Tamannah Bhatia: (ಫೆ.28) ಇನ್ನೊಬ್ಬರು ಮಾಡಿದ ತಪ್ಪಿಗೆ, ಮೋಸಕ್ಕೆ ಕೆಲವೊಮ್ಮೆ ಸಿನಿಮಾ ನಟ, ನಟಿಯರು ಸಮಸ್ಯೆಗೆ ಸಿಕ್ಕಿಕೊಳ್ಳುವುದುಂಟು. ಕೆಲ ತಿಂಗಳ ಹಿಂದೆ ದೇಶದಾದ್ಯಂತ ಸುದ್ದಿಯಾಗಿದ್ದ ಮಹದೇವ ಬೆಟ್ಟಿಂಗ್ ಅಪ್ಲಿಕೇಶನ್ ವಿಷಯದಲ್ಲಿ ಬಾಲಿವುಡ್ನ ಹಲವು ಸ್ಟಾರ್ ನಟರಿಗೆ ಪೊಲೀಸರು ನೊಟೀಸ್ ನೀಡಿ ವಿಚಾರಣೆ ನಡೆಸಿದ್ದರು. ಇದೀಗ ನಟಿಯರಾದ ತಮನ್ನಾ ಭಾಟಿಯಾ ಮತ್ತು ನಟಿ ಕಾಜಲ್ ಅಗರ್ವಾಲ್ ಅವರುಗಳು ಇಂತಹುದೇ ಒಂದು ಕಾನೂನು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ.

ಇದನ್ನೂ ಓದಿ: ಕೇರಳ: ಚಲಿಸುತ್ತಿದ್ದ ರೈಲಿನಿಂದ ಹಾರಿ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ತಾಯಿ
2.40 ಕೋಟಿ ವಂಚನೆ ಪ್ರಕರಣದಲ್ಲಿ ನೀಡಲಾಗಿರುವ ದೂರಿನಲ್ಲಿ ತಮನ್ನಾ ಭಾಟಿಯಾ ಮತ್ತು ಕಾಜಲ್ ಅಗರ್ವಾಲ್ ಅವರನ್ನು ಸಹ ಆರೋಪಿಗಳನ್ನಾಗಿ ಮಾಡಲಾಗಿದೆ. ಪುದುಚೆರಿ ಪೊಲೀಸ್ ಠಾಣೆಯಲ್ಲಿ ವಂಚಕರ ಜೊತೆಗೆ ತಮನ್ನಾ ಹಾಗೂ ಕಾಜಲ್ ವಿರುದ್ಧವೂ ಸಂತ್ರಸ್ತರು ದೂರು ನೀಡಿದ್ದು, ಇಬ್ಬರು ಮುಖ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಇದೀಗ ತಮನ್ನಾ ಭಾಟಿಯಾ ಮತ್ತು ಕಾಜಲ್ ಅಗರ್ವಾಲ್ ಅವರುಗಳ ವಿಚಾರಣೆಗೆ ಮುಂದಾಗಿದ್ದಾರೆ.


2020 ರಲ್ಲಿ ಕ್ರಿಸ್ಟೊ ಕರೆನ್ಸಿ ಕಂಪೆನಿ ಹೆಸರಿನ ಕಂಪೆನಿಯನ್ನು ಕೊಯಂಬತ್ತೂರಿನಲ್ಲಿ ಸ್ಥಾಪಿಸಲಾಯಿತು. ಅದ್ಧೂರಿಯಾಗಿ ನಡೆದ ಈ ಕಂಪೆನಿಯ ಉದ್ಘಾಟನೆಗೆ ನಟಿ ತಮನ್ನಾ ಭಾಟಿಯಾ ಅತಿಥಿಯಾಗಿ ಆಗಮಿಸಿದ್ದರು. ಆ ನಂತರ ಕಂಪೆನಿಯ ವಾರ್ಷಿಕ ಮಹೋತ್ಸವವನ್ನು ಮಹಾಬಲಿಪುರಂನ ಐಶಾರಾಮಿ ಹೋಟೆಲ್ನಲ್ಲಿ ಮಾಡಲಾಗಿದೆ , ಆ ಕಾರ್ಯಕ್ರಮಕ್ಕೆ ನಟಿ ಕಾಜಲ್ ಅಗರ್ವಾಲ್ ಆಗಮಿಸಿದ್ದರು. ಆದರೆ ಇದೀಗ ಈ ಕಂಪೆನಿ ವಿರುದ್ಧ, ಹೂಡಿಕೆದಾರರು ದೂರು ದಾಖಲಿಸಿದ್ದು, ಕಂಪೆನಿಯು ತಮಗೆ 2.40 ಕೋಟಿ ವಂಚನೆ ಮಾಡಿದೆ ಎಂದಿದ್ದಾರೆ.

ನಿವೃತ್ತಿ ಸರ್ಕಾರಿ ನೌಕರ ಅಶೋಕ್ ಎಂಬುವರು ಪುದುಚೆರಿ ಪೊಲೀಸರಿಗೆ ನೀಡಿರುವ ದೂರಿನನ್ವಯ ಕ್ರಿಸ್ಟೊ ಕರೆನ್ಸಿ ಕಂಪೆನಿ ತಮ್ಮ ಹಾಗೂ ತಮ್ಮ ಹತ್ತಿರದ ಸುಮಾರು 10 ಜನರಿಂದ ಭಾರಿ ಮೊತ್ತದ ಹಣ ಹೂಡಿಕೆ ಮಾಡಿಕೊಂಡಿದ್ದು, ಹಣವನ್ನು ದುಪ್ಪಟ್ಟು ಮಾಡಿಕೊಡುವುದಾಗಿ ಹೇಳಿ ಇದೀಗ ವಂಚನೆ ಎಸಗಿದೆ. ಸುಮಾರು 2.40 ಕೋಟಿ ರೂಪಾಯಿ ಹಣವನ್ನು ಕಂಪೆನಿ ತಮಗೆ ಮೋಸ ಮಾಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣದಲ್ಲಿ ಇಬ್ಬರು ಮುಖ್ಯ ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

ಈ ಹಿಂದೆಯೂ ಸಹ ಇಂತಹ ಹಲವು ಪ್ರಕರಣಗಳಲ್ಲಿ ಸಿನಿಮಾ ಸೆಲೆಬ್ರಿಟಿಗಳು ಸಿಲುಕಿಕೊಂಡಿದ್ದಿದೆ. ಯಾವುದೋ ಕಂಪೆನಿಯನ್ನು ಸೆಲೆಬ್ರಿಟಿಗಳು ಹಣದ ಆಸೆಗೆ ಪ್ರಚಾರ ಮಾಡುತ್ತಾರೆ, ಆ ಬಳಿಕ ಆ ಕಂಪೆನಿ ಜನರಿಗೆ ಮೋಸ ಮಾಡಿ, ಕೇಸು ದಾಖಲಾದಾಗ ಸೆಲೆಬ್ರಿಟಿಗಳು ಸಹ ಪ್ರಕರಣದಲ್ಲಿ ಸಿಲುಕಿಕೊಳ್ಳುತ್ತಾರೆ.
