ಬೆಂಗಳೂರು (ಫೆ.25): ಸೂರ್ಯ ಮತ್ತು ನಂದಿನಿ ಅಕ್ಕ ಪಕ್ಕದ ಮನೆಯವರಾಗಿದ್ದು, ಇಬ್ಬರು ಎಂಟು ವರ್ಷದ ಹಿಂದೆ ಪ್ರೀತಿಸಿ ಮದುವೆ ಆಗಿದ್ದರು. ನಂದಿನಿ ಬಿಬಿಎಂಪಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೆ, ಸೂರ್ಯ ಇನ್ವಿಟೇಷನ್ ಕಾರ್ಡ್ ಪ್ರಿಂಟ್ ಮಾಡೋ ಕೆಲಸ ಮಾಡುತ್ತಿದ್ದ. ಹೀಗಿದ್ದವರ ಬಾಳಲ್ಲಿ ಈಗ ಬಿರುಗಾಳಿ ಎದ್ದಿದ್ದು, ಪತ್ನಿ ಸಾವಿನ ಮನೆ ಸೇರಿದ್ದಾಳೆ.

ಫೆಬ್ರವರಿ 23 ರಂದು ರಾತ್ರಿ 9.30 ರ ಸಮಯ. ಚಾಮರಾಜಪೇಟೆ ಏರಿಯಾದಲ್ಲಿರುವ ಮನೆಯಲ್ಲಿ ಗಂಡ ಮತ್ತು ಮಗ ಬೇಕರಿಗೆ ಹೋಗಿದ್ದರು. ಅಲ್ಲಿಂದ ಬಂದು ನೋಡುವಷ್ಟರಲ್ಲಿ ಘನಘೋರ ಕಂಡಿದೆ. ರೂಂ ಲಾಕ್ ಆಗಿದ್ರೆ. ರೂಫ್ ನಲ್ಲಿದ್ದ ಕೊಂಡಿಯಲ್ಲಿ ಹಗ್ಗಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ನಂದಿನಿ ಕಂಡಿದ್ದಾಳೆ.
ತನ್ನ ಅಣ್ಣನನ್ನು ಕರೆಸಿಕೊಂಡ ಸೂರ್ಯ ಬಾಗಿಲು ಓಪನ್ ಮಾಡಿ ನಂದಿನಿಯನ್ನು ಕೆಳಗಿಳಿಸಿದ್ದಾರೆ. ತಕ್ಷಣ ಚಾಮರಾಜಪೇಟೆ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದು, ತನಿಖೆ ವೇಳೆ ನಂದಿನಿ ಸಾವಿಗೆ ಕಾರಣ ಏನು ಎನ್ನುವುದು ಗೊತ್ತಾಗಿದೆ.


ಬಿಬಿಎಂಪಿ ಕಚೇರಿ ಕೆಲಸ ಮಾಡುತ್ತಿದ್ದ ನಂದಿನಿ ಹಿಂದೆ ವ್ಯಕ್ತಿಯೊಬ್ಬ ಬಿದ್ದಿದ್ದ. ಪ್ರೀತ್ಸೆ ಪ್ರೀತ್ಸೆ ಎಂದು ಕಾಡುತ್ತಿದ್ದ. ಅಷ್ಟೇ ಅಲ್ಲ ಗಂಡನನ್ನು ಬಿಟ್ಟು ಬರುವಂತೆ ಪೀಡಿಸುತ್ತಿದ್ದನಂತೆ. ಇನ್ನು ನಂದಿನಿ ಪತಿಗೂ ಕರೆ ಮಾಡಿ ಬಿಟ್ಟು ಬಿಡುವಂತೆ ಹೇಳುತ್ತಿದ್ದನಂತೆ. ಇದೇ ವಿಚಾರವಾಗಿ ಪತಿ-ಪತ್ನಿ ಮಧ್ಯೆ ಗಲಾಟೆ ಆಗಿತ್ತು. ಇದರಿಂದ ಬೇಸತ್ತ ನಂದಿನಿ ಮನೆಯಲ್ಲಿ ಯಾರು ಇಲ್ಲದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಪ್ರಕರಣ ದಾಖಲಸಿಕೊಂಡಿರುವ ಚಾಮರಾಜಪೇಟೆ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದು, ತನಿಖೆ ಬಳಿಕ ಸಾವಿಗೆ ವ್ಯಕ್ತಿಯೊಬ್ಬ ನೀಡಿದ್ದ ಕಿರುಕುಳವೇ ಕಾರಣನಾ ಅಥವಾ ಬೇರೆ ಏನಾದರೂ ಕಾರಣ ಎನ್ನುವುದು ಗೊತ್ತಾಗಬೇಕಿದೆ.

