ಉಜಿರೆ (ಮಾ.1): ತಾರ್ಕಿಕ ಚಿಂತನೆಯೊಂದಿಗೆ ಗುರುತಿಸಿಕೊಂಡರೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮನ್ನಣೆ ಪಡೆಯುವಂಥ ಸಾಧನೆ ಸಾಧ್ಯವಾಗಿಸಿಕೊಳ್ಳಬಹುದು ಎಂದು ಉಜಿರೆಯ ಎಸ್.ಡಿ.ಎಂ ಕಾಲೇಜಿನ ಪರೀಕ್ಷಾಂಗ ಕುಲಸಚಿವರಾದ ಪ್ರೊ. ನಂದಕುಮಾರಿ ಕೆ.ಪಿ ಅಭಿಪ್ರಾಯಪಟ್ಟರು.


ಇದನ್ನೂ ಓದಿ: ⛔ಮೈಸೂರು: ಕುಡಿದ ಅಮಲಿನಲ್ಲಿ ತನ್ನ ಮನೆಗೆ ತಾನೇ ಬೆಂಕಿಯಿಟ್ಟ ವ್ಯಕ್ತಿ
ಉಜಿರೆ ಶ್ರೀ ಧ . ಮಂ ಕಾಲೇಜಿನ ಸ್ನಾತಕೋತ್ತರ ಕೇಂದ್ರದಲ್ಲಿ ಶನಿವಾರದಂದು ರಸಾಯನ ಶಾಸ್ತ್ರ ವಿಭಾಗ ಹಾಗೂ ಕಾಂಕೇಮ್ ಆಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಸಾಯನ ಶಾಸ್ತ್ರ ವಿಜ್ಞಾನದ ಹೃದಯ ಭಾಗವಾಗಿದ್ದು, ದೈನಂದಿನ ಜೀವನದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮುಖ್ಯವಾದ ಪಾತ್ರವಹಿಸುತ್ತಿದೆ. ಆಧುನಿಕ ಜೀವನದ ಪ್ರತಿಯೊಂದು ಅಂಶವನ್ನೂ ರೂಪಿಸುತ್ತಿದೆ. ತಂತ್ರಜ್ಞಾನದ ಮೂಲಕ ಜ್ಞಾನಾರ್ಜನೆ ಸಾಧ್ಯವಾಗಿಸಿಕೊಳ್ಳಬೇಕು. ವೈಜ್ಞಾನಿಕ ಸಂಶೋಧನೆಗಳು ವೇಗಗತಿಯಲ್ಲಿ ಸಾಗುತ್ತಿರುವ ಈ ದಿನಗಳಲ್ಲಿ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಅದಕ್ಕೆ ತಕ್ಕಂತೆ ವೃದ್ಧಿಸಿಕೊಳ್ಳಬೇಕು. ಇಲ್ಲವಾದರೆ ಉದ್ಯೋಗ ಅವಕಾಶಗಳು ಲಭಿಸುವುದಿಲ್ಲ ಎಂದರು.

ಭಾರತದ ಹೆಮ್ಮೆಯ ವಿಜ್ಞಾನಿ ಸರ್ ಸಿ ವಿ ರಾಮನ್ ಅವರ ಅಪೂರ್ವ ಸಂಶೋಧನೆ. ರಾಮನ್ ಪರಿಣಾಮದ ವಿವರಗಳನ್ನು 1928 ಫೆ.28ರಂದು ಜಗತ್ತಿಗೆ ತಿಳಿಸಿದ ಈ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವೆಂದು ಆಚರಿಸಲಾಗುತ್ತದೆ. ಅವರ ಸಂಶೋಧನೆ ಅನ್ವಯದ ಮನವರಿಕೆಯಿಂದಾಗಿ 1930 ನೊಬೆಲ್ ಪಾರಿತೋಷಕ ನೀಡಿ ಗೌರವಿಸಲಾಯಿತು. ಹಲವಾರು ವಿಜ್ಞಾನಿಗಳು ನಡೆದು ಬಂದ ಹಾದಿಯನ್ನು ಸ್ಮರಿಸಲೇಬೇಕು. ನಮ್ಮ ಸಣ್ಣ ಸಣ್ಣ ಆವಿಷ್ಕಾರಗಳೇ ದೊಡ್ಡ ಸಾಧನೆಗೆ ಮೈಲಿಗಲ್ಲುಗಳಾಗುತ್ತವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ ಪಿ. ಅವರು ಮಾತನಾಡಿದರು.

ರಾಷ್ಟ್ರೀಯ ವಿಜ್ಞಾನ ದಿನದ ಆಚರಣೆಯು ವಿದ್ಯಾರ್ಥಿಗಳನ್ನು ವಿಜ್ಞಾನ ವಿಷಯಗಳತ್ತ ಆಸಕ್ತಿ ಬೆಳೆಸಿಕೊಳ್ಳಲು ಸಹಾಯಕವಾಗುತ್ತದೆ. ಸಂಶೋಧನಾ ವಲಯದಲ್ಲಿ ಮಹತ್ವದ ಸಾಧನೆ ಕೈಗೊಳ್ಳಲು ಪ್ರೇರಣೆ ನೀಡುತ್ತದೆ. ಎಂದರು. ರಸಾಯನಶಾಸ್ತ್ರ ವಿಭಾಗವು ಕಾಲೇಜಿನಲ್ಲಿಯೇ ಅತ್ಯಂತ ಅಧಿಕ ಸಂಶೋಧನೆಗಳನ್ನು ಕೈಗೊಂಡಿರುವ ವಿಭಾಗವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವಿಭಾಗದ ಪ್ರತಿಷ್ಠೆಯನ್ನು ಹೆಚ್ಚಿಸುವ ಹಾಗೂ ಮುಂದಿನ ಪೀಳಿಗೆಗೆ ಮಾದರಿಯಾಗುವಲ್ಲಿ ಕಾರ್ಯನಿರ್ವಹಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕಿ ಡಾ.ಸೌಮ್ಯ ಬಿ.ಪಿ, ಕಾಂಕೇಮ್ ಕಾರ್ಯದರ್ಶಿ ಡಾ.ನವೀನ್‌ಕುಮಾರ್, ಜಂಟಿ ಕಾರ್ಯದರ್ಶಿ ಡಾ. ಸುಜಯ್ ಎಂ ಎಂ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ರಕ್ಷಾ ನಿರೂಪಿಸಿದರು. ಕಾವ್ಯ ಶೆಟ್ಟಿ ಸ್ವಾಗತಿಸಿದರು. ಅನನ್ಯ ಪಿ. ವಂದಿಸಿದರು.
