ಬೆಳ್ತಂಗಡಿ :(ಫೆ.26) ಅಂಡಿಂಜೆ ಗ್ರಾಮದ ಕಲ್ಲತ್ತಿ ಪ್ರದೇಶದಲ್ಲಿ ಕಾಡ್ಗಿಚ್ಚು ಹರಡಿಕೊಂಡಿದ್ದು ಕಳೆದ ಮೂರು ದಿನಗಳ ಹರಸಾಹಸದ ಬಳಿಕ ಇದೀಗ ಅಗ್ನಿಶಾಮಕ ದಳ ಮತ್ತು ಊರವರ ಪ್ರಯತ್ನದಿಂದ ಬೆಂಕಿ ನಿಯಂತ್ರಣಕ್ಕೆ ಬಂದಿರುವುದಾಗಿ ತಿಳಿದು ಬಂದಿದೆ.

ಇದನ್ನೂ ಓದಿ: Sirsi: ಶಿವರಾತ್ರಿ ಹಬ್ಬಕ್ಕೆ ಬಂದ ಗರ್ಭಿಣಿ ಮಗಳು, ಅಳಿಯ
ಬೆಳ್ತಂಗಡಿ ತಾಲೂಕಿನ ಅಂಡಿಂಜೆ ಗ್ರಾಮದ ಕಲ್ಲತ್ತಿ ಪ್ರದೇಶದ ಕಾಡು ಮತ್ತು ಸರಕಾರಿ ಗೇರು ತೋಟದ ಒಳಗೆ ಬೆಂಕಿ ವ್ಯಾಪಿಸಿದೆ. ಸೋಮವಾರ ಬೆಂಕಿ ಕಾಣಿಸಿಕೊಂಡಿರುವುದಾಗಿ ತಿಳಿದು ಬಂದಿದ್ದು, ಮಂಗಳವಾರ ಇಡೀ ಪ್ರಯತ್ನಿಸಿದರೂ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಲಿಲ್ಲ.
ಗೇರು ತೋಟದಲ್ಲಿನ ನೂರಾರು ಹೂ, ಕಾಯಿ ಬಿಟ್ಟ ಗೇರು ಮರಗಳು ಬೆಂಕಿಗಾಹುತಿಯಾಗಿದ್ದು, ಕರ್ನಾಟಕ ಗೇರು ಅಭಿವೃದ್ಧಿ ನಿಗಮಕ್ಕೆ ಅಪಾರ ನಷ್ಟ ಉಂಟಾಗಿದೆ.


ಗೇರು ತೋಟದ ಸಮೀಪದಲ್ಲಿರುವ ಖಾಸಗಿ ರಬ್ಬರ್ ತೋಟಗಳಿಗೂ ಬೆಂಕಿ ಹೊತ್ತಿಕೊಂಡಿದ್ದು ಮೂವರು ಕೃಷಿಕರ ತೋಟಗಳು ಬೆಂಕಿಗೆ ಆಹುತಿಯಾಗಿದ್ದು ವ್ಯಾಪಕ ನಷ್ಟ ಸಂಭವಿಸಿದೆ. ತೋಟಗಳಿಗೆ ಆವರಿಸಿದ ಬೆಂಕಿಯನ್ನು ಸ್ಥಳೀಯರು ಅಗ್ನಿಶಾಮಕ ದಳದವರ ಸಹಕಾರದೊಂದಿಗೆ ನಂದಿಸಿದ್ದಾರೆ.

ಅಗ್ನಿಶಾಮಕ ವಾಹನವು ಗೇರುತೋಟದ ಒಳಗೆ ಸಂಚರಿಸಲು ಅಸಾಧ್ಯವಾಗಿದೆ. ಇದೇ ಕಾರಣಕ್ಕಾಗಿ ಬೆಂಕಿ ನಂದಿಸುವ ಕಾರ್ಯಾಚರಣೆಗೆ ಅಡಚಣೆ ಉಂಟಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕಾಡ್ಗಿಚ್ಚಿಗೆ ಆವೃತವಾದ ಗೇರು ತೋಟವು ಸುಮಾರು 50 ಎಕ್ರೆ ವ್ಯಾಪ್ತಿಯಲ್ಲಿದ್ದು ಇದರಲ್ಲಿ ಅರ್ಧದಷ್ಟು ಗೇರು ನೆಡುತೋಪು ಬೆಂಕಿಗಾಹುತಿಯಾಗಿದೆ ಎಂದು ಅನುಮಾನಿಸಲಾಗಿದೆ.

ಅವಘಡದ ಪ್ರದೇಶಕ್ಕೆ ಸ್ಥಳೀಯ ಗ್ರಾಮಪಂಚಾಯತ್ ಅಧ್ಯಕ್ಷರು, ಸದಸ್ಯರುಗಳು, ಸ್ಥಳೀಯರು, ಅರಣ್ಯ ಇಲಾಖೆಯವರು, ಅಗ್ನಿಶಾಮಕ ದಳದೊಂದಿಗೆ ಸೇರಿ ಬೆಂಕಿ ನಂದಿಸುವ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಮೂರು ದಿನಗಳಿಂದ ಶ್ರಮಪಡುತ್ತಿದ್ದರೂ ಗೇರು ನೆಡುತೋಪಿನ ವ್ಯಾಪ್ತಿಯ ಬಹುಭಾಗ ಕಾಡಾಗಿರುವುದರಿಂದ ಬೆಂಕಿ ವ್ಯಾಪಿಸಿಕೊಂಡ ಎಲ್ಲ ಪ್ರದೇಶಕ್ಕೆ ತಲುಪಲು ಅಗ್ನಿಶಾಮಕ ವಾಹನ ಮತ್ತು ಸಿಬ್ಬಂದಿಗೆ ಕಷ್ಟವಾಗಿದ್ದು ಇನ್ನಷ್ಟು ಪೈಪ್ ಜೋಡಿಸಿ ನೀರು ಸರಬರಾಜು ಮಾಡಿ ಬೆಂಕಿ ನಂದಿಸುವ ಕಾರ್ಯಾಚರಣೆಗೆ ನಡೆಸಿದ್ದಾರೆ.
ಇದೀಗ ಬೆಂಕಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.
