ಬಂಟ್ವಾಳ:(ಫೆ.27) ಲಕ್ಷಾಂತರ ರೂ. ಖೋಟಾ ನೋಟು ಚಲಾವಣೆಗೆ ಬಂದು ಪೋಲೀಸರಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಬಂಟ್ವಾಳ ಪೋಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಇದನ್ನೂ ಓದಿ: ಪುತ್ತೂರು: 9 ವರ್ಷದ ಅಪ್ರಾಪ್ತೆಗೆ ಅಶ್ಲೀಲ ಚಿತ್ರ ತೋರಿಸಿ ಲೈಂಗಿಕ ಕಿರುಕುಳ
2024 ರಲ್ಲಿ ಬಿಸಿರೋಡಿನ ಪೇಟೆಯ ಅಂಗಡಿಗಳಲ್ಲಿ ಖೋಟಾ ನೋಟನ್ನು ಚಲಾವಣೆಗೆ ಬಂದು ಪೋಲೀಸರ ಕೈಗೆ ಇಬ್ಬರು ಆರೋಪಿಗಳು ಸಿಕ್ಕಿಬಿದ್ದರೆ ಓರ್ವ ಆರೋಪಿ ಪರಾರಿಯಾಗಿದ್ದ. ಕೇರಳ ನಿವಾಸಿಗಳಾದ ಮಹಮ್ಮದ್ ಸಿ.ಎ.ಮತ್ತು ಖಮರುನ್ನೀಶ ಪೋಲೀಸರ ಕೈಗೆ ಸಿಕ್ಕಿಕೊಂಡಿದ್ದರು.

ಆದರೆ ಇನ್ನೋರ್ವ ಪ್ರಮುಖ ಆರೋಪಿಯಾಗಿದ್ದ ಕೇರಳ ಚೆಂಗಳ ನಿವಾಸಿ ಶರೀಫ್ ಪಿ.ಎ.ಅವರನ್ನು ಬಂಟ್ವಾಳ ಪೋಲೀಸರ ತಂಡ ಬಂಧಿಸಿದೆ.
ಇವರು ಕಾರಿನಲ್ಲಿ ಬಂದು ಅಂಗಡಿಗಳಲ್ಲಿ 500 ಮುಖ ಬೆಲೆಯ ಖೋಟಾ ನೋಟುಗಳನ್ನು ಬಹಳ ನಾಜೂಕಾಗಿ ಚಲಾವಣೆ ಮಾಡುತ್ತಿದ್ದರು.
10 ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ಅಂದರೆ 100 ರೂಪಾಯಿಗಿಂತ ಕಡಿಮೆ ಬೆಲೆಯ ಸಾಮಾಗ್ರಿಗಳನ್ನು ಪಡೆದು ಚಿಲ್ಲರೆ ಹಣವನ್ನು ಪಡೆದು ನಕಲಿ ಹಣವನ್ನು ಅಸಲಿಯಾಗಿ ಪರಿವರ್ತನೆ ಮಾಡಿ ಹೊರಟು ಹೋಗುತ್ತಿದ್ದರು.

ಆದರೆ ಇವರ ಅಸಲಿ ಕಥೆಯ ಬಗ್ಗೆ ಅಂಗಡಿಯ ಮಾಲಕರುಗಳಿಗೆ ಸಂಶಯ ಬಂದು ಪೋಲೀಸರಿಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ಮಾಹಿತಿ ಪಡೆದ ನಗರ ಠಾಣಾ ಪೋಲೀಸ್ ಇನ್ಸ್ಪೆಕ್ಟರ್ ಆನಂತಪದ್ಮನಾಭ ಮತ್ತು ಎಸ್.ಐ.ರಾಮಕೃಷ್ಣ ಅವರ ತಂಡ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

ಪೋಲಿಸರ ದಾಳಿಯ ವೇಳೆ ಪ್ರಕರಣದ ಮೂಲ ರೂವಾರಿ ಶರೀಫ್ ತಲೆಮರೆಸಿಕೊಂಡಿದ್ದ. ಇದೀಗ ಕೇರಳ ವಿದ್ಯಾನಗರದಲ್ಲಿ ಈತನನ್ನು ಖಚಿತವಾದ ಮಾಹಿತಿ ಮೇಲೆ ಬಂಧನ ಮಾಡಲಾಗಿದೆ. ಮೂವರ ಮೇಲೆ ಕೂಡ ಖೋಟಾ ನೋಟು ಚಲಾವಣೆ ಮಾಡುವ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಖೋಟಾ ನೋಟು ಚಲಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈತನ ಬಂಧನವಾಗದೆ ತಲೆಮರೆಸಿಕೊಂಡಿದ್ದು ಈತ ವಾರೆಂಟ್ ಆರೋಪಿಯಾಗಿದ್ದ. ಹಿರಿಯ ಪೋಲೀಸ್ ಅಧಿಕಾರಿಗಳ ಮಾರ್ಗದರ್ಶನದಂತೆ ಬಂಟ್ವಾಳ ನಗರ ಠಾಣಾ ಪೋಲೀಸರಾದ ಸುಜು, ಜಗದೀಶ್, ಕೃಷ್ಣ ಕುಲಾಲ್, ಇರ್ಷಾದ್ ರವರು ಕೇರಳದಿಂದ ಬಂಧಿಸಿ ಕರೆತಂದಿದ್ದಾರೆ.
