ಉಜಿರೆ:(ಫೆ.26) ಆಸ್ಪತ್ರೆಯ ಕಟ್ಟಡ ಹಾಗೂ ಒಳಾಂಗಣದ ಸೌಂದರ್ಯಕ್ಕೆ ಕೊಟ್ಟಷ್ಟೇ ಪ್ರಾಮುಖ್ಯತೆಯನ್ನು ಬೆನಕ ಆಸ್ಪತ್ರೆಯು ರೋಗಿಗಳಿಗೆ ಗುಣಮಟ್ಟದ ಸೇವೆಯನ್ನು ನೀಡುವುದಕ್ಕೆ ಆದ್ಯತೆಯನ್ನು ನೀಡುತ್ತಾ ಬಂದಿರುವುದು ಶ್ಲಾಘನೀಯ. ಕಳೆದ ಇಪ್ಪತ್ತು ವರ್ಷಗಳಿಂದ ನಾನು ಬೆನಕ ಆಸ್ಪತ್ರೆಯ ಸಂಪರ್ಕದಲ್ಲಿದ್ದೇನೆ ಹಾಗೂ ಬೆನಕ ಆಸ್ಪತ್ರೆಯ ಬೆಳವಣಿಗೆಯನ್ನು ಗಮನಿಸುತ್ತಾ ಬಂದಿದ್ದೇನೆ. ಇಲ್ಲಿಯ ವಾತಾವರಣ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ.

ಇದನ್ನೂ ಓದಿ: ಬಂಟ್ವಾಳ: ಫರಂಗಿಪೇಟೆಯ ವಿದ್ಯಾರ್ಥಿ ನಾಪತ್ತೆ
ಅಲ್ಲಲ್ಲಿ ಕಂಡುಬರುವ ಬೆನಕನ ವಿವಿಧ ರೀತಿಯ ವಿಗ್ರಹಗಳು ಜೀವನದ ಬಗ್ಗೆ ಹೆಚ್ಚು ಸಕಾರಾತ್ಮಕ ದೃಷ್ಟಿಕೋನವನ್ನು ಉತ್ತೇಜಿಸಲು ಪೂರಕವಾದ ವಾತಾವರಣ ಮೂಡಿಸಿದೆ ಎಂದು ಜಿಲ್ಲೆಯ ಖ್ಯಾತ ಹೃದಯ ತಜ್ಞ ಡಾ.ಪದ್ಮನಾಭ ಕಾಮತ್ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.

ಡಾ.ಪದ್ಮನಾಭ ಕಾಮತ್ ಇತ್ತೀಚೆಗೆ ರಜತ ಸಂಭ್ರಮದಲ್ಲಿರುವ ಉಜಿರೆಯ ಬೆನಕ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವೈದ್ಯಕೀಯ ಸೌಲಭ್ಯಗಳನ್ನು ವೀಕ್ಷಿಸಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಗೋಪಾಲಕೃಷ್ಣ ಅವರಿಗೆ ಬೆನಕನ ವಿಗ್ರಹವನ್ನು ನೀಡಿ ಶುಭ ಹಾರೈಸಿದರು.

ನಮ್ಮ ಬೆನಕ ಸಂಸ್ಥೆ ಮತ್ತು ಡಾ.ಪದ್ಮನಾಭ ಕಾಮತ್ ಅವರಿಗೆ ಅವಿನಾಭಾವ ಸಂಬಂಧ. ಕಳೆದ ಇಪ್ಪತ್ತು ವರ್ಷಗಳಿಂದ ಸತತವಾಗಿ ಬೆನಕ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ರೋಗಿಗಳ ತಪಾಸಣೆ ಹಾಗೂ ಸಮಾಲೋಚನೆಯನ್ನು ಒದಗಿಸುತ್ತಾ ಬಂದಿದ್ದಾರೆ. ಪರಿಣಿತ ವೈದ್ಯರ ಸೇವೆ ಈ ಪ್ರದೇಶದ ಜನರಿಗೆ ಒಂದು ವರದಾನವಾಗಿದೆ ಎಂದು ಡಾ. ಗೋಪಾಲಕೃಷ್ಣ ಅವರು ತಿಳಿಸಿದರು.


ಆಸ್ಪತ್ರೆಯ ಪರವಾಗಿ ಡಾ.ಪದ್ಮನಾಭ್ ಕಾಮತ್ ಅವರಿಗೆ ಡಾ. ಗೋಪಾಲಕೃಷ್ಣ, ಡಾ. ಭಾರತಿ, ಡಾ.ಆದಿತ್ಯ ರಾವ್, ಡಾ.ಅಂಕಿತಾ ಹಾಗೂ ಡಾ.ರೋಹಿತ್ ಅವರು ಗೌರವಾರ್ಪಣೆ ಸಲ್ಲಿಸಿದರು. ಆಸ್ಪತ್ರೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದ ಈ ಕಾರ್ಯಕ್ರಮವನ್ನು ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್.ಜಿ.ಭಟ್ ನಿರ್ವಹಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೇವಸ್ಯ ವಂದಿಸಿದರು.
