ಧರ್ಮಸ್ಥಳ:(ಫೆ.26) ರಾಜ್ಯದ ವಿವಿಧ ಭಾಗಗಳಿಂದ ಶಿವರಾತ್ರಿ ಜಾಗರಣೆಗೆ ಪಾದಯಾತ್ರೆಯಲ್ಲಿ ಬಂದ ಭಕ್ತಾದಿಗಳಿಗೆ ಧರ್ಮಸ್ಥಳದ ಪ್ರವಚನಮಂಟಪದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಶುಭಹಾರೈಸಿ, ಆಶೀರ್ವದಿಸಿದರು.

ಇದನ್ನೂ ಓದಿ: ಧರ್ಮಸ್ಥಳ: ಅಜಿಕುರಿಯಲ್ಲಿ ಹಲವರ ಮೇಲೆ ಹೆಜ್ಜೇನು ದಾಳಿ
ಪಾದಯಾತ್ರಿಗಳಿಗೆ ಪರಿಶುದ್ಧವಾದ ಭಕ್ತಿ ಮತ್ತು ದೃಢನಂಬಿಕೆಯಿಂದ ನಮ್ಮ ಎಲ್ಲಾ ಲೌಕಿಕ ಕಷ್ಟಗಳು, ಸಮಸ್ಯೆಗಳು ಪರಿಹಾರವಾಗಿ ನಾವು ದೇವರ ಅನುಗ್ರಹಕ್ಕೆ ಪಾತ್ರರಾಗುತ್ತೇವೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ದೇವರಲ್ಲಿ ಭಕ್ತಿ ಮತ್ತು ನಂಬಿಕೆಯಲ್ಲಿ ಯಾವುದೇ ರೀತಿಯ ಭಯ, ಸಂಶಯ ಇರಬಾರದು. ನಾವು ಕೊಂಚ ತಪ್ಪಿದರೂ ದೇವರು ನಮ್ಮ ರಕ್ಷಣೆ ಮಾಡುತ್ತಾರೆ. ನಂಬಿಕೆಗಳು ಮತ್ತು ವಿಶ್ವಾಸದಿಂದ ನಮ್ಮ ದೋಷಗಳ ದಮನವಾಗುತ್ತದೆ. ಭಕ್ತಿಯಲ್ಲಿ ದೈಹಿಕ ಶಕ್ತಿಗಿಂತಲೂ ಮಾನಸಿಕ ಶಕ್ತಿ, ಸಂಕಲ್ಪ ಮಿಗಿಲಾದುದು ಎಂದು ಹೆಗ್ಗಡೆಯವರು ಹೇಳಿ, ಪಾದಯಾತ್ರಿಗಳಿಗೆ ಶುಭ ಹಾರೈಸಿದರು.

ಪಾದಯಾತ್ರಿಗಳಿಗೆ ನಿರಂತರ ಪ್ರೇರಣೆ, ಮಾರ್ಗದರ್ಶನ ನೀಡುತ್ತಿರುವ ಬೆಂಗಳೂರಿನ ಗುರು ಹನುಮಂತಪ್ಪ ಸ್ವಾಮೀಜಿ ಮತ್ತು ಬಳಗದವರನ್ನು ಹೆಗ್ಗಡೆಯವರು ಅಭಿನಂದಿಸಿದರು.

ನಾಗಸಾಧು ಧನಂಜಯ ಗಿರಿ ಗುರೂಜಿ, ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಾರ ಭಕ್ತಿ, ಗೌರವ ವ್ಯಕ್ತಪಡಿಸಿ ಗರ್ಭಗುಡಿಯಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನವಾದರೆ, ನಾವು ಹೊರಗೆ ಬಂದು ಬೀಡಿನಲ್ಲಿ (ಹೆಗ್ಗಡೆಯವರ ನಿವಾಸ) ಮಾತನಾಡುವ ಮಂಜುನಾಥನ ದರ್ಶನ, ಆಶೀರ್ವಾದ ಪಡೆದು ಪುನೀತರಾಗುತ್ತೇವೆ. ಹೆಗ್ಗಡೆಯವರ ಮೂಲಕ ನಾವು ಶ್ರೀ ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾಗುತ್ತೇವೆ ಎಂದರು.

ಪವಿತ್ರ ಕ್ಷೇತ್ರ ಧರ್ಮಸ್ಥಳಕ್ಕೆ ಬಂದವರು ನೇತ್ರಾವತಿ ನದಿಯಲ್ಲಿ ಮಿಂದು ಬಟ್ಟೆ, ಸಾಬೂನು, ತ್ಯಾಜ್ಯಗಳನ್ನು ನೀರಿಗೆ ಹಾಕಿ ಅಪವಿತ್ರ ಮಾಡಬಾರದು. ಇದರಿಂದ ಪಾಪಪ್ರಜ್ಞೆ ಹೆಚ್ಚಾಗುತ್ತದೆ ಎಂದು ಅವರು ಭಕ್ತರಿಗೆ ಎಚ್ಚರಿಕೆ ನೀಡಿದರು.
ಶಿವಕ್ಷೇತ್ರ ಯಾವಾಗಲೂ ಶಾಂತವಾಗಿದ್ದು, ಪವಿತ್ರ ಧರ್ಮಸ್ಥಳವನ್ನು ಹಾಗೂ ನೇತ್ರಾವತಿ ನದಿಯನ್ನು ಸ್ವಚ್ಛವಾಗಿಡಲು ಸಹಕರಿಸಿ. ಧರ್ಮಸ್ಥಳದ ಅನ್ನದಾನ ವಿಶ್ವವಿಖ್ಯಾತವಾಗಿದೆ. ಭಕ್ತರು ಕೂಡಾ ಈ ಪವಿತ್ರ ಕಾಯಕಕ್ಕೆ ದಾನ ನೀಡಬಹುದು ಎಂದರು.
ಪಾದಯಾತ್ರೆಯ ರೂವಾರಿ ಹನುಮಂತಪ್ಪ ಗುರೂಜಿ ಶುಭ ಹಾರೈಸಿದರು. ಹೆಗ್ಗಡೆಯವರ ಆಪ್ತಕಾರ್ಯದರ್ಶಿ ಎ.ವಿ. ಶೆಟ್ಟಿ ಉಪಸ್ಥಿತರಿದ್ದು ಸಹಕರಿಸಿದರು. ಮರಿಯಪ್ಪ ಸ್ವಾಗತಿಸಿದರು. ಶಶಿಕುಮಾರ್ ಧನ್ಯವಾದವಿತ್ತರು.
