Mon. Mar 10th, 2025

Ujire: ಎಸ್.ಡಿ.ಎಂ ಕಾಲೇಜಿನಲ್ಲಿ ಅಂತರ್‌ಕಾಲೇಜು ಕಬಡ್ಡಿ ಪಂದ್ಯಾವಳಿಗೆ ಚಾಲನೆ

ಉಜಿರೆ (ಮಾ.6): ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಯನ್ನು ವ್ಯಕ್ತಿಗತ ದಿನಚರಿಯ ಭಾಗವಾಗಿಸಿಕೊಂಡರೆ ಮಾನಸಿಕ ಸ್ಥೈರ್ಯ, ಬೌದ್ಧಿಕ ಬೆಳವಣಿಗೆ ಮತ್ತು ಭಾವನಾತ್ಮಕ ಸಮತೋಲನದ ಪ್ರಜ್ಞೆಯೊಂದಿಗೆ ವ್ಯಕ್ತಿತ್ವವನ್ನು ಸಮಗ್ರಗೊಳಿಸಿಕೊಳ್ಳಬಹುದು ಎಂದು ಎಸ್ ಡಿ ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಬೆಳ್ತಂಗಡಿ: 800 ವರ್ಷಗಳ ಇತಿಹಾಸ ಹೊಂದಿರುವ  ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕೇಳ – ಕಾಶಿಪಟ್ಣದಲ್ಲಿ

ಮಂಗಳೂರು ವಿಶ್ವವಿದ್ಯಾಲಯ ಮತ್ತು ಉಜಿರೆಯ ಎಸ್.ಡಿ.ಎಂ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಂಗಳೂರು ವಿಶ್ವವಿದ್ಯಾಲಯದ ಅಂತರ್‌ಕಾಲೇಜು ಪುರುಷ ಕಬ್ಬಡ್ಡಿ ಪಂದ್ಯಾವಳಿಯನ್ನು ಇಂದ್ರಪ್ರಸ್ಥ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬ ವ್ಯಕ್ತಿಯ ದಿನಚರಿಯಲ್ಲಿ ಕ್ರೀಡೆಯನ್ನು ಅಳವಡಿಸಿಕೊಂಡಾಗ ವ್ಯಕ್ತಿತ್ವ ವಿಕಸನವಾಗುತ್ತದೆ. ಮಾನಸಿಕವಾಗಿ ಬೌದ್ಧಿಕವಾಗಿ ಭಾವನಾತ್ಮಕವಾಗಿ ಒಬ್ಬ ವ್ಯಕ್ತಿ ಬೆಳವಣಿಗೆಗೆ ಕ್ರೀಡೆ ಬಹಳ ಮುಖ್ಯ. ಅದರ ಜೊತೆಗೆ ಕ್ರೀಡಾಸ್ಪೂರ್ತಿಯು ಅವಶ್ಯಕ. ವಿದ್ಯಾರ್ಥಿಗಳು ಕೇವಲ ಭೌದ್ಧಿಕ ಚಟುವಟಿಕೆಯಲ್ಲದೆ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವ ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದರು.

ದೇಶದ ಅನೇಕ ಕಡೆ ನಡೆದ ಕ್ರೀಡಾಕೂಟಗಳಲ್ಲಿ ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿಗಳು ವಿಶೇಷ ಸಾಧನೆಗೈದಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಸಾಧನೆಗೈಯ್ಯುವುದಕ್ಕೆ ಪೂರಕವಾದ ಸ್ಫೂರ್ತಿದಾಯಕ ವಾತಾವರಣ ಎಸ್.ಡಿ.ಎಂ ಕಾಲೇಜಿನಿಂದ ದೊರಕುತ್ತಿದೆ. ವಿದ್ಯಾರ್ಥಿಗಳು ಅಂಕಗಳಿಕೆಯ ಜೊತೆ ಜೊತೆಗೆ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗುವ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಆಗ ವ್ಯಕ್ತಿತ್ವದ ಸಮಗ್ರ ಬೆಳವಣಿಗೆ ಸಾಧ್ಯ ಎಂದರು.

ಕಬ್ಬಡ್ಡಿ ಒಂದು ಚುರುಕಿನ ಆಟ. ಇಂತಹ ಆಟಗಳು ವ್ಯಕ್ತಿಯನ್ನು ಆರೋಗ್ಯಕರ ,ಸಮೃದ್ಧ ಹಾಗೂ ಕ್ರಿಯಾಶೀಲರನ್ನಾಗಿಸುತ್ತವೆ. ಸೋಲು ಮತ್ತು ಗೆಲುವುಗಳನ್ನು ಸಮವಾಗಿ ಸ್ವೀಕರಿಸುವ ಮನೋಭಾವನೆಯನ್ನು ಬೆಳೆಸುವಲ್ಲಿ ಇಂತಹ ಕ್ರೀಡೆಗಳ ಪಾತ್ರ ಅಪಾರ ಎಂದರು.

ಕಾರ್ಯಕ್ರಮದ ಅಧ್ಯಕ್ಷ್ಯತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ ಅವರು ಮಾತನಾಡಿದರು. ಕಬ್ಬಡ್ಡಿಯಂತಹ ತಂಡಸ್ಫೂರ್ತಿಯ ಆಟಗಳು ಒಬ್ಬ ಆಟಗಾರನಲ್ಲಿ ತಂಡದ ನಿರ್ವಹಣೆ, ನಾಯಕತ್ವದ ಗುಣ ಹಾಗೂ ಸಂವಹನ ಕಲೆಯನ್ನು ಅಭಿವೃದ್ಧಿಗೊಳಿಸುತ್ತವೆ ಎಂದರು. ಇತ್ತೀಚಿನ ದಿನಗಳಲ್ಲಿ ಕ್ರೀಡೆಯಲ್ಲಿ ಭಾಗವಹಿಸುವವರ ಸಂಖ್ಯೆ ಕಡಿಮೆಯಾಗಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಕೂಡ ಪಾಲ್ಗೊಳ್ಳಲು ಇಂತಹ ಕ್ರೀಡಾಕೂಟಗಳು ಪ್ರೋತ್ಸಾಹಿಸುತ್ತವೆ. ಎಸ್ ಡಿ ಎಂ ಶಿಕ್ಷಣ ಸಂಸ್ಥೆಯು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಸಮಾನ ಅವಕಾಶವನ್ನು ಪ್ರಾರಂಭದಿಂದಲೂ ನೀಡುತ್ತಾ ಬಂದಿದೆ ಎಂದರು.
ಕಾರ್ಯಕ್ರಮದಲ್ಲಿಎಸ್.ಡಿ.ಎಂ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೆಶಕರಾದ ರಮೇಶ್ ಎಚ್, ಶಾರದಾ, ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ರಾಧಾಕೃಷ್ಣ ಅವರು ಉಪಸ್ಥಿತರಿದ್ದರು. ಅಧ್ಯಾಪಕ ಡಾ.ಸುವೀರ್ ಜೈನ್ ನಿರೂಪಿಸಿದರು.

Leave a Reply

Your email address will not be published. Required fields are marked *