Mon. Feb 24th, 2025

Congress Leader Murder: ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ

ಬೆಂಗಳೂರು (ಫೆ.24): ಅಶೋಕನಗರದ ಗರುಡ ಮಾಲ್ ಬಳಿ ತಡರಾತ್ರಿ 1 ಗಂಟೆ ಸುಮಾರಿಗೆ ಕಾಂಗ್ರೆಸ್​ ಮುಖಂಡನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಹೈದರ್ ಅಲಿ ಕೊಲೆಯಾದ ಕಾಂಗ್ರೆಸ್​ ಮುಖಂಡ. ಹೈದರ್ ಅಲಿ ಶನಿವಾರ (ಫೆ.22) ರಾತ್ರಿ ಲೈವ್ ಬ್ಯಾಂಡ್​ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಸ್ನೇಹಿತನ ಜೊತೆಗೆ ಬೈಕ್​ನಲ್ಲಿ ತೆರಳುತ್ತಿದ್ದರು. ಈ ವೇಳೆ ಬೈಕ್​ನಲ್ಲಿ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ಕಾಂಗ್ರೆಸ್​ ಮುಖಂಡ ಹೈದರ್ ಅಲಿಯ ಮೇಲೆ ಹಲ್ಲೆ ಮಾಡಿ, ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಮಾಲಾಡಿ: ಚಾಲಕನ ನಿಯಂತ್ರಣ ತಪ್ಪಿ ಹಾಲು ಸಾಗಾಟದ ವಾಹನ ಪಲ್ಟಿ

ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿ ಅಶೋಕ ನಗರ ಠಾಣೆ ಪೊಲೀಸರು ಗಾಯದ ಮಡುವಲ್ಲಿ ಬಿದ್ದ ಹೈದರ್ ಅಲಿಯನ್ನು ಕೂಡಲೆ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಅಷ್ಟರಲ್ಲಾಗಲೇ ಹೈದರ್ ಅಲಿ ಮೃತಪಟ್ಟಿದ್ದನು. ವಿಚಾರ ತಿಳಿದು ಹೈದರ್​ ಅಲಿಯ ಬೆಂಬಲಿಗರು ಬೌರಿಂಗ್ ಆಸ್ಪತ್ರೆ ಬಳಿ ಜಮಾಯಿಸಿ ಲಾಂಗು, ಮಚ್ಚು ಹಿಡಿದು ಝಳಪಿಸಿದರು. ಬೌರಿಂಗ್ ಆಸ್ಪತ್ರೆ ಗೇಟ್ ತಳ್ಳಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿದ್ದ ಅಶೋಕನಗರ ಠಾಣೆ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು.

ಘಟನೆ ಸಂಬಂಧ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆ ಆರೋಪಿಗಳ ಪತ್ತೆಗೆ ಅಶೋಕನಗರ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಇನ್ನು, ಹೈದರ್ ಅಲಿ ಜೊತೆಯಲ್ಲಿದ್ದ ಸ್ನೇಹಿತನಿಗೂ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಆನೆಪಾಳ್ಯ ನಿವಾಸಿಯಾಗಿರುವ ಹೈದರ್ ಅಲಿ ಕಾಂಗ್ರೆಸ್​ ಶಾಸಕ ಎನ್.ಎ.ಹ್ಯಾರಿಸ್ ಜೊತೆ ಗುರುತಿಸಿಕೊಂಡಿದ್ದರು. ಚುನಾವಣೆ ಸಂದರ್ಭದಲ್ಲಿ ಎನ್​.ಎ ಹ್ಯಾರಿಸ್ ಪರ ಪ್ರಚಾರ ಮಾಡಿದ್ದರು ಎಂದು ತಿಳಿದುಬಂದಿದೆ.

ಪ್ರಕರಣ ಸಂಬಂಧ ಕೇಂದ್ರ ವಿಭಾಗದ ಡಿಸಿಪಿ ಹೆಚ್.ಟಿ.ಶೇಖರ್ ಮಾತನಾಡಿ, ಮಧ್ಯರಾತ್ರಿ 1.30ರ ಸುಮಾರಿಗೆ ಹೈದರ್ ಅಲಿ ಕೊಲೆ ನಡೆದಿದೆ. ಆನೆಪಾಳ್ಯದ ಮನೆಗೆ ಹೋಗುವಾಗ ಕಾರು ಅಡ್ಡಗಟ್ಟಿ ಕೊಲೆಗೈದಿದ್ದಾರೆ. ಕೊಲೆಯಾದ ಹೈದರ್ ಅಲಿ ಯಾವ ರಾಜಕೀಯ ಮುಖಂಡ ಅಲ್ಲ. ಹೈದರ್ ಅಲಿ ಅಣ್ಣ ಸಾಮಾಜಿಕ ಕಾರ್ಯಕರ್ತನಾಗಿದ್ದಾನೆ ಎಂದು ಹೇಳಿದರು.

ಹೈದರ್​ ಅಲಿ ವಿರುದ್ಧ 11 ಕೇಸ್​: ಡಿಸಿಪಿ
ಹೈದರ್ ಅಶೋಕನಗರ ಠಾಣಾ ವ್ಯಾಪ್ತಿಯ ರೌಡಿಶೀಟರ್ ಆಗಿದ್ದ. ಹೈದರ್ ಅಲಿ ವಿರುದ್ಧ ವಿವಿಧ ಠಾಣೆಗಳಲ್ಲಿ 11 ಕೇಸ್ ದಾಖಲಾಗಿದ್ದವು. ಮಾರಣಾಂತಿಕ ಹಲ್ಲೆ ಸೇರಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಹೈದರ್ ಅಲಿ 2014 ರಿಂದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದನು. 2022 ರಿಂದ ಯಾವುದೇ ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗಿರಲಿಲ್ಲ. ಆದರೆ, ತನ್ನ ಏರಿಯಾದಲ್ಲಿ ಹವಾ ಮೆಂಟೈನ್ ಮಾಡುತ್ತಿದ್ದನು. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕೊಲೆ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು