ಮಂಗಳೂರು: “ಇತಿಹಾಸ ಪ್ರಸಿದ್ಧ ಕಾವೂರು ಶ್ರೀ ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ಮಾರ್ಚ್ 6ರಂದು ಬೆಳಗ್ಗೆ ಗಂಟೆ 11ರಿಂದ 12ರವರೆಗೆ ನವೀಕೃತ ಗರ್ಭಗೃಹದಲ್ಲಿ ಮಹಾಲಿಂಗೇಶ್ವರ ದೇವರ ಪುನಃ ಪ್ರತಿಷ್ಠಾಪನಾ ಕಾರ್ಯಕ್ರಮ ಮತ್ತು ಮಾರ್ಚ್ 9ರಂದು ಬೆಳಗ್ಗೆ 8:10ರಿಂದ 8:40ರ ಮೀನಲಗ್ನ ಸುಮುಹೂರ್ತದಲ್ಲಿ ಮಹಾಲಿಂಗೇಶ್ವರ ದೇವರಿಗೆ ಬ್ರಹ್ಮಕಲಶಾಭಿಷೇಕವು ಜರುಗಲಿರುವುದು”ಎಂದು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.“ಊರಿನ ಜನರು ಪ್ರಾಕೃತಿಕ ವಿಕೋಪ ಮತ್ತು ಸಂಕಷ್ಟಗಳಿಂದ ಮುಕ್ತವಾಗಿ ನೆಮ್ಮದಿಯ ಜೀವನವನ್ನು ನಡೆಸಲು ನಮ್ಮ ದೇವಸ್ಥಾನ, ದೈವಸ್ಥಾನ ಹಾಗೂ ಆರಾಧನಾ ಕೇಂದ್ರಗಳಲ್ಲಿ ನಡೆಯುವ ಧಾರ್ಮಿಕ ವಿಧಿ ವಿಧಾನಗಳು ಹಾಗೂ ಪುಣ್ಯಕಾರ್ಯಗಳು ಕಾರಣೀಭೂತವಾಗಿವೆ. ಧಾರ್ಮಿಕ ಕಾರ್ಯಗಳು ನಿರಂತರವಾಗಿ ನಡೆಯುವ ಪುಣ್ಯ ಕ್ಷೇತ್ರ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಎಂಬುದು ಇತಿಹಾಸ. ಸುಮಾರು 800 ವರ್ಷಕ್ಕೂ ಮಿಕ್ಕಿದ ಇತಿಹಾಸವಿದೆ. ಕಾವೂರು, ಬಂಗ್ರಕೂಳೂರು, ಪಂಜಿಮೊಗರು, ಪಡುಕೋಡಿ, ಕುಂಜತ್ತಬೈಲ್, ಮರಕಡ, ಪಡುಶೆಡ್ಡೆ- ಜಾರ ಎಂಬ ಏಳು ಗ್ರಾಮಗಳಿಗೆ ಮಾಗಣೆ ದೇವಾಲಯವಾಗಿರುವ ಈ ದೇವಸ್ಥಾನವು 1982ನೇ ಇಸವಿಯಲ್ಲಿ ಜೀರ್ಣೋದ್ಧಾರಗೊಂಡಿರುತ್ತದೆ. ಶ್ರೀ ಮಹಾಲಿಂಗೇಶ್ವರ ದೇವರು ಊರ-ಪರವೂರ ಸಹಸ್ರಾರು ಭಕ್ತರ ಬೇಡಿಕೆ-ಇಷ್ಟಾರ್ಥಗಳನ್ನು ಅನುಗ್ರಹಿಸುವ ಇಷ್ಟದೇವರಾದ ಕಾರಣ ಕ್ಷೇತ್ರದ ಭಕ್ತರ ಸಂಖ್ಯೆ ಅಪಾರವಾಗಿ ಬೆಳೆಯುತ್ತಾ ಬಂದಿದೆ. 1996ರಲ್ಲಿ ಕ್ಷೇತ್ರದಲ್ಲಿ ನೂತನ ಕಲ್ಯಾಣ ಮಂಟಪ, ವಸಂತ ಮಂಟಪ, 2004ರಲ್ಲಿ ಬ್ರಹ್ಮರಥ, ಜಳಕದ ಕೆರೆ, 2009ರಲ್ಲಿ ಸುತ್ತು ಪೌಳಿ, ಏಕಶಿಲಾ ಧ್ವಜಸ್ತಂಭ ನಿರ್ಮಾಣಗೊಂಡಿರುತ್ತದೆ. ಈ ಬಾರಿ ಗರ್ಭಗುಡಿಯ ಜೀರ್ಣೋದ್ಧಾರ, ಪಾಕಶಾಲೆ, ಅನ್ನಛತ್ರ, ಸಭಾಭವನಗಳ ನಿರ್ಮಾಣವಾಗಿದೆ“ ಎಂದರು. ”ಮಾರ್ಚ್ 1ರ ಶನಿವಾರದಿಂದ ಮೊದಲ್ಗೊಂಡು ವೇದಮೂರ್ತಿ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮ ಹಾಗೂ ಮಾರ್ಚ್ 9ರ ವರೆಗೆ ನಡೆಯುವ ಶ್ರೀ ಮಹಾಲಿಂಗೇಶ್ವರ ದೇವರ ಪುನಃ ಪ್ರತಿಷ್ಠಾಪನಾ ಕಾರ್ಯಕ್ರಮ ಹಾಗೂ ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮಕಲಾಶಾಭಿಶೇಕಕ್ಕೆ ಭಕ್ತಭಿಮಾನಿಗಳು ತ್ರಿಕರಣಪೂರ್ವಕವಾಗಿ ಸಹಕರಿಸಬೇಕು“ ಎಂದು ಹೇಳಿದರು. ಹೊರೆಕಾಣಿಕೆ ಸಮಿತಿ ಸಂಚಾಲಕ ರಮಾನಂದ ಭಂಡಾರಿ ಮಾತಾಡಿ, ”ಮಾರ್ಚ್ 1ರಂದು ಕೂಳೂರು, ಪಡುಕೋಡಿ, ಶಾಂತಿನಗರ, ಗಾಂಧಿನಗರ, ಅತ್ರಬೈಲು, ಕುಂಜತ್ತಬೈಲು, ಮರಕಡ, ಕಾವೂರು, ಪಡುಶೆಡ್ಡೆಜಾರ, ಬೋಂದೇಲ್, ಪಚ್ಚನಾಡಿ, ಪದವಿನಂಗಡಿ, ಮೇರಿಹಿಲ್, ಕೊಂಚಾಡಿ, ಮುಗ್ರೋಡಿ ಹಾಗೂ ಮಾರ್ಚ್ 2ರಂದು ಸಂಜೆ 4 ಗಂಟೆಗೆ ಕೆಎಚ್ ಬಿ ಕಾಲೋನಿ ಹಾಗೂ ಬೋಂದೆಲ್ ನಿಂದ ಹೊರೆಕಾಣಿಕೆ ಮೆರವಣಿಗೆ ಹೊರಡಲಿದೆ“ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ್ ಭಟ್, ದೇವಳದ ಕಾರ್ಯ ನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ, ಆಶಿಕ್ ಕುಮಾರ್ ಬಳ್ಳಾಲ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ಪ್ರಭು, ಅವಿನಾಶ್ ನಾಯ್ಕ್ ಪಂಜಿಮೊಗರುಗುತ್ತು, ದೀಪಕ್ ಪೂಜಾರಿ, ಕಿಶೋರ್ ಕುಮಾರ್, ಹರೀಶ್ ಶೆಟ್ಟಿ, ಸದಾಶಿವ, ಗಿರಿಜಾ ಭಂಡಾರಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Mangalore: ಮಾ.1ರಿಂದ 9ರವರೆಗೆ ಕಾವೂರು ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ
