ಉಜಿರೆ: (ಮಾ.17) ಮಾಧ್ಯಮ ಕ್ಷೇತ್ರ ವಿಸ್ತಾರಗೊಂಡ ನಂತರ ಸೃಷ್ಟಿಯಾದ ಮಹತ್ವದ ಔದ್ಯೋಗಿಕ ಅವಕಾಶಗಳನ್ನು ಸದುಪಯೋಗಿಸಿಕೊಂಡು ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಎಸ್.ಡಿ,ಎಂ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಹೆಗ್ಗುರುತು ಮೂಡಿಸುತ್ತಿರುವುದು ಪ್ರಶಂಸನೀಯ ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಅಭಿಪ್ರಾಯಪಟ್ಟರು.


ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಶನಿವಾರ(ಮಾ.15) ಹಮ್ಮಿಕೊಂಡಿದ್ದ ‘ಅಲ್ಯುಮ್ನಿ ಮೀಟ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಇವರು ಮಾತನಾಡಿದರು.

ನಿರಂತರ ಪ್ರಾಯೋಗಿಕ ಕಲಿಕೆ ಹಾಗೂ ಸೂಕ್ತ ಮಾರ್ಗದರ್ಶನದ ರೂಪಕವಾಗಿ ಮಾದರಿ ವ್ಯಕ್ತಿತ್ವವುಳ್ಳ ವಿದ್ಯಾರ್ಥಿಗಳು ರೂಪುಗೊಳ್ಳುತ್ತಾರೆ, ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳ ದೋರಣೆಗಳು ನಿಲುವುಗಳು ಆದರ್ಶಪ್ರಾಯವಾಗಿರುತ್ತವೆ. ಅವರ ನಡೆ-ನುಡಿ, ವ್ಯಕ್ತಿತ್ವಗಳು ಇತರರಿಗೆ ಮಾದರಿಯಾಗುವಂತೆ ರೂಪಿಸಿದ ಕೀರ್ತಿ ವಿಭಾಗದ ಮುಖ್ಯಸ್ಥರಾದ ಡಾ.ಭಾಸ್ಕರ ಹೆಗಡೆ ಅವರಿಗೆ ಸಲ್ಲುತ್ತದೆ. ಮಾದರಿ ವ್ಯಕ್ತಿತ್ವ ರೂಪಿಸುವ ಪ್ರಕ್ರಿಯೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಮಾರ್ಗದರ್ಶದ ಪಾತ್ರವೂ ಹಿರಿದು ಎಂದರು.

ಹಿರಿಯ ವಿದ್ಯಾರ್ಥಿಗಳೇ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ರಾಯಭಾರಿಗಳು. ಪತ್ರಿಕೋದ್ಯಮ ಎಂದರೆ ಕೇವಲ ಪತ್ರಿಕೆಗಳ ಉದ್ಯಮ ಎಂಬ ಅರ್ಥವಿತ್ತು, ಆಧುನಿಕ ಯುಗದಲ್ಲಿ ಮಾಧ್ಯಮ ವಲಯ ವಿಸ್ತಾರವಾಯಿತು. ಸೃಜನಾತ್ಮಕತೆ ಹಾಗೂ ಕ್ರಿಯಾಶೀಲತೆಯ ಅವಕಾಶಗಳು ಮುಕ್ತವಾಗಿ ತೆರೆದುಕೊಂಡಿರುವ ಸಂದರ್ಭದಲ್ಲಿ, ಮಾಧ್ಯಮ ಕ್ಷೇತ್ರದ ಬಹುತೇಕ ವಲಯಗಳಲ್ಲಿ ಉನ್ನತ ಹುದ್ದೆಗಳನ್ನು ಎಸ್.ಡಿ.ಎಂ ನ ಹಿರಿಯ ವಿದ್ಯಾರ್ಥಿಗಳೇ ಅಲಂಕರಿಸುವ ಮೂಲಕ ಸಂಸ್ಥೆಯ ಹೆಮ್ಮೆಯಾಗಿದ್ದಾರೆ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿಶ್ವನಾಥ್ ಪಿ. ಮಾತನಾಡಿದರು. ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಗುರುತಿಸಿಕೊಂಡಿದೆ. ಸಂಸ್ಥೆಯ ಈ ಸಾಧನೆಗೆ ಸಮಾಜಕ್ಕೆ ನಿರಂತರ ಕೊಡುಗೆಗಳನ್ನು ನೀಡಿದ ಹಳೆಯ ವಿದ್ಯಾರ್ಥಿಗಳೇ ಕಾರಣ ಎಂದು ಅಭಿಪ್ರಾಯಪಟ್ಟರು. ‘ಅಲ್ಯುಮ್ನಿ ಮೀಟ್’ ಮೂಲಕ ಸಂಸ್ಥೆಯ ಪ್ರತಿಷ್ಠೆಯನ್ನು ಎತ್ತರಕ್ಕೆ ಕೊಂಡೊಯ್ದ ಹಿರಿಯ ವಿದ್ಯಾರ್ಥಿಗಳ ಸಾಧನೆಗನ್ನು ಗುರುತಿಸಿ ಗೌರವಿಸುವ ಕಾರ್ಯ ಜರುಗಬೇಕು ಎಂದರು.
ಕಾರ್ಯಕ್ರಮದಲ್ಲಿ 2008 ರಿಂದ 2024 ರವರೆಗೆ ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ಸ್ನಾತಕೋತ್ತರ
ಅಧ್ಯಯನ ವಿಭಾಗದಲ್ಲಿ ಅಭ್ಯಾಸಮಾಡಿದ 200ಕ್ಕೂ ಅಧಿಕ ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ
ಮುಖ್ಯಸ್ಥರಾದ ಡಾ. ಭಾಸ್ಕರ್ ಹೆಗ್ಡೆ ಹಾಗೂ ಸುನೀಲ್ ಧರ್ಮಸ್ಥಳ ಉಪಸ್ಥಿತರಿದ್ದರು.
