ಪುತ್ತೂರು:(ಫೆ.24) ಮಹಿಳೆಯ ಹೆರಿಗೆ ಸಿಸೇರಿಯನ್ ಮಾಡುವ ವೇಳೆ ಬಟ್ಟೆಯೊಂದು ಹೊಟ್ಟೆಯಲ್ಲೇ ಉಳಿದು, ಅದು ಗೊತ್ತಾದ ಬಳಿಕವೂ ವೈದ್ಯರು ನಿರ್ಲಕ್ಷ್ಯ ಮಾಡಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ತೆಂಗಿನ ಮರ ಮುರಿದು ಬಿದ್ದು 3 ವರ್ಷದ ಮಗು ಸಾವು
ಘಟನೆಯಿಂದ ನೊಂದ ಮಹಿಳೆಯ ಪತಿ ವೈದ್ಯರ ವಿರುದ್ಧ ದೂರು ನೀಡಿದ್ದಾರೆ.
ಈ ಕುರಿತು ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ಮಹಿಳೆ ಪತಿ ಗಗನ್ ದೀಪ್ ಸುದ್ದಿಗೋಷ್ಠಿ ನಡೆಸಿ, ವೈದ್ಯರ ವರ್ತನೆ ಕುರಿತು ಅಸಮಾಧಾನ ವ್ಯಕ್ತಪಡಿಸಿ, ತನ್ನ ಪತ್ನಿ ಎರಡು ತಿಂಗಳು ಅನುಭವಿಸಿದ ನರಕಯಾತನೆಯನ್ನು ವಿವರಿಸಿದರು.
ಸರ್ಜಿಕಲ್ ಬಟ್ಟೆ ಹೊಟ್ಟೆಯಲ್ಲಿ ಬಿಟ್ಟ ವೈದ್ಯ!
2024ರ ನವೆಂಬರ್ 27ರಂದು ಪುತ್ತೂರಿನ ಖಾಸಗಿ ಆಸ್ಪತ್ರೆಗೆ, ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಬಂಗಾರಡ್ಕದ ಶರಣ್ಯ ಲಕ್ಷ್ಮೀ ಎಂಬವರು ಹೆರಿಗೆಗಾಗಿ ದಾಖಲಾಗಿದ್ದರು. ಅವರಿಗೆ ಸಿಸೇರಿಯನ್ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿ, ಡಿಸೆಂಬರ್ 2 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು.
ಡಿಸ್ಚಾರ್ಜ್ ಆದ ಬಳಿಕ ಮಹಿಳೆಗ ವಿಪರೀತ ಜ್ವರದಿಂದ ಬಳಲಿದ್ದರು. ಈ ಬಗ್ಗೆ ಮಹಿಳೆಯ ಕುಟುಂಬದವರು ಹೆರಿಗೆ ಮಾಡಿಸಿದ ವೈದ್ಯ ಡಾ. ಅನಿಲ್ ಬಳಿ ವಿಚಾರಿಸಿದ್ದರು. ಜ್ವರದ ಔಷಧಿ ನೀಡುವಂತೆ ವೈದ್ಯರು ಸೂಚಿಸಿದ್ದರು. ಅಷ್ಟಾಗಿಯೂ ಜ್ವರ ಕಡಿಮೆ ಆಗದಿದ್ದಾಗ ಮನೆಯವರು ಮತ್ತೆ ವೈದ್ಯರನ್ನು ಸಂಪರ್ಕಿಸಿದ್ದಾರೆ. ಈ ವೇಳೆ, ಹೆಮಟೋಮ್ ಆಗಿರಬಹುದು ಎಂದು ಹೇಳಿದ ವೈದ್ಯರು, ಹೆಚ್ಚು ಚಿಂತೆ ಮಾಡುವ ಅಗತ್ಯವಿಲ್ಲ ಕಡಿಮೆಯಾಗುತ್ತದೆ ಎಂದು ಭರವಸೆ ನೀಡಿದ್ದರು. ಅದಾದ ನಂತರ ಬಾಣಂತಿಯ ಸಮಸ್ಯೆ ಕಡಿಮೆಯೇ ಆಗದಿರುವುದರಿಂದ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಮಾಡಿಸಲಾಗಿದೆ. ಇದೇ ವೇಳೆ ಹತ್ತು ಸೆಂಟಿಮೀಟರ್ ಮಾಫ್ ಫಾರ್ಮೇಶನ್ ಆಗಿರುವುದು ಪತ್ತೆಯಾಗಿದೆ.


ನಂತರ ಬಾಣಂತಿಯ ಕುಟುಂಬದವರು ಮಂಗಳೂರಿನ ವೈದ್ಯರನ್ನು ಸಂಪರ್ಕಿಸಿದ್ದರು. ಅಲ್ಲಿ ಸ್ಕ್ಯಾನಿಂಗ್ ರಿಪೋರ್ಟ್ ನೋಡಿದ ವೈದ್ಯರಿಗೆ, ಮಾರ್ಚ್ ಫಾರ್ಮೇಶನ್ ಆಗಿರುವುದು ಕಂಡುಬಂದಿದ್ದು, ಪುತ್ತೂರಿನ ವೈದ್ಯರ ಬಳಿ ಪ್ರಶ್ನಿಸಿದ್ದರು. ನಂತರ ಸಿಟಿ ಸ್ಕ್ಯಾನ್ ಮಾಡಿದಾಗ ವರದಿಯಲ್ಲಿ ಹೊಟ್ಟೆ ಒಳಗಡೆ ಸರ್ಜಿಕಲ್ ಬಟ್ಟೆ ಬಿಟ್ಟಿರುವ ವಿಚಾರ ತಿಳಿದುಬಂದಿದೆ. ಅಷ್ಟರಲ್ಲಾಗಲೇ ಸಿಸೇರಿಯನ್ನಾಗಿ ಒಂದೂವರೆ ತಿಂಗಳಾಗಿದ್ದರಿಂದ ಬಾಣಂತಿ ಆರೋಗ್ಯ ಸಮಸ್ಯೆ ತೀರಾ ಹದಗೆಟ್ಟಿದ್ದು, ಅಪಾಯದ ಸ್ಥಿತಿ ತಲುಪಿತ್ತು. ನಂತರ ಪುತ್ತೂರಿನ ಇನ್ನೊಂದು ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನೆರವೇರಿಸಿ ಸರ್ಜಿಕಲ್ ಬಟ್ಟೆಯ ಮುದ್ದೆಯನ್ನು ವೈದ್ಯರು ಹೊರತೆಗೆದಿದ್ದಾರೆ.

ಹೆರಿಗೆಯ ಸಂದರ್ಭ ಸಿಟಿ ಆಸ್ಪತ್ರೆಯ ವೈದ್ಯರಾದ ಡಾ. ಅನಿಲ್ ನಿರ್ಲಕ್ಷತೆಯಿಂದ ಹೊಟ್ಟೆಯಲ್ಲೇ ಬಟ್ಟೆ ಉಳಿದು, ಅದನ್ನು ತಿಳಿದ ಬಳಿಕವೂ ತೆರವು ಮಾಡದೆ ಉಳಿಸಿದ್ದಾರೆ. ಸೋಂಕಿಗೆ ಕಾರಣವಾದ ಬ್ಯಾಕ್ಟೀರಿಯವನ್ನು ದೇಹದ ವಿವಿಧ ಭಾಗಕ್ಕೆ ಹೋದ ಕಾರಣದಿಂದ ಪತ್ನಿಯ ಪರಿಸ್ಥಿತಿ ಗಂಭೀರ ಸ್ಥಿತಿಗೆ ತಲುಪಿತ್ತು. ಮೂರು ತಿಂಗಳಿಂದ ಮಾನಸಿಕವಾಗಿ ದಿನಕಳೆಯುವ ಸ್ಥಿತಿ ನಿರ್ಮಾಣವಾಗಿದ್ದು, ಮುಂದೆ ಇಂತಹ ಸ್ಥಿತಿ ಯಾರಿಗೂ ಬರಬಾರದು. ಸಂಬಂಧಪಟ್ಟವರು ಈ ಬಗ್ಗೆ ಸೂಕ್ತ ತನಿಖೆಯನ್ನು ನಡೆಸಿ ನ್ಯಾಯ ಒದಗಿಸಿಕೊಡಬೇಕೆಂದು ಸಮಸ್ಯೆಗೊಳಗಾದ 33 ವರ್ಷ ಪ್ರಾಯದ ಶರಣ್ಯ ಲಕ್ಷ್ಮಿ ಬಿ ಅವರ ಪತಿ ಗಗನ್ ದೀಪ್ ಬಿ. ಆಗ್ರಹಿಸಿದರು.

ಸದ್ಯ ಡಾ.ಅನಿಲ್ ವಿರುದ್ಧ ಬಾಣಂತಿಯ ಪತಿ ಗಗನ್ ದೀಪ್ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
