Wed. Mar 12th, 2025

Soundarya Murder: ನಟಿ ಸೌಂದರ್ಯ ಸಾವು ಅಪಘಾತವಲ್ಲ ಕೊಲೆ – ಸ್ಟಾರ್ ನಟನ ವಿರುದ್ಧ ದೂರು

Soundarya Murder:(ಮಾ.12) ಕನ್ನಡ ನಟಿ ಸೌಂದರ್ಯ 2004 ಏಪ್ರಿಲ್ 7ರಂದು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದರು. ಆದರೆ ಇದು ಅಪಘಾತವಲ್ಲ ಕೊಲೆ ಎಂದು ವ್ಯಕ್ತಿಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನಟಿ ಸೌಂದರ್ಯ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿಲ್ಲ, ಅವರನ್ನು ಕೊಲೆ ಮಾಡಲಾಗಿದೆ ಎಂದು ಸ್ಟಾರ್ ನಟನ ವಿರುದ್ಧ ದೂರು ದಾಖಲಿಸಲಾಗಿದೆ.

ಇದನ್ನೂ ಓದಿ: ⭕Uppinangady: ಉಪ್ಪಿನಂಗಡಿ ನದಿಯಲ್ಲಿ ರಿಕ್ಷಾ ಚಾಲಕನ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್!!

ಬಹುಭಾಷೆಯಲ್ಲಿ ಸಿನಿಮಾ ಮಾಡಿದ ಸೌಂದರ್ಯ ಕರ್ನಾಟಕದಲ್ಲೂ ಪ್ರಸಿದ್ಧ ನಟಿ. ಆದರೆ ಅವರು ಕೇವಲ 31ನೇ ವಯಸ್ಸಿನಲ್ಲಿ ಜಗತ್ತಿಗೆ ವಿದಾಯ ಹೇಳಿದರು. 2004 ಏಪ್ರಿಲ್ 17ರಂದು ಸೌಂದರ್ಯ ಅವರು ಭಾರತೀಯ ಜನತಾ ಪಕ್ಷ ಮತ್ತು ತೆಲುಗು ದೇಶಂ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಕರೀಂನಗರಕ್ಕೆ ಹೋಗುತ್ತಿದ್ದಾಗ ಅವರ ಖಾಸಗಿ ವಿಮಾನ ಅಪಘಾತಕ್ಕೀಡಾಗಿ ಅವರು ನಿಧನರಾದರು. ವಿಮಾನ ಅಪಘಾತದಲ್ಲಿ ಅವರ ದೇಹ ಸುಟ್ಟು ಕರಕಲಾಗಿ ಹೋಗಿತ್ತು. ಕೊನೆಯದಾಗಿ ಕುಟುಂಬಕ್ಕೆ ಅವರ ಮುಖ ನೋಡಲು ಕೂಡ ಆಗಲಿಲ್ಲ.

ಈ ದುರಂತ ಘಟನೆ ನಡೆದು 21 ವರ್ಷಗಳು ಕಳೆದಿವೆ. ಈ ಪ್ರಕರಣದಲ್ಲಿ ಈಗ ಒಬ್ಬ ಸ್ಟಾರ್ ನಟನ ಹೆಸರು ಬೆಳಕಿಗೆ ಬರುತ್ತಿದೆ. ಟಾಲಿವುಡ್ ನ ಖ್ಯಾತ ಹಿರಿಯ ನಟ ಮೋಹನ್ ಬಾಬು ವಿರುದ್ಧ ದೂರು ದಾಖಲಿಸಲಾಗಿದೆ. ನಟಿ ಸೌಂದರ್ಯ ಅವರ ಸಾವಿಗೆ ನಟ ಮೋಹನ್ ಬಾಬು ಕಾರಣ ಎಂದು ದೂರಿನಲ್ಲಿ ಹೇಳಲಾಗಿದೆ. ಚಿಟ್ಟಿಮಲ್ಲು ಎಂಬಾತ ಖಮ್ಮಂ ಎಸಿಪಿ ಮತ್ತು ಖಮ್ಮಂ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ದೂರಿನ ಪ್ರಕಾರ, ಕನ್ನಡ ನಟಿ ಸೌಂದರ್ಯ ಅವರು ಶಂಷಾಬಾದ್ ಪ್ರದೇಶದ ಜಲ್ಪಲ್ಲಿ ಗ್ರಾಮದಲ್ಲಿ 6 ಎಕರೆ ಭೂಮಿಯನ್ನು ಖರೀದಿಸಿದ್ದರು. ಮೋಹನ್ ಬಾಬು ಅವರಿಗೆ ಆ ಭೂಮಿ ಮೇಲೆ ಕಣ್ಣು ಬಿದ್ದಿತ್ತು. ಹೀಗಾಗಿ ಆ ಭೂಮಿಯನ್ನು ಮಾರಾಟ ಮಾಡಲು ಮೋಹನ್ ಬಾಬು ಸೌಂದರ್ಯ ಹಾಗೂ ಅವರ ಸಹೋದರನನ್ನು ಕೇಳಿದ್ದರು. ಆದರೆ ನಟಿ ಸೌಂದರ್ಯ ಮತ್ತು ಅವರ ಸಹೋದರ ಅಮರನಾಥ್ ಆ ಭೂಮಿಯನ್ನು ಮಾರಾಟ ಮಾಡಲು ಒಪ್ಪಲಿಲ್ಲ. ಈ ವಿಷಯವಾಗಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಇದೇ ಕಾರಣಕ್ಕೆ ಮೋಹನ್ ಬಾಬು ದ್ವೇಷ ಹೊಂದಿದ್ದರು ಎಂದು ದೂರುದಾರ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

2004 ಏಪ್ರಿಲ್ 17ರಂದು ತೆಲಂಗಾಣದಲ್ಲಿ ಪಕ್ಷದ ಪ್ರಚಾರಕ್ಕಾಗಿ ಬೆಂಗಳೂರಿನಿಂದ ಸೌಂದರ್ಯ ಮತ್ತು ಅವರ ಸಹೋದರನನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾಯಿತು. ಅಪಘಾತಕ್ಕೆ ಕಾರಣವೇನೆಂಬುದರ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಆದರೆ ಅಪಘಾತವಾದ ಬಳಿಕ ಮೋಹನ್ ಬಾಬು ಜಲಪಲ್ಲಿಯಲ್ಲಿ 6 ಎಕರೆ ಭೂಮಿಯನ್ನು ಅಕ್ರಮವಾಗಿ ಬಳಸಿಕೊಂಡಿದ್ದಾರೆ ಎಂದು ಆ ವ್ಯಕ್ತಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಮೋಹನ್ ಬಾಬು ಆಕ್ರಮಿಸಿಕೊಂಡಿರುವ ಭೂಮಿಯನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳಬೇಕು. ಈ ಭೂಮಿಯನ್ನು ಅನಾಥಾಶ್ರಮ, ಮಿಲಿಟರಿ, ಪೊಲೀಸರು ಅಥವಾ ಮಾಧ್ಯಮ ಸ್ನೇಹಿತರಿಗೆ ನೀಡಬೇಕೆಂದು ಅವರು ವಿನಂತಿಸಿದ್ದಾರೆ. ಅಲ್ಲದೆ ನಟ ಮೋಹನ್ ಬಾಬು ಅವರಿಂದ ನನಗೆ ಅಪಾಯವಿದೆ. ಆದ್ದರಿಂದ ತಮಗೆ ರಕ್ಷಣೆ ಬೇಕೆಂದು ದೂರುದಾರರು ಕೋರಿದ್ದಾರೆ. ಆದರೆ ಸೌಂದರ್ಯ ಸಾವು ಅಪಘಾತವಲ್ಲ ಕೊಲೆ ಎನ್ನುವುದಕ್ಕೆ ಯಾವುದೇ ಪುರಾವೆಗಳು ಇಲ್ಲ. ಆದರೂ ಜಮೀನಿನ ವಿಚಾರದಲ್ಲಿ ಈ ಕೊಲೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದರ ಸತ್ಯಸತ್ಯಾತೆಯ ಬಗ್ಗೆ ತನಿಖೆ ನಡೆಯಬೇಕಿದೆ.

Leave a Reply

Your email address will not be published. Required fields are marked *