Sat. Mar 15th, 2025

Andhra Pradesh: ಮಕ್ಕಳು ಸರಿಯಾಗಿ ಓದುತ್ತಿಲ್ಲ ಎಂದು ನೀರಿನಲ್ಲಿ ಮುಳುಗಿಸಿ ಕೊಂದು, ತಾನೂ ಆತ್ಮಹತ್ಯೆಗೆ ಶರಣಾದ ತಂದೆ

ಆಂಧ್ರಪ್ರದೇಶ:(ಮಾ.15) ಓದಿನಲ್ಲಿ ಹಿಂದುಳಿದಿದ್ದ ಇಬ್ಬರು ಮಕ್ಕಳನ್ನು ತಂದೆಯೊಬ್ಬ ನೀರಿನಲ್ಲಿ ಮುಳುಗಿಸಿ ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿರುವ ಭೀಕರ ಘಟನೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ. ಪ್ರತೀ ಬಾರಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದುಕೊಳ್ಳುತ್ತಿದ್ದ ಮಕ್ಕಳನ್ನು ಕಂಡು ಚಿಂತೆಗೀಡಾಗಿದ್ದ ತಂದೆ ಈ ನಿರ್ಧಾರಕ್ಕೆ ಬಂದಿರುವುದಾಗಿ ಡೆತ್​ ನೋಟ್​​ನಲ್ಲಿ ಬರೆದಿದ್ದಾನೆ. ಈ ಕ್ರೂರ ಘಟನೆ ಕಾಕಿನಾಡ ಜಿಲ್ಲೆಯ ಸರ್ಪವರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ: 🛑ಮಂಗಳೂರು: ಪಣಂಬೂರು ಕೋಸ್ಟ್ ಗಾರ್ಡ್ ಅಧಿಕಾರಿ ಪುತ್ರ ನಾಪತ್ತೆ

ಪಶ್ಚಿಮ ಗೋದಾವರಿ ಜಿಲ್ಲೆಯ ತಡೆಪಲ್ಲಿಗುಡೇನಿ ಮೂಲದ ವನಪಲ್ಲಿ ಚಂದ್ರಕಿಶೋರ್ ಸ್ಥಳೀಯ ಒಎನ್‌ಜಿಸಿ ಕಚೇರಿಯಲ್ಲಿ ಸಹಾಯಕ ಲೆಕ್ಕಪತ್ರಗಾರರಾಗಿ ಕೆಲಸ ಮಾಡುತ್ತಿದ್ದ. ತನ್ನ ಇಬ್ಬರು ಮಕ್ಕಳ ಬಗ್ಗೆ ಅತಿಯಾದ ಕನಸು ಕಂಡಿದ್ದ ಈತ ಪ್ರತೀ ಬಾರಿ ಅವರು ಪರೀಕ್ಷೆಯಲ್ಲಿ ಪಡೆಯುತ್ತಿದ್ದ ಅಂಕವನ್ನು ಕಂಡು ಅಸಮಾಧಾನಗೊಂಡಿದ್ದ. ಈ ಬಗ್ಗೆ ಹಲವು ಬಾರಿ ಮನೆಯಲ್ಲಿ ಗಲಾಟೆ ನಡೆದಿದೆ.

ಇತ್ತೀಚಿಗಷ್ಟೇ ಹೋಳಿ ಹಬ್ಬದ ಸಂದರ್ಭದಲ್ಲಿ, ಚಂದ್ರಕಿಶೋರ್ ತಮ್ಮ ಪತ್ನಿ ತನುಜಾ ಮತ್ತು ಇಬ್ಬರು ಪುತ್ರರಾದ ಜೋಶಿಲ್ ಮತ್ತು ನಿಖಿಲ್ ಅವರೊಂದಿಗೆ ತಮ್ಮ ಕಚೇರಿಗೆ ಹೋಗಿದ್ದರು. ನಂತರ, ಮಕ್ಕಳನ್ನು ಸಮವಸ್ತ್ರದ ಅಳತೆಗಳನ್ನು ತೆಗೆದುಕೊಳ್ಳಲು ಟೈಲರ್ ಬಳಿ ಕರೆದೊಯ್ಯುತ್ತಿರುವುದಾಗಿ ಪತ್ನಿಗೆ ತಿಳಿಸಿ ಕಚೇರಿಯಲ್ಲಿಯೇ ಇರಲು ಮನವೊಲಿಸಿದ್ದಾನೆ. ಚಂದ್ರಕಿಶೋರ್ ಇಬ್ಬರು ಮಕ್ಕಳನ್ನು ನೇರ ಮನೆಗೆ ಕರೆದುಕೊಂಡು ಹೋಗಿದ್ದಾನೆ.

ಇಬ್ಬರು ಮಕ್ಕಳನ್ನು ಮನೆಗೆ ಕರೆದೊಯ್ದ ನಂತರ, ಚಂದ್ರಕಿಶೋರ್ ಅವರ ಕೈಕಾಲುಗಳನ್ನು ಕಟ್ಟಿ, ತಲೆಗಳನ್ನು ನೀರು ತುಂಬಿದ ಬಕೆಟ್‌ಗಳಲ್ಲಿ ಮುಳುಗಿಸಿ ಕೊಂದಿದ್ದಾನೆ. ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪತಿ ಬಹಳ ಸಮಯವಾದರೂ ಹಿಂತಿರುಗದಿದ್ದಾಗ, ತನುಜಾ ತನ್ನ ಸಹೋದ್ಯೋಗಿಗಳೊಂದಿಗೆ ಮನೆಗೆ ಹೋಗಿದ್ದಾಳೆ. ಕಿಟಕಿಯಿಂದ ಮನೆಯೊಳಗೆ ನೋಡಿದಾಗ, ಪತಿ ಮತ್ತು ಮಕ್ಕಳು ಸತ್ತಿರುವುದು ಕಂಡು ಬಂದಿದೆ.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದ್ದು, ಚಂದ್ರಕಿಶೋರ್ ಬರೆದಿರುವ ಡೆತ್​ ನೋಟ್​​ ಸ್ಥಳದಲ್ಲಿ ಪತ್ತೆಯಾಗಿದೆ. ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ತಮ್ಮ ಮಕ್ಕಳು ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ, ಓದಿನಲ್ಲಿ ತುಂಬಾ ಹಿಂದಿದ್ದಾರೆ. ಹೀಗಾದರೆ ಅವರಿಗೆ ಭವಿಷ್ಯವಿಲ್ಲ, ಅದಕ್ಕಾಗಿಯೇ ತಮ್ಮ ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಚಂದ್ರಕಿಶೋರ್ ಆತ್ಮಹತ್ಯೆ ಪತ್ರದಲ್ಲಿ ಬರೆದಿದ್ದಾರೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು