Wed. Feb 26th, 2025

Bengaluru: “ಜೀವನ್​ ಸಾಥಿ” ಯಾಗಲು ಬಂದವನಿಂದ ಯುವತಿಗೆ 60 ಲಕ್ಷ ರೂ. ವಂಚನೆ

ಬೆಂಗಳೂರು(ಫೆ.26): ಜೀವನ್​ ಸಾಥಿಯಲ್ಲಿ ಪರಿಚಯವಾದ ಯುವತಿಗೆ ಜೀವನ​ ಸಾಥಿಯಾಗುತ್ತೇನೆಂದು ನಂಬಿಸಿ ಯುವಕ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಶಿವಲಿಂಗೇಶ್ ವಂಚಕ. ಆರೋಪಿ ಶಿವಲಿಂಗೇಶ್ 2022ರ ಡಿಸೆಂಬರ್​ನಲ್ಲಿ ಜೀವನ್ ಸಾಥಿ ಡಾಟ್ ಕಾಂನಲ್ಲಿ ಸಂತ್ರಸ್ಥೆಗೆ ಪರಿಚಯವಾಗಿದ್ದಾನೆ. ಬಳಿಕ, ಇಬ್ಬರು ಭೇಟಿಯಾಗಿ ಮದುವೆಯಾಗಲು ನಿರ್ಧರಿಸಿದ್ದಾರೆ. ಈ ಮಧ್ಯೆ ತನ್ನ ತಾಯಿಗೆ ಬ್ರೈನ್ ಸಮಸ್ಯೆ ಇದೆ ಚಿಕಿತ್ಸೆ ಕೊಡಿಸಬೇಕು ಅಂತ ನಾಟಕವಾಡಿದ್ದಾನೆ. ತನ್ನ ತಾಯಿಗೆ ಚಿಕಿತ್ಸೆ ಕೊಡಿಸಬೇಕೆಂದು ಶಿವಲಿಂಗೇಶ್​ ಯುವತಿಯಿಂದ ಹಂತ ಹಂತವಾಗಿ 60 ಲಕ್ಷ ರೂಪಾಯಿ ಪಡೆದಿದ್ದಾನೆ.

ಇದನ್ನೂ ಓದಿ: ಉಜಿರೆ: ಉಜಿರೆ ಬೆನಕ ಆಸ್ಪತ್ರೆಯ ವತಿಯಿಂದ ಕಲ್ಮಂಜದ ದ.ಕ.ಜಿ.ಪ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಕುಟುಂಬಸ್ಥರಿಂದಲೇ ಆರೋಪಿ ಬಣ್ಣ ಬಯಲು!
ಬಳಿಕ, ಶಿವಲಿಂಗೇಶ್​ನ ಮೇಲೆ ಅನುಮಾನಗೊಂಡು ಸಂತ್ರಸ್ತ ಯುವತಿ ಆತನ ಹಿನ್ನಲೆ ಪರಿಶೀಲಿಸಿದಾಗ ಇದೇ ರೀತಿಯಾಗಿ ಬೇರೆಯವರಿಂದಲೂ ಹಣ ಪಡೆದಿರುವುದು ಬೆಳಕಿಗೆ ಬಂದಿದೆ. ಅಲ್ಲದೇ, ಲಿಂಕ್ಡ್ ಇನ್‌ನಲ್ಲಿ ಆರೋಪಿ ಬಗ್ಗೆ ಹುಡುಕಿದಾಗ ಬಂಡವಾಳ ಬಯಲಾಗಿದೆ. ಆರೋಪಿ ಶಿವಲಿಂಗೇಶ್ ಕೆಸಿನೋ ಚಟಕ್ಕೆ ಬಿದಿದ್ದು, ಈ ಸಂಬಂಧ ಹಲವರಿಂದ ಹಣ ಪಡೆದು ವಂಚಿಸ್ತಿದ್ದಾನೆಂದು ಆತನ ಕುಟುಂಬಸ್ಥರೇ ಫೋಸ್ಟ್ ಹಾಕಿರುವುದು ಸಂತ್ರಸ್ತ ಯುವತಿ ಕಂಡಿದ್ದಾರೆ.

ಶಿವಲಿಂಗೇಶ್​ ಕುಟುಂಬಸ್ಥರು ಹಾಕಿದ ಪೋಸ್ಟ್​ನಲ್ಲಿ ಏನಿದೆ?
ಆರೋಪಿ ಶಿವಲಿಂಗೇಶ್ ಕೆಸಿನೋ ಚಟಕ್ಕೆ ಬಿದ್ದಿದ್ದು ಸುಳ್ಳು ಹೇಳಿ ಎಲ್ಲರಿಂದ ಹಣ ವಸೂಲಿ ಮಾಡುತ್ತಿದ್ದಾನೆ. ನನ್ನ ತಾಯಿಗೆ ಹಾರ್ಟ್​ ಸರ್ಜರಿ, ಬ್ರೇನ್​ ಸರ್ಜರಿ, ಮೆಡಿಕಲ್​ ಎಮರ್ಜೆನ್ಸಿ ಇದೆ. ನಾನು ಒಂದು ಭೂಮಿ ಖರೀದಿಸಿದ್ದು, ಮುಂಗಡ ಹಣ ನೀಡಬೇಕಾಗಿದೆ. ಅಲ್ಲದೇ, ನನ್ನ ಬ್ಯಾಂಕ್ ಖಾತೆ ಸಮಸ್ಯೆಯಾಗಿದ್ದು, ತುರ್ತಾಗಿ ನನ್ನ ತಾಯಿಗೆ ಹಣ ಕಳುಹಿಸಬೇಕಾಗಿದೆ ಎಂದು ಸುಳ್ಳು ಹೇಳಿ ಹಣ ಪಡೆಯುತ್ತಿದ್ದಾನೆ. ನಮ್ಮ ಕುಟುಂಬಸ್ಥರಿಂದ 20 ಲಕ್ಷ ರೂಪಾಯಿಗಿಂತಲೂ ಹೆಚ್ಚು, ಸ್ನೇಹಿತರಿಂದ 50 ಲಕ್ಷ ರೂಪಾಯಿಗಿಂತಲೂ ಅಧಿಕ ಮತ್ತು ಮೂರು ಬ್ಯಾಂಕ್​ಗಳಿಂದ 30 ರಿಂದ 40 ಲಕ್ಷಕ್ಕಿಂತಲೂ ಅಧಿಕ ರೂ. ಸಾಲ ಪಡೆದಿದ್ದಾನೆ. ಹೀಗಾಗಿ, ಆರೋಪಿ ಶಿವಲಿಂಗೇಶ್​ಗೆ ಯಾರೂ ಕೂಡ ಹಣ ನೀಡಬೇಡಿ ಎಂದು ಆತನ ಕುಟುಂಬಸ್ಥರು ಪೋಸ್ಟ್​ ಹಾಕಿದ್ದಾರೆ.

ಇನ್ನು, ಮೋಸ ಹೋದ ಸಂತ್ರಸ್ತ ಯುವತಿ ಬೆಂಗಳೂರಿನ ಮೈಕೋ ಲೇಔಟ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ದೂರು ನೀಡಿದರೂ ಆರೋಪಿಯನ್ನು ಬಂಧಿಸಿಲ್ಲ ಅಂತ ಯುವತಿ ಎಕ್ಸ್​ನಲ್ಲಿ ಟ್ವೀಟ್ ಮಾಡಿ ಸಹಾಯ ಮಾಡುವಂತೆ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು