Mon. Mar 17th, 2025

Mangaluru: ಹಿಂದೂ ಯುವತಿ ಜೊತೆಗಿದ್ದ ಅನ್ಯಕೋಮಿನ ಯುವಕ – ಯುವಕನನ್ನು ಅರೆ ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಥಳಿಸಿದ ಪ್ರಕರಣ – 19 ಮಂದಿ ಆರೋಪಿಗಳು ಖುಲಾಸೆ

ಮಂಗಳೂರು:(ಮಾ.17) ಹಿಂದೂ ಯುವತಿ ಜೊತೆಗಿದ್ದ ಎಂದು 2015ರಲ್ಲಿ ಮುಸ್ಲಿಂ ಯುವಕನೋರ್ವನನ್ನು ಕಾರಿನಿಂದ ಎಳೆದು ಅರೆ ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಥಳಿಸಿ ವಿಡಿಯೋ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 19 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಇದನ್ನೂ ಓದಿ: ⭕ಮುಲ್ಕಿ: ಓವ‌ರ್ ಟೇಕ್ ಮಾಡುವ ಭರದಲ್ಲಿ ಸ್ಕೂಟರ್ ಗೆ ಡಿಕ್ಕಿ ಹೊಡೆದ ಬೈಕ್‌


2015ರ ಆಗಸ್ಟ್ 28ರಂದು ಮಂಗಳೂರಿನ ಅತ್ತಾವರದ ಈಝೀ ಡೇ ಮಳಿಗೆಯಲ್ಲಿ ಕೆಲಸಕ್ಕಿದ್ದ ಯುವತಿಯೊಂದಿಗೆ ಮಳಿಗೆಯ ವ್ಯವಸ್ಥಾಪಕ ಶಾಕೀರ್ ಎಂಬಾತ ಕಾರಿನಲ್ಲಿ ಹೋಗುತ್ತಿದ್ದ. ಈತನ ಕಾರನ್ನು ಅತ್ತಾವರ ನಂದಿಗುಡ್ಡೆ ಬಳಿ ಅಡ್ಡಗಟ್ಟಿದ್ದ ಹಿಂದೂ ಸಂಘಟನಾ ಕಾರ್ಯಕರ್ತರು ಯುವತಿಯನ್ನು ಕಾರಿನಲ್ಲಿ ಕರೆದೊಯ್ಯುತ್ತಿದ್ದಾನೆ ಎಂದು ಆರೋಪಿಸಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ್ದರು.


ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭ ಸಹೋದ್ಯೋಗಿ ಯುವತಿ 2ಸಾವಿರ ಹಣ ಬೇಕೆಂದು ಕೇಳಿದ್ದಳು. ಆದ್ದರಿಂದ ಶಾಕೀರ್ ಅತ್ತಾವರ ಕೆಎಂಸಿ ಆಸ್ಪತ್ರೆಯ ಬಳಿ ತೆರಳಿ ಹಣ ಕೊಡುತ್ತಿದ್ದ ಎನ್ನಲಾಗಿತ್ತು. ಈ ವೇಳೆ ನಾಲ್ಕು ಬೈಕ್‌ಗಳಲ್ಲಿ ಬಂದ ಹಿಂದೂ ಸಂಘಟನಾ ಕಾರ್ಯಕರ್ತರ ತಂಡ ಕಾರಿಗೆ ಅಡ್ಡವಾಗಿ ಬೈಕ್ ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಶಾಕಿರ್‌ನನ್ನು ಕಾರಿನಿಂದ ಎಳೆದು ಹಾಕಿ ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದರು. ಬಳಿಕ ಆತನ ಬಳಿಯಿದ್ದ ಎಟಿಎಂ ಕಾರ್ಡ್, ಎರಡು ಸಾವಿರ ನಗದು, ಮೊಬೈಲ್ ಕಿತ್ತುಕೊಂಡು ಹೋಗಿರುವುದಾಗಿ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ಪೊಲೀಸರು 19 ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ 78 ದಾಖಲೆ, 33 ಸಾಕ್ಷಿಗಳನ್ನು ಹಾಜರುಪಡಿಸಿದರೂ ಪೊಲೀಸರಿಗೆ ಆರೋಪ ಸಾಬೀತು ಪಡಿಸಲು ಸಾಧ್ಯವಾಗದೇ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ 19 ಜನ ಆರೋಪಿಗಳನ್ನು ಖುಲಾಸೆಗೊಳಿಸಿ ಮಾ.15ರಂದು ತೀರ್ಪು ನೀಡಿದ್ದಾರೆ. ಆರೋಪಿಗಳ ಪರವಾಗಿ ವಕೀಲರಾದ ಬಿ.ಅರುಣ ಬಂಗೇರ, ಮೋಹನರಾಜ್ ಕೆ.ಆರ್, ಆಶಾ ನಾಯ್ಕ ಸುನೀಲ್ ಮತ್ತು ರಿಹಾನ ಪರ್ವೀನ್ ವಾದಿಸಿದ್ದರು.

Leave a Reply

Your email address will not be published. Required fields are marked *