ಉಜಿರೆ (ಮಾ.13): ಹೆಣ್ಣುಮಕ್ಕಳಿಗೆ ಶಿಕ್ಷಣ ಎನ್ನುವುದು ಪಠ್ಯವಲ್ಲ, ಅದು ಅವರ ಸಶಕ್ತೀಕರಣದ ಸಾಧನ. ಪ್ರಸ್ತುತ ಹೆಣ್ಣುಮಕ್ಕಳು ಉನ್ನತ ಶಿಕ್ಷಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡಿರುವುದು ಸಂತೋಷದ ಸಂಗತಿ. ಹೆಣ್ಣು ಶಕ್ತಿಯಾದಾಗ ಸಮಾಜ ಮತ್ತಷ್ಟು ಬೆಳೆಯಲು ಸಾಧ್ಯ ಎಂದು ಮಾತೃಶ್ರೀ ಡಾ. ಹೇಮಾವತಿ ವೀ. ಹೆಗ್ಗಡೆ ಹೇಳಿದರು.


ಇದನ್ನೂ ಓದಿ: 🟠ಉಜಿರೆ: ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಮಹಿಳಾ ದಿನಾಚರಣೆ
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ಇಂದು (ಮಾ. 12) ಮಹಿಳಾ ಕುಂದುಕೊರತೆ ನಿವಾರಣಾ ಕೋಶ, ಆಂತರಿಕ ದೂರುಗಳ ಸಮಿತಿ, ಮಹಿಳಾ ಅಭಿವೃದ್ಧಿ ಕೋಶ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಯೋಗದಲ್ಲಿ ಆಯೋಜಿಸಿದ್ದ ‘ಮಹಿಳೆ ಮತ್ತು ಹೂಡಿಕೆ: ಭವಿಷ್ಯದ ಬೆಳವಣಿಗೆಯ ಸೇತು’ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

“ಮಹಿಳೆ ಎಂದರೆ ಕೇವಲ ಗೃಹಿಣಿಯಲ್ಲ, ಅವಳು ಧೈರ್ಯ, ಸಾಹಸ, ಛಲದ ಪ್ರತೀಕ. ಎಲ್ಲಿ ಮಹಿಳೆಗೆ ಗೌರವ ಸಿಗುತ್ತದೆಯೋ ಅಲ್ಲಿ ಸಮೃದ್ಧಿ ಲಭಿಸುತ್ತದೆ. ಮಹಿಳೆಯರು ದೇಶದ ಆಸ್ತಿಯಾಗಬೇಕು. ನಮ್ಮ ಯೋಜನೆಗಳಿಂದ ಅನೇಕ ಗ್ರಾಮೀಣ ಮಹಿಳೆಯರು ಪ್ರಗತಿ ಸಾಧಿಸಿದ್ದು ಸಂತಸದಾಯಕ” ಎಂದು ಅವರು ಹೇಳಿದರು.
“ನಮ್ಮ ಹಲವು ಯೋಜನೆಗಳಿಂದ ಅನೇಕ ಗ್ರಾಮೀಣ ಮಹಿಳೆಯರು ಪ್ರಗತಿ ಸಾಧಿಸಿದ್ದು, ಜ್ಞಾನ ವಿಕಾಸ, ಗೆಳತಿ ಗ್ರಾಮಾಭಿವೃದ್ಧಿ ಯೋಜನೆಗಳ ಮೂಲಕ ಅನೇಕ ಮನೆಗಳಿಗೆ ಒಳಿತಾಗಿದೆ. ನಮ್ಮ ಯೋಜನೆಗಳಿಂದ ಸಬಲರಾದ ಅನೇಕ ಮಹಿಳೆಯರು ತಮ್ಮ ಸಾಧನೆಗಳನ್ನು ಹಂಚಿಕೊಂಡಾಗ ಅವರ ಕಣ್ಣಲ್ಲಿ ಹೆಮ್ಮೆ ಕಾಣುತ್ತದೆ” ಎಂದರು.
ಮುಖ್ಯ ಅತಿಥಿ, ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಮಾತನಾಡಿ, “ಮಹಿಳೆಯರ ಸಶಕ್ತೀಕರಣದ ವಿಚಾರ ಬಂದಾಗ ಕಲ್ಪನಾ ಚಾವ್ಲಾ, ಇಂದಿರಾ ಗಾಂಧಿ, ರಾಣಿ ಅಬ್ಬಕ್ಕ ಅವರಂತಹ ಹೆಮ್ಮೆಯ ನಾರಿಯರು ನೆನಪಿಗೆ ಬರುತ್ತಾರೆ. ಇವರು ಯಾವುದೇ ಕ್ಷೇತ್ರದಲ್ಲೂ ಮಹಿಳೆಯರು ಕಮ್ಮಿ ಇಲ್ಲ ಎಂಬುದನ್ನು ತೋರಿಸಿದ್ದಾರೆ. ಅವರ ಹಾದಿಗಳು ಇಂದಿನ ಮಹಿಳೆಯರಿಗೆ ಆದರ್ಶ ಮತ್ತು ಸ್ಫೂರ್ತಿದಾಯಕ. ಯಾವ ದೇಶದಲ್ಲಿ ಹೆಣ್ಣನ್ನು ಪೂಜಿಸುತ್ತಾರೋ ಆ ದೇಶ ಸಶಕ್ತವಾಗುತ್ತದೆ”ಎಂದು ಹೇಳಿದರು.
“ಮಹಿಳಾಭಿವೃದ್ಧಿಗಾಗಿ ಡಾ. ಹೇಮಾವತಿ ಅವರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಶ್ರೀ ಕ್ಷೇತ್ರದ ಗ್ರಾಮಾಭಿವೃದ್ಧಿ ಯೋಜನೆಗಳ ಮೂಲಕ ಅನೇಕ ಹೆಣ್ಣು ಮಕ್ಕಳು ಸ್ವಾವಲಂಬಿಗಳಾಗಿದ್ದಾರೆ” ಎಂದರು.
ಎಸ್ ಡಿ ಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ. ಅಧ್ಯಕ್ಷತೆ ವಹಿಸಿ ಮಾತನಾಡಿ, “ದೇಶದಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆ ಇರಬಹುದು. ಆದರೆ ಉನ್ನತ ಶಿಕ್ಷಣದಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚು ಎನ್ನುವುದು ಹೆಮ್ಮೆಯ ವಿಚಾರ. ಹೆಣ್ಣೊಂದು ಕಲಿತರೆ, ಶಾಲೆಯೊಂದು ತೆರೆದಂತೆ ಎಂಬ ಉಕ್ತಿಯಂತೆ, ಮಹಿಳೆಯರು ಇನ್ನಷ್ಟು ಶಿಕ್ಷಣ ಪಡೆಯಬೇಕು ಮತ್ತು ದೇಶದ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಬೇಕು. ಈ ಕಾರ್ಯ ಮುಂದುವರಿಯಲು ಸಮಾಜದಲ್ಲಿ ಸಮಾನ ಅವಕಾಶಗಳನ್ನು ನೀಡಬೇಕಾಗುತ್ತದೆ” ಎಂದರು.

ದೇಶದ ಮಹಿಳೆಯರ ಕೊಡುಗೆ ಮತ್ತು ಸಾಧನೆಗಳನ್ನು ನೆನೆಯಲು, ವಿದ್ಯಾರ್ಥಿನಿಯರಿಂದ ಕಿರು ರೂಪಕ ಪ್ರದರ್ಶಶಿಸಲಾಯಿತು.
ಮಹಿಳೆ ಮತ್ತು ಹೂಡಿಕೆ: ಭವಿಷ್ಯದ ಬೆಳವಣಿಗೆಯ ಸೇತು ಎಂಬ ವಿಷಯದ ಕುರಿತು ಬೆಂಗಳೂರಿನ ಜನಮನ್ ಫಾರ್ಮಸುಟಿಕಲ್ಸ್ ಪ್ರೈ.ಲಿಮಿಟೆಡ್ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕಿ ಅನಿಲಾ ದೀಪಕ್ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಿದರು.
ಕಾರ್ಯಕ್ರಮ ಸಂಚಾಲಕರಾದ ಮಾಲಿನಿ ಅಂಚನ್ ಸ್ವಾಗತಿಸಿ, ಅಕ್ಷತಾ ಜೈನ್ ವಂದಿಸಿದರು. ವಿದ್ಯಾರ್ಥಿನಿಯರಾದ ಪೂರ್ವಿ ಮತ್ತು ತಂಡ ಪ್ರಾರ್ಥಿಸಿದರು. ಮಾನಸ ಅಗ್ನಿಹೋತ್ರಿ, ಹರ್ಷಿನಿ ಹಾಗೂ ಧರಿತ್ರಿ ಭಿಡೆ ನಿರೂಪಿಸಿದರು.

ವಾಣಿಜ್ಯ ಕ್ಷೇತ್ರದ ತಜ್ಞರು, ಉದ್ಯಮಿಗಳು, ಮತ್ತು ಅಂತರಸಂಸ್ಥಾ ಪ್ರತಿನಿಧಿಗಳು ಭಾಗವಹಿಸಿ, ಕ್ರಿಯಾಶೀಲತೆಯ ಮಹತ್ವ ಕುರಿತು ಚರ್ಚೆ ನಡೆಸಿದರು. ಚರ್ಚಾ ಕೂಟದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಸಹ ಪ್ರಾಧ್ಯಾಪಕಿ ಮತ್ತು ಅಧ್ಯಕ್ಷೆ ಡಾ. ಪ್ರೀತಿ ಕೀರ್ತಿ ಡಿಸೋಜ ವಹಿಸಿದ್ದರು. ಚರ್ಚೆಯಲ್ಲಿ ಉಜಿರೆಯ ಶ್ರೀ ಧ.ಮಂ. ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಟಿ. ಎನ್. ಕೇಶವ, ಸಂಧ್ಯಾ ಫ್ರೆಶ್‌ನ ಸಹಸಂಸ್ಥಾಪಕಿ ಮನೋರಮಾ ಭಟ್ಟ ಮತ್ತು ಬೆಳ್ತಂಗಡಿ ರೋಟರಿ ಕ್ಲಬ್ ಪೂರ್ವಾಧ್ಯಕ್ಷೆ ಅರ್ಚನಾ ರಾಜೇಶ್ ಪೈ ಭಾಗವಹಿಸಿದರು.

ಮಹಿಳೆ ಮತ್ತು ಹೂಡಿಕೆ ಎಂಬ ವಿಷಯದ ಕುರಿತು ವಿಶೇಷ ಸಂವಾದಾತ್ಮಕ ಚಟುವಟಿಕೆ ನಡೆಯಿತು. ಧರ್ಮಸ್ಥಳ ಎಸ್.ಕೆ.ಡಿ.ಆರ್.ಡಿ.ಪಿ. ಜ್ಞಾನ ವಿಕಾಸ ಯೋಜನಾಧಿಕಾರಿ ಸಂಗೀತಾ ಮತ್ತು ಬೆಳ್ತಂಗಡಿ ತಾ.ಪಂ. ಕ್ಲಸ್ಟರ್ ಮೇಲ್ವಿಚಾರಕ ಸ್ವಸ್ತಿಕ್ ಜೈನ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.
‘ಎಂಪವರ್ ಎಕ್ಸ್ಪೋ’ ವಿಶಿಷ್ಟ ಪ್ರದರ್ಶನ ಮತ್ತು ಮಾರಾಟ ಮಳಿಗೆ ಏರ್ಪಡಿಸಲಾಗಿತ್ತು, ಇದರಲ್ಲಿ ಮಹಿಳಾ ಉದ್ಯಮಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿದರು. ಡಾ ಹೇಮಾವತಿ ವೀ ಹೆಗ್ಗಡೆ ಉದ್ಘಾಟಿಸಿದರು.
