಕಾರಿ ಶಾಲೆಗಳಿಗೆ ಮಾಡುತ್ತಾ ಬಂದಿದೆ. ಈಗ ಬಹು ದಿನಗಳಿಂದ ಅವಶ್ಯಕತೆ ಇದ್ದ ಕಂಪ್ಯೂಟರ್ ವ್ಯವಸ್ಥೆಯನ್ನು ಶಾಲೆಗಳಿಗೆ ಕಲ್ಪಿಸಿ ಕೊಟ್ಟಿರುವುದು ವಿದ್ಯಾರ್ಥಿಗಳಿಗೆ ಹಾಗು ಶಿಕ್ಷಕರಿಗೆ ಅತ್ಯಂತ ಸಂತಸ ಮತ್ತು ಉಪಕಾರಿಯಾಗಿದೆ. ಇದರ ಲಾಭವನ್ನು ವಿದ್ಯಾರ್ಥಿಗಳೇ ಪಡೆಯಲಿದ್ದಾರೆ. ರೋಟರಿ ಸಂಸ್ಥೆಗೆ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಇಲಾಖೆಯ ವತಿಯಿಂದ ಕೃತಜ್ಞತೆಯನ್ನು ತಿಳಿಸುತ್ತೇವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ತಾರಕೇಸರಿ ಹೇಳಿದರು.

- 12 ಸರ್ಕಾರಿ ಶಾಲೆಗಳಗೆ ರೋಟರಿ ಯಿಂದ ಕೊಡುಗೆ
- ರೋ. ಸುಬ್ಬು ಕೃಷ್ಣನ್ ದಂಪತಿಗಳಿಂದ ಹಸ್ತಾಂತರ
- 2,500 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಪಯೋಗ
- 13,50,000 ರೂ. ಕಂಪ್ಯೂಟರ್ ಖರೀದಿಗೆ ವಿನಿಯೋಗ
ತಾಲೂಕಿನ ಕಂಪ್ಯೂಟರ್ ಸ್ವೀಕೃತ ಶಾಲೆಗಳು :
1. ಸರ್ಕಾರಿ ಮಾದರಿ ಶಾಲೆ ಬೆಳ್ತಂಗಡಿ - 5ಕಂಪ್ಯೂಟರ್
2. ಸರ್ಕಾರಿ ಹಿ. ಪ್ರಾ. ಶಾಲೆ ಕೊಯ್ಯೂರು - 3 ಕಂಪ್ಯೂಟರ್
3. ಹಳೆ ಪೇಟೆ ಕಿ. ಪ್ರಾ. ಶಾಲೆ - 1 ಕಂಪ್ಯೂಟರ್
4. ಅಳದಂಗಡಿ ಹಿ. ಪ್ರಾ. ಶಾಲೆ - 2 ಕಂಪ್ಯೂಟರ್
5. ಕಿರಿಯಾಡಿ ಹಿ. ಪ್ರಾ. ಶಾಲೆ - 1 ಕಂಪ್ಯೂಟರ್
6. ಮಿತ್ತಬಾಗಿಲು ಹಿ.ಪ್ರಾ ಶಾಲೆ - 5 ಕಂಪ್ಯೂಟರ್
7. ಅರಸಿನಮಕ್ಕಿ ಹಿ. ಪ್ರಾ. ಶಾಲೆ - 1 ಕಂಪ್ಯೂಟರ್
8. ದಿಡುಪೆ ಹಿ. ಪ್ರಾ ಶಾಲೆ - 2 ಕಂಪ್ಯೂಟರ್
9. ಬಂಗಾಡಿ ಹಿ. ಪ್ರಾ. ಶಾಲೆ - 2 ಕಂಪ್ಯೂಟರ್
10. ಕೊಯ್ಯೂರು ಕಿ.ಪ್ರಾ. ಶಾಲೆ - 5 ಕಂಪ್ಯೂಟರ್
11. ನಿಟ್ಟಡೆ ಹಿ. ಪ್ರಾ.ಶಾಲೆ ವೇಣೂರು - 2 ಕಂಪ್ಯೂಟರ್
12. ಕೊಯ್ಯೂರು ಶಾಲೆ ದೇವಸ್ಥಾನ - 1 ಕಂಪ್ಯೂಟರ್
