Mon. Mar 10th, 2025

Ujire: ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ – ಪಾದಯಾತ್ರಾರ್ಥಿಗಳಿಗೆ ಉಚಿತ ವೈದ್ಯಕೀಯ ಸೇವೆ

ಉಜಿರೆ:(ಮಾ.4) ಶಿವರಾತ್ರಿ ಸಂದರ್ಭದಲ್ಲಿ ನಾಡಿನ ಮೂಲೆ ಮೂಲೆಗಳಿಂದ ಲಕ್ಷೋಪಲಕ್ಷ ಭಕ್ತರು ಪಾದಯಾತ್ರೆಯ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ, ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಶಿವಜಾಗರಣೆಯಲ್ಲಿ ಪಾಲ್ಗೊಂಡು ಧನ್ಯರಾಗುತ್ತಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಪಾದಯಾತ್ರೆಯಲ್ಲಿ ಆಗಮಿಸಿದ ಭಕ್ತರಿಗೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವತಿಯಿಂದ ಪೂಜ್ಯ ಹೆಗ್ಗಡೆಯವರ ಆದೇಶದಂತೆ ಹಾಗೂ ಹೇಮಾವತಿ ವಿ. ಹೆಗ್ಗಡೆಯವರ ಮತ್ತು ಡಿ. ಹರ್ಷೇಂದ್ರ ಕುಮಾರ್ ಇವರ ಮಾರ್ಗದರ್ಶನದಲ್ಲಿ ಫೆ. 22ರಿಂದ 26 ರವರೆಗೆ ಉಚಿತ ಔಷಧಿ ಮತ್ತು ವೈದ್ಯಕೀಯ ಸೇವೆ ನೀಡಲಾಯಿತು.

ಪಾದಯಾತ್ರಿಗಳ ಆರೋಗ್ಯ ರಕ್ಷಣೆ ಮತ್ತು ಸಹಾಯಕ್ಕೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯ ವತಿಯಿಂದ ಚಾರ್ಮಾಡಿ, ಮುಂಡಾಜೆ, ಧರ್ಮಸ್ಥಳ, ಬೂಡುಜಾಲು ಹಾಗೂ ಎಸ್.ಡಿ.ಎಂ ಡಿ. ಎಡ್ ಕಾಲೇಜು ಇಲ್ಲಿ ಆರೋಗ್ಯ ಸೇವಾ ಕೌಂಟರ್‌ಗಳನ್ನು ತೆರೆದು ಪಾದಯಾತ್ರಾರ್ಥಿಗಳಿಗೆ ಆರೋಗ್ಯ ತಪಾಸಣೆ, ಅಗತ್ಯವಿರುವ ಔಷಧಿ, ಲಸಿಕೆ, ಮುಲಾಮು, ಸ್ಪ್ರೇ, ಬ್ಯಾಂಡೇಜ್ ಹಾಗೂ ಗ್ಲುಕೋಸ್ ಇತ್ಯಾದಿಗಳನ್ನು ಉಚಿತವಾಗಿ ಒದಗಿಸಲಾಯಿತು. ಪ್ರತಿ ಕೌಂಟರ್‌ಗಳಲ್ಲಿ ವೈದ್ಯರು, ದಾದಿಯರು ಹಾಗೂ ಸಹಾಯಕರು ಸ್ವಯಂಪ್ರೇರಿತರಾಗಿ ಪಾದಯಾತ್ರಿಗಳ ಆರೋಗ್ಯ ರಕ್ಷಣೆಯಲ್ಲಿ ಸಹಕರಿಸಿದರು.

ದಣಿದು ಬಂದ ಪಾದಯಾತ್ರಿಗಳಿಗೆ ಉಚಿತ ಔಷಧದೊಂದಿಗೆ ಕಲ್ಲಂಗಡಿ ಹಣ್ಣು, ನಿಂಬೆ ಶರಬತ್ತು, ಬೆಲ್ಲ ನೀರು ಒದಗಿಸಲಾಗಿತ್ತು. ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ಸೂಕ್ತ ವ್ಯವಸ್ಥೆಗಳಿಂದ ಪಾದಯಾತ್ರಿಗಳು ತೃಪ್ತರಾಗಿ ಹರಸುತ್ತಿರುವುದು ಕಂಡುಬಂದಿತ್ತು.

ಈ ಬಾರಿ 31,874ಮಂದಿ ಪಾದಯಾತ್ರಿಗಳಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಉಚಿತ ವೈದ್ಯಕೀಯ ಸೇವೆ ನೀಡಲಾಯಿತು. ಸುಮಾರು 9 ಲಕ್ಷ 45 ಸಾವಿರ ರೂಪಾಯಿಯನ್ನು ಪೂಜ್ಯ ಹೆಗ್ಗಡೆಯವರ ನಿರ್ದೇಶನದಂತೆ ಪಾದಯಾತ್ರಿಗಳ
ಆರೋಗ್ಯ ವೈದ್ಯಕೀಯ ಸೇವೆಗಾಗಿ ಖರ್ಚು ಮಾಡಲಾಯಿತು. ಎಲ್ಲಾ ಆರೋಗ್ಯ ಶಿಬಿರಗಳಿಗೆ ಭೇಟಿ ನೀಡಿದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅಲ್ಲಿ ಮಾಡಲಾದ ವ್ಯವಸ್ಥೆಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ತಿಳಿಸಿದರು.

Leave a Reply

Your email address will not be published. Required fields are marked *