Fri. Feb 28th, 2025

Bantwal: ಪಿಯುಸಿ ವಿದ್ಯಾರ್ಥಿ ನಾಪತ್ತೆ ಪ್ರಕರಣ – ದಿಗಂತ್‌ ಬರೆದ ಚೀಟಿಯಲ್ಲಿ ಏನಿದೆ? – ಪತ್ತೆಯಾದ ಶೂ ನಲ್ಲಿ ರಕ್ತದ ಕಲೆ!!?

ಬಂಟ್ವಾಳ: (ಫೆ.28) ಕಿದೆಬೆಟ್ಟು ನಿವಾಸಿ ದಿಗಂತ್ ಅವರ ಮನೆಗೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಅವರು ಭೇಟಿ ನೀಡಿದ್ದು, ಪ್ರಕರಣದ ಬಗ್ಗೆ ತನಿಖೆ ನಡೆಸಿ, ಬಳಿಕ ಪೋಷಕರ ಜೊತೆ ಮಾತನಾಡಿದ್ದಾರೆ. ದಿಗಂತ್ ಅವರ ತಂದೆ ಪದ್ಮನಾಭ ಅವರ ಜೊತೆ ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ.

ಫರಂಗಿಪೇಟೆಯ ವಿದ್ಯಾರ್ಥಿ ದಿಗಂತ್ ನಾಪತ್ತೆ ಹಿಂದೆ ಹಲವಾರು ಅನುಮಾನಗಳು ಹುಟ್ಟಿಕೊಂಡಿದ್ದು, ಪೋಲಿಸ್ ಇಲಾಖೆಗೆ ಇದೊಂದು ಸವಾಲಿನ ಪ್ರಕರಣವಾಗಿದೆ ಎಂದು ಹೇಳಲಾಗುತ್ತಿದೆ.
ಈತ ನಾಪತ್ತೆಯಾದ ಬಳಿಕದ ಯಾವೊಂದು ಸುಳಿವು ಸಿಗದೆ ಇರುವುದು ಇಕ್ಕಟ್ಟಿನ ಸ್ಥಿತಿಯನ್ನು ತಂದೊಡ್ಡಿದೆ ಎಂದು ಹೇಳಲಾಗಿದೆ. ವಿಶ್ವಹಿಂದೂ ಪರಿಷತ್ ಫರಂಗಿಪೇಟೆ ಘಟಕ ಪ್ರಕರಣದ ಬಗ್ಗೆ ಧ್ವನಿಗೂಡಿಸಿದ್ದು, ನಾಪತ್ತೆ ಪ್ರಕರಣ ತಿರುವು ಪಡೆದಿದೆ.

ಚೀಟಿಯಲ್ಲಿ ಏನಿದೆ?
ದಿಗಂತ್ ಫೆ.25 ರಂದು ಸಂಜೆ ಸುಮಾರು 7 ರ ಸುಮಾರಿಗೆ ಫರಂಗಿಪೇಟೆ ಅಂಜನೇಯ ವ್ಯಾಯಾಮ ಶಾಲೆಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದ ವಿದ್ಯಾರ್ಥಿ , ದೇವಸ್ಥಾನಕ್ಕೂ ಹೋಗದೆ ನಾಪತ್ತೆಯಾಗಿದ್ದಾನೆ. ಪೂಜೆ ಮುಗಿದು ಮನೆಗೆ ಬರಬೇಕಾಗಿದ್ದ ದಿಗಂತ್ ಮನೆಗೆ ಬಾರದ ಹಿನ್ನೆಲೆಯಲ್ಲಿ ಆತಂಕಗೊಂಡ ಮನೆಯವರು 9 ಗಂಟೆಯ ಬಳಿಕ ಊರವರ ಸಹಕಾರದಿಂದ ರಾತ್ರಿ ಮೂರು ಗಂಟೆವರೆಗೂ ಹುಡುಕಾಡಿದ್ದಾರೆ. ಈ ಸಂದರ್ಭದಲ್ಲಿ ರೈಲ್ವೆ ಹಳಿಯಲ್ಲಿ ಈತನ ಚಪ್ಪಲಿ ಹಾಗೂ ಮೊಬೈಲ್ ದೊರಕಿತ್ತು. ಒಂದು ಚಪ್ಪಲಿಯಲ್ಲಿ ರಕ್ತದ ಕಲೆ ಕಂಡು ಬಂದಿದೆ. ಬೆಳಿಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು ಮಾಡಿದ್ದಾರೆ.

ಇದೀಗ ಮನೆಯಲ್ಲಿ ಚೀಟಿಯೊಂದು ದೊರೆತಿದೆ ಎಂದು ಮೂಲಗಳು ಹೇಳಿಕೊಂಡಿದ್ದು, ಚೀಟಿಯಲ್ಲಿ ಏನಿದೆ, ಯಾವ ಬಗ್ಗೆ ಬರೆದಿದ್ದಾನೆ ಎಂಬುದು ಪೊಲೀಸ್ ತನಿಖೆಗೆ ಸಹಾಯವಾಗಲಿದೆ.
ದಿಗಂತ್ ಮಂಗಳೂರು ಖಾಸಗಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಯಾಗಿದ್ದು, ಅಂತಿಮ ಪರೀಕ್ಷೆಗಾಗಿ ಪ್ರವೇಶಪತ್ರವನ್ನುನಾಪತ್ತೆಯಾದ ದಿನ ಕಾಲೇಜಿನಿಂದ ತಂದಿದ್ದ. ಅಲ್ಲದೆ ಈತನ ಸ್ನೇಹಿತನ ಬಳಿ 25 ರ ಬಳಿಕ‌ ನಿನಗೆ ಉತ್ತರ ನೀಡುತ್ತೇನೆ ಎಂದು ಹೇಳಿಕೊಂಡಿದ್ದ ಎಂದಿದ್ದಾನೆಯಂತೆ? ಈ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ಇದ್ದು,ಈ ಬಗ್ಗೆ ತನಿಖೆ ಮುಂದುವರಿಸಿದೆ.

ಎಸ್.ಪಿ.ಭೇಟಿ: ಸ್ಪೆಷಲ್ ಟೀಂ ರಚನೆ :
ನಾಪತ್ತೆಯಾಗಿರುವ ದಿಗಂತ್ ಅವರ ಬಗ್ಗೆ ಈವರೆಗೆ ಇಲಾಖೆಗೆ ಯಾವುದೇ ಸುಳಿವು ಸಿಕ್ಕಿಲ್ಲ. ಪ್ರಕರಣದ ವರ್ಕ್ ಔಟ್ ನಡೆಯುತ್ತಿದ್ದು, ಆತನ ಪತ್ತೆ ಹಚ್ಚಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೋಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್.ಅವರು ಮಾಹಿತಿ ನೀಡಿದ್ದಾರೆ.
ಆತ ಕಲಿಯುತ್ತಿದ್ದ ಕಾಲೇಜಿಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ಪೆಕ್ಟರ್ ಶಿವಕುಮಾರ್ ಅವರು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಜೊತೆಗೆ ಆತನ ಫ್ರೆಂಡ್ಸ್ ಗಳನ್ನು ತನಿಖೆ ಮಾಡಲಾಗುತ್ತಿದೆ.ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.
ಪ್ರಕರಣವನ್ನು ಭೇದಿಸಲು ಮೂರು ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ಪುತ್ತೂರು ಟ್ರಾಫಿಕ್ ಎಸ್.ಐ.ಉದಯರವಿ ಹಾಗೂ ಬಂಟ್ವಾಳ ನಗರ ಠಾಣಾ ಎಸ್.ಐ.ದುರ್ಗಪ್ಪ ಅವರನ್ನೊಳಗೊಂಡ ಮೂರು ಟೀಂ ಪತ್ತೆಗಾಗಿ ಕಾರ್ಯಪ್ರವೃತ್ತರಾಗಿದ್ದಾರೆ.


ಫೆ. 25 ರಂದು ರಾತ್ರಿ ಸುಮಾರು 8.15 ರ ವರೆಗೆ ದಿಗಂತ್ ಆಂಜನೇಯ ವ್ಯಾಯಮ ಶಾಲೆಯ ಬಳಿ ಇದ್ದು, ಆ ಬಳಿಕ ಮನೆಯ ಕಡೆಗೆ ಹೆಜ್ಜೆ ಹಾಕಿದ ವಿಡಿಯೋ ಇಲ್ಲಿನ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿರುವ ಮಾಹಿತಿ ಪೋಲಿಸ್ ಇಲಾಖೆಗೆ ದೊರೆತಿದೆ. ಆದರೆ ಅ ಬಳಿಕ ಈತ ಯಾವ ಕಡೆಗೆ ಮುಖ ಮಾಡಿದ್ದಾನೆ ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿ ಅಥವಾ ಸುಳಿವು ಪೋಲಿಸ್ ಇಲಾಖೆಗೆ ಸಿಗದೆ ಇದ್ದು, ಅತ್ಯಂತ ಕ್ಲಿಷ್ಟಕರವಾದ ಪರಿಸ್ಥಿತಿ ಇದೆ ಎನ್ನಲಾಗಿದೆ.

ಫರಂಗಿಪೇಟೆ ಪರಿಸರದಲ್ಲಿ ಗಾಂಜಾ ಸೇವನೆ ಅತಿಯಾಗಿದ್ದು, ಸಾರ್ವಜನಿಕ ವಲಯದಲ್ಲಿ ಭಯದ ವಾತಾವರಣ ಇದೆ. ಹಾಗಾಗಿ ದಿಗಂತ್ ನ ಕಿಡ್ನಾಪ್ ಮಾಡಿರುವ ಅನುಮಾನವಿದ್ದು, ಈ ಬಗ್ಗೆ ಕೂಲಂಕುಷವಾಗಿ ತನಿಖೆಯನ್ನು ಪೋಲೀಸರು ಮಾಡಿ ಶನಿವಾರದೊಳಗೆ ಪತ್ತೆ ಮಾಡಬೇಕು ಎಂಬ ವಾರ್ನಿಂಗ್ ವಿಶ್ವಹಿಂದೂ ಪರಿಷತ್ ಫರಂಗಿಪೇಟೆ ‌ಘಟಕದಿಂದ ನೀಡಿದ್ದಲ್ಲದೆ, ಶನಿವಾರದವರೆಗೆ ಈತನ ಪತ್ತೆ ಮಾಡದೇ ಹೋದಲ್ಲಿ ಶನಿವಾರ ಫರಂಗಿಪೇಟೆ ಬಂದ್ ಗೆ ಕರೆ ನೀಡಿ, ಪೋಲೀಸ್ ಠಾಣೆ ಮುಂಭಾಗದಲ್ಲಿ ಪ್ರತಿಭಟನೆ ಎಚ್ಚರಿಕೆ ನೀಡಲಾಗಿದೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು