ಕೇರಳ:(ಫೆ.25) 23 ವರ್ಷದ ಯುವಕನೊಬ್ಬ ಕುಟುಂಬದ ನಾಲ್ವರು ಸೇರಿದಂತೆ ಒಟ್ಟು 5 ಮಂದಿಯನ್ನು ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕೇರಳದ ತಿರುವನಂತಪುರದ ವೆಂಜರಮೂಡು ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ.

ಇದನ್ನೂ ಓದಿ: Lover Suicide: ವಯಸ್ಸಲ್ಲದ ವಯಸ್ಸಿನಲ್ಲಿ ಪ್ರೀತಿ, ಪ್ರೇಮ, ಪ್ರಣಯ, ಹನಿಮೂನ್
ಕೊಲೆ ಮಾಡಿದ ಆರೋಪಿಯನ್ನು ಅಫ್ಘಾನ್(23) ಎಂದು ಗುರುತಿಸಲಾಗಿದೆ
ಆರೋಪಿ ತನ್ನ ಗೆಳತಿ, ಸಹೋದರ, ಅಜ್ಜಿ, ಚಿಕ್ಕಪ್ಪ ಮತ್ತು ಚಿಕ್ಕಮ್ಮನನ್ನು ಚಾಕು ಮತ್ತು ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಇದಾದ ಬಳಿಕ ಆರೋಪಿ ತಾಯಿಯ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿ ಬಳಿಕ ತಾನೂ ವಿಷ ಸೇವಿಸಿ ನೇರವಾಗಿ ಪೊಲೀಸ್ ಠಾಣೆಗೆ ಬಂದು ಪೊಲೀಸರ ಎದುರು ಹತ್ಯೆಗೈದಿರುವುದಾಗಿ ಹೇಳಿಕೊಂಡಿದ್ದಾನೆ.
ಅಫ್ಘಾನ್ ಹೇಳಿಕೆಯಿಂದ ಬೆಚ್ಚಿಬಿದ್ದ ಪೊಲೀಸರು ವಿಷ ಸೇವಿಸಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ, ಬಳಿಕ ಆತನ ಹೇಳಿಕೆ ಮೇರೆಗೆ ಹಲ್ಲೆ ಹತ್ಯೆ ನಡೆದಿರುವ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಅದರಂತೆ ಆರೋಪಿಯ ಸಹೋದರ ಅಹ್ವಾನ್, ಅಜ್ಜಿ ಸಲ್ಮಾ ಬೀವಿ, ಚಿಕ್ಕಪ್ಪ ಲತೀಫ್, ಚಿಕ್ಕಮ್ಮ ಶಾಹಿದಾ ಮತ್ತು ಆತನ ಗೆಳತಿ ಫರ್ಶಾನಾ ಸೇರಿದಂತೆ 5 ಜನರ ಸಾವನ್ನು ಪೊಲೀಸರು ಇದುವರೆಗೆ ಖಚಿತಪಡಿಸಿದ್ದಾರೆ. ಜೊತೆಗೆ ತಾಯಿ ಗಂಭೀರ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವ್ಯಾಪಾರದಲ್ಲಿ ನಷ್ಟ, ಸಹಾಯ ಮಾಡದ ಕುಟುಂಬಸ್ಥರು:
ಅಫ್ಘಾನ್ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಾನು ಗಲ್ಫ್ ದೇಶದಲ್ಲಿ ವ್ಯಾಪಾರ ಮಾಡುತ್ತಿದ್ದು, ಅಲ್ಲಿ ಅಪಾರ ನಷ್ಟ ಅನುಭವಿಸಿದ್ದು ಅದರ ಸಾಲ ತೀರಿಸಲು ಮನೆಯವರ ಬಳಿ ಹಣದ ಸಹಾಯ ಕೇಳಿದಾಗ ಯಾರೂ ಸಹಾಯಕ್ಕೆ ಮುಂದೆ ಬರದೇ ಇರುವುದರಿಂದ ಕೋಪಗೊಂಡು ಈ ಕೃತ್ಯ ಎಸಗಿರುವುದಾಗಿ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ. ಆದರೆ ಈತನ ಮಾತಿನಿಂದ ಪೊಲೀಸರು ಅನುಮಾನಗೊಂಡಿದ್ದು ಚಿಕಿತ್ಸೆ ಬಳಿಕ ಹೆಚ್ಚಿನ ವಿಚಾರಣೆ ನಡೆಸುವುದಾಗಿ ಪೊಲೀಸರು ಹೇಳಿದ್ದಾರೆ.

ಮೂರೂ ಪ್ರತ್ಯೇಕ ಸ್ಥಳದಲ್ಲಿ ಕೃತ್ಯ:
ಆರೋಪಿ ಮೊದಲು ಅಜ್ಜಿ ಮನೆಗೆ ತೆರಳಿ ಅಲ್ಲಿ ಅಜ್ಜಿಯ ಒಡವೆಗಳನ್ನು ಕೇಳಿದ್ದಾನೆ, ಆದರೆ ಅಜ್ಜಿ ಒಡವೆ ಕೊಡಲು ಒಪ್ಪದೇ ಇದ್ದಾಗ ಅವರನ್ನು ಹತ್ಯೆಗೈದು ಬಳಿಕ ಚಿಕ್ಕಪ್ಪನ ಮನೆಗೆ ಬಂದಿದ್ದಾನೆ. ಅಲ್ಲಿ ಅವರ ಬಳಿ ಸಾಲ ತೀರಿಸಲು ಹಣದ ಸಹಾಯ ಕೇಳಿದ್ದಾನೆ ಎನ್ನಲಾಗಿದೆ. ಆದರೆ ಅಲ್ಲೂ ಸಹಾಯಕ್ಕೆ ಮುಂದಾಗದ ನಿಟ್ಟಿನಲ್ಲಿ ಚಿಕ್ಕಪ್ಪ ಮತ್ತು ಚಿಕ್ಕಮ್ಮನ ಮೇಲೆ ಸುತ್ತಿಗೆಯಿಂದ ಬರ್ಬರವಾಗಿ ಹಲ್ಲೆ ನಡೆಸಿ ಹತ್ಯೆಗೈದಿದ್ದಾನೆ. ಇದಾದ ಬಳಿಕ ತನ್ನ ಮನೆಗೆ ಬಂದು ತಾಯಿ ಬಳಿ ಹಣ ಕೇಳಿದ್ದಾನೆ. ಇಲ್ಲೂ ಯಾವುದೇ ಸ್ಪಂದನೆ ಸಿಗದೇ ಇದ್ದಾಗ ಸಹೋದರನನ್ನು ಮೊದಲು ಹತ್ಯೆಗೈದು ಬಳಿಕ ತಾಯಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಬಳಿಕ ತನ್ನ ಗೆಳತಿಯನ್ನು ಮನೆಗೆ ಕರೆಸಿ ಆಕೆಯನ್ನು ಹತ್ಯೆಗೈದಿದ್ದಾನೆ ಎಂದು ಆರೋಪಿ ಹೇಳಿಕೊಂಡಿದ್ದಾನೆ.

ತಾಯಿಯ ಸ್ಥಿತಿ ಚಿಂತಾಜನಕ:
ಆರೋಪಿ ಅಫ್ಘಾನ್ ತನ್ನ ತಾಯಿ ಶೆಮಿ (47 ವರ್ಷ) ಮೇಲೂ ಹತ್ಯೆಗೆ ಯತ್ನಿಸಿದ್ದಾನೆ. ಆಕೆ ಕ್ಯಾನ್ಸರ್ ರೋಗಿಯಾಗಿರುವುದನ್ನು ಮರೆತು ಆಕೆಯ ಮೇಲೆ ಮನಬಂದಂತೆ ಸುತ್ತಿಗೆಯಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ, ಗಂಭೀರ ಸ್ಥಿತಿಯಲ್ಲಿರುವ ತಾಯಿಗೆ ತಿರುವನಂತಪುರದಲ್ಲಿರುವ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಷ ಸೇವಿಸಿ ರಿಕ್ಷಾದಲ್ಲಿ ಠಾಣೆಗೆ ಬಂದ ಆರೋಪಿ:
ಎಲ್ಲರನ್ನು ಹತ್ಯೆಗೈದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳಲೆಂದು ವಿಷ ಸೇವಿಸಿ ರಿಕ್ಷಾ ಮೂಲಕ ಪೊಲೀಸ್ ಠಾಣೆಗೆ ಬಂದಿದ್ದಾನೆ, ಠಾಣೆಗೆ ಬಂದು ಪೊಲೀಸರ ಬಳಿ ತಾನು ಹತ್ಯೆಗೈದಿರುವ ಕುರಿತು ಮಾಹಿತಿ ನೀಡಿದ್ದು ಕೊನೆಗೆ ತಾನೂ ವಿಷ ಸೇವಿಸಿರುವುದಾಗಿ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ.
