ಉಜಿರೆ :(ಫೆ.27) ರಾಷ್ಟ್ರಮಟ್ಟದ ನಾಟಕ ಸ್ಪರ್ಧೆ “ಅಭಿನಯ”ದಲ್ಲಿ ಉಜಿರೆಯ ಎಸ್.ಡಿ.ಎಂ. ಕಾಲೇಜಿನ “ಭೀಷ್ಮಾಸ್ತಮಾನ” ನಾಟಕವು ಪ್ರಥಮ ಸ್ಥಾನ ಗಳಿಸಿದೆ. ಬೆಂಗಳೂರಿನ ಜೈನ್ ಯೂನಿವರ್ಸಿಟಿಯಲ್ಲಿ ಇತ್ತೀಚೆಗೆ ಸ್ಪರ್ಧೆ ನಡೆಯಿತು.

ಇದನ್ನೂ ಓದಿ: ಬೆಳ್ತಂಗಡಿ: ಚಾರ್ಮಾಡಿ ಘಾಟ್ ತಿರುವಿನಲ್ಲೇ ಕೆಎಸ್ಆರ್ಟಿಸಿ ಬಸ್ ಸ್ಟೇರಿಂಗ್ ಕಟ್!!
ಸ್ಪರ್ಧೆಯು ಎರಡು ಹಂತದಲ್ಲಿ ನಡೆದಿದ್ದು, ಮೊದಲ ಸುತ್ತಿನಲ್ಲಿ 25 ಕ್ಕೂ ಅಧಿಕ ತಂಡಗಳು ಭಾಗವಹಿಸಿ, 6 ತಂಡಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು.
“ಭೀಷ್ಮಾಸ್ತಮಾನ” ವು ಅತ್ಯುತ್ತಮ ನಾಟಕ ಪ್ರಶಸ್ತಿಯ ಜೊತೆಗೆ 9 ವೈಯಕ್ತಿಕ ಪ್ರಶಸ್ತಿಗಳ ಪೈಕಿ 6 ನ್ನು ಗೆದ್ದುಕೊಂಡಿದೆ. ರಂಗ ನಿರ್ದೇಶಕ ಯಶವಂತ್ ಬೆಳ್ತಂಗಡಿ (ಅತ್ಯುತ್ತಮ ನಿರ್ದೇಶನ), ಶ್ರೀಕೃಷ್ಣ ಪಾತ್ರಧಾರಿ ಅಮಿತ್ ಕುಮಾರ್ (ಅತ್ಯುತ್ತಮ ನಟ), ಅರ್ಜುನ ಪಾತ್ರಧಾರಿ ಅಮೃತವರ್ಷಿಣಿ (ಅತ್ಯುತ್ತಮ ನಟಿ), ಮದನ್ ಮತ್ತು ಸುಬ್ರಹ್ಮಣ್ಯ ತಂಡ (ಅತ್ಯುತ್ತಮ ಸಂಗೀತ), ಅಶ್ವಿತ್ ಮತ್ತು ಆಯುಷ್ಮಾನ್ (ಅತ್ಯುತ್ತಮ ಬೆಳಕಿನ ವಿನ್ಯಾಸ) ಪ್ರಶಸ್ತಿ ಪಡೆದಿದ್ದು, ಅತ್ಯುತ್ತಮ ಸೆಟ್ (ರಂಗಸಜ್ಜಿಕೆ) ಪ್ರಶಸ್ತಿಯನ್ನೂ ತಂಡ ಗೆದ್ದುಕೊಂಡಿದೆ.

ವ್ಯಾಸ ವಿರಚಿತ ಮಹಾಭಾರತ, ಕುಮಾರವ್ಯಾಸ ಭಾರತ, ಭಗವದ್ಗೀತೆ ಹಾಗೂ ಇತರ ಕೆಲವು ಪೌರಾಣಿಕ ಆಕರಗಳಿಂದ ಪ್ರೇರಿತಗೊಂಡಿರುವ, ಎಸ್.ಡಿ.ಎಂ. ಕಲಾ ಕೇಂದ್ರ ಪ್ರಸ್ತುತಪಡಿಸಿದ ಈ ನಾಟಕವನ್ನು ಕಾಲೇಜಿನ ಹಿರಿಯ ವಿದ್ಯಾರ್ಥಿ ಸ್ಕಂದ ಭಾರ್ಗವ ಅವರು ರಚಿಸಿದ್ದು, ಕೇಂದ್ರದ ರಂಗ ನಿರ್ದೇಶಕ ಯಶವಂತ್ ಬೆಳ್ತಂಗಡಿ (ನೀನಾಸಂ) ಅವರು ನಿರ್ದೇಶಿಸಿದ್ದಾರೆ. ಅಂತಿಮ ಪದವಿ ವಿದ್ಯಾರ್ಥಿಗಳಾದ ಮದನ್ ಎಂ. ಸಂಗೀತ ನೀಡಿದ್ದು, ಸುಬ್ರಮಣ್ಯ ಜಿ. ಭಟ್ ಪಕ್ಕವಾದ್ಯದಲ್ಲಿ ಮತ್ತು ಗೌರವಿ ಹಿನ್ನೆಲೆ ಸಂಗೀತದಲ್ಲಿ ಸಾಥ್ ನೀಡಿದ್ದರು.
ಹಿರಿಯ ವಿದ್ಯಾರ್ಥಿ ರಿತೇಶ್ (ಧೃತರಾಷ್ಟ್ರ), ದ್ವಿತೀಯ ಎಂಎಸ್ಸಿ ವಿದ್ಯಾರ್ಥಿನಿ ಸೋನಾಕ್ಷಿ (ಶಿಖಂಡಿ), ತೃತೀಯ ಪದವಿ ವಿದ್ಯಾರ್ಥಿಗಳಾದ ರಾಜೇಶ್ (ಭೀಷ್ಮ), ಸುಜಿತ್ (ಸಂಜಯ), ಹರ್ಷ (ಧರ್ಮರಾಯ), ಉಲ್ಲೇಖ (ದ್ರೌಪದಿ), ದ್ವಿತೀಯ ಪದವಿ ವಿದ್ಯಾರ್ಥಿಗಳಾದ ಜ್ಯೋತಿಕ (ಸೂತ್ರಧಾರ), ನೂತನ್ (ವಿಷ್ಣು), ಭೂಷಣ್ (ಭೀಮಸೇನ) ಹಾಗೂ ಕನ್ನಿಕಾ ಎಸ್. (ಗಾಂಧಾರಿ) ಮತ್ತು (ಗಂಗೆ) ಪ್ರಮುಖ ಪಾತ್ರಗಳಿಗೆ ಜೀವ ತುಂಬಿದರು. ಮೇಳದಲ್ಲಿ ದ್ವಿತೀಯ ಪದವಿಯ ಮಾಧವ್, ವೈಶಾಖ್, ಆದಿತ್ಯ, ಅಕ್ಷರಿ ಮತ್ತು ಕನಿಷ್ಕ ಪಾತ್ರ ನಿರ್ವಹಿಸಿದರು.

ಈ ಹಿಂದೆ ಎಸ್ ಡಿ ಎಂ ಕಾಲೇಜಿನ ‘ದೂತ ಘಟೋತ್ಕಚ’ ನಾಟಕಕ್ಕೆ ರಾಜ್ಯ ಮಟ್ಟದ ಉತ್ತಮ ನಾಟಕ ಪ್ರಶಸ್ತಿ, ನಿರ್ದೇಶಕ ಯಶವಂತ್ ಬೆಳ್ತಂಗಡಿ ಇವರಿಗೆ ರಾಜ್ಯಮಟ್ಟದ ಉತ್ತಮ ನಿರ್ದೇಶಕ ಪ್ರಶಸ್ತಿ ಮತ್ತು ಸಮರ್ಥನ್ ಎಸ್ ರಾವ್ ಗೆ ಉತ್ತಮ ಸಂಗೀತ ಪ್ರಶಸ್ತಿ ದೊರಕಿತ್ತು. ರಾಷ್ಟ್ರ ಮಟ್ಟದಲ್ಲಿ ಉತ್ತಮ ನಾಟಕ ಪ್ರಶಸ್ತಿ ಜೊತೆಗೆ ವಿದ್ಯಾರ್ಥಿಗಳಾದ ಅಮಿತ್ ಕುಮಾರ್ ಉತ್ತಮ ನಟ, ಮಾಧವಿ ಉತ್ತಮ ನಟಿ ಮತ್ತು ಶ್ಯಾಮ ಪ್ರಸಾದ್ ಉತ್ತಮ ಬೆಳಕಿನ ವಿನ್ಯಾಸ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು. ಎಸ್ ಡಿ ಎಂ ಕಾಲೇಜಿಗೆ ನಾಟಕದಲ್ಲಿ 7 ವರ್ಷಗಳಲ್ಲಿ ಮೂರು ರಾಷ್ಟ್ರ ಪ್ರಶಸ್ತಿ ದೊರಕಿದೆ.

“ಭೀಷ್ಮಾಸ್ತಮಾನ” ನಾಟಕವು ಏಳು ಪ್ರದರ್ಶನಗಳನ್ನು ಕಂಡಿದ್ದು, ಏಳೂ ಪ್ರದರ್ಶನಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಾಟಕಕ್ಕೆ ಸಂದ ಪ್ರಶಸ್ತಿಯ ಕುರಿತು ಕಾಲೇಜಿನ ಪ್ರಾಂಶುಪಾಲರು, ಅಧ್ಯಾಪಕ ವೃಂದದವರು ಮತ್ತು ವಿದ್ಯಾರ್ಥಿಗಳು ಅಭಿನಂದಿಸಿ ಸನ್ಮಾನಿಸಿದರು. ಸಾಧನೆಯ ಕುರಿತು ಮೆಚ್ಚುಗೆಯ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರು ನಾಟಕ ತಂಡವನ್ನು ಅಭಿನಂದಿಸಿದರು.

