ಉಜಿರೆ (ಮಾ.17): ಪ್ರತಿಯೊಂದು ವಿಚಾರವನ್ನು ನೇರವಾಗಿ ಒಪ್ಪದೇ ಅದನ್ನು ಪ್ರಶ್ನಿಸುವ ಅಭ್ಯಾಸ ಬೆಳೆಸಿಕೊಂಡಾಗ ಕ್ರಿಯಾಶೀಲತೆ ಹೆಚ್ಚಾಗುತ್ತದೆ ಎಂದು ಬೆಂಗಳೂರಿನ ಅಮೆಜಾನ್ ಡೆವಲಪ್ ಮೆಂಟ್ ಸೆಂಟರ್ನ ರಿಸ್ಕ್ ಇನ್ವೆಸ್ಟಿಗೇಷನ್ ಮ್ಯಾನೇಜರ್ ದೀಪಕ್ ರಾಜ್ ಹೇಳಿದರು.

ಇದನ್ನೂ ಓದಿ: ⭕ಮಂಗಳೂರು: ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಡ್ರಗ್ಸ್ ಬೇಟೆ
ಉಜಿರೆಯ ಶ್ರೀ ಧ. ಮಂ. ಕಾಲೇಜಿನಲ್ಲಿ ವಾಣಿಜ್ಯ ಮತ್ತು ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ವಿಭಾಗಗಳ ಆಶ್ರಯದಲ್ಲಿ ಕಾಮರ್ಸ್ ಕ್ಯಾಂಪಸ್ ಅಸೋಸಿಯೇಷನ್ (ಸಿ.ಸಿ.ಎ.) ಮಾ. 15 ರಂದು ಆಯೋಜಿಸಿದ್ದ ರಾಜ್ಯ ಮಟ್ಟದ ಅಂತರ್ ಕಾಲೇಜು ವಾಣಿಜ್ಯ ಮತ್ತು ವ್ಯವಹಾರ ಆಡಳಿತ ಉತ್ಸವ ‘ವೆಂಚುರ- 2025’ ಉದ್ಘಾಟಿಸಿ ಅವರು ಮಾತನಾಡಿದರು.


“ಪ್ರತಿಯೊಂದು ವಿಚಾರದಲ್ಲೂ ಏನು ಮತ್ತು ಯಾಕೆ ಎನ್ನುವ ಪ್ರಶ್ನೆಗೆ ಉತ್ತರ ನಮ್ಮಲ್ಲಿರಬೇಕು. ಆ ಸ್ಪಷ್ಟತೆ ಇದ್ದರೆ ಮಾತ್ರ ಯಶಸ್ಸು ನಮ್ಮದಾಗುತ್ತದೆ. ಪ್ರಪಂಚವು ಅನ್ವೇಷಕರನ್ನು (Inventors) ಸದಾ ನೆನಪಿನಲ್ಲಿ ನೆನಪಿಟ್ಟುಕೊಳ್ಳುತ್ತದೆ. ಹಾಗಾಗಿ ಕುತೂಹಲ ಇರುವ ಮನಸ್ಸುಗಳು ಮಾತ್ರ ಇನ್ವೆಂಟರ್ ಆಗಲು ಸಾಧ್ಯ. ಪ್ರತೀ ದಿನ 5 ನಿಮಿಷ ನಮ್ಮನ್ನು ಅವಲೋಕನ ಮಾಡಲು ಸಮಯ ನೀಡುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು ನಮ್ಮನ್ನು ನಾವು ಅರಿತುಕೊಳ್ಳಬೇಕು” ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ)ದ ಸಂಯೋಜಕ ಗಜಾನನ ಆರ್. ಭಟ್ ಮಾತನಾಡಿ, “ವಾಣಿಜ್ಯ ಮತ್ತು ಉದ್ಯಮ ಎನ್ನುವುದು ಎಲ್ಲಾ ಅಪಾಯಗಳ ವಿರುದ್ಧ ಹೋರಾಡುವುದನ್ನು ಕಲಿಸುವ ಪ್ರಪಂಚವಾಗಿದೆ. ಉದ್ಯಮಿಗಳು ಈ ದೇಶವನ್ನು ನಿರ್ಮಾಣ ಮಾಡುವವರು. ಹಣ ಎನ್ನುವುದು ನಮಗೆ ಹೂಡಿಕೆ, ಗಳಿಸುವಿಕೆಯನ್ನು ಕಲಿಸುತ್ತದೆ” ಎಂದರು.

ಇದೇ ಸಂದರ್ಭದಲ್ಲಿ, ಕಾಲೇಜಿನ ವಾಣಿಜ್ಯ ನಿಕಾಯದ ಡೀನ್, ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ವಿಭಾಗ ಮುಖ್ಯಸ್ಥೆ ಶಕುಂತಲಾ ಅವರಿಗೆ ನಿವೃತ್ತ ಪ್ರಾಂಶುಪಾಲ ಡಾ. ಉದಯಚಂದ್ರ ಪಿ.ಎನ್. ಅವರು ಸಂಶೋಧನೆಗೆ ನೆರವಾಗಲು ಪ್ರೋತ್ಸಾಹಧನ ನೀಡಿದರು.
ಫೆಸ್ಟ್ ಅಂಗವಾಗಿ ಆಯೋಜಿಸಿದ್ದ ಅಂತರ್ ತರಗತಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಸಿ.ಎಸ್.ಇ.ಇ.ಟಿ. ಮತ್ತು ಸಿ.ಎ. ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ರತ್ನಾವತಿ ಕೆ., ಕಾರ್ಯಕ್ರಮ ಸಂಯೋಜಕರಾದ ವಿನುತಾ ಡಿ.ಎಂ. ಮತ್ತು ಗುರುರಾಜ್ ಜಿ., ಸಿ.ಸಿ.ಎ. ಸಿಇಒ ದೀಕ್ಷಿತಾ, ಕಾಲೇಜಿನ ವಿವಿಧ ವಿಭಾಗದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಮತ್ತು ವಿವಿಧ ಕಾಲೇಜುಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಶಕುಂತಲಾ ಸ್ವಾಗತಿಸಿದರು. ಕ್ಷಿತಿ ಮತ್ತು ತಂಡ ಪ್ರಾರ್ಥಿಸಿದರು. ಸಿ.ಸಿ.ಎ. ಕಾರ್ಯದರ್ಶಿ ಸಹನಾ ಡೋಂಗ್ರೆ ವಂದಿಸಿದರು. ಸುಶ್ಮಿತಾ ಬಿ., ಜಯಸೂರ್ಯ ನಾಯಕ್, ಕ್ಷಿತಿ ಕೆ. ರೈ, ಐಶ್ರೀ ಕೆ., ಶರ್ಮಿಳಾ ಎಂ.ಆರ್., ಭೂಮಿಕಾ ಕೆ.ಎಲ್. ಜೈನ್ ಕಾರ್ಯಕ್ರಮ ನಿರ್ವಹಿಸಿದರು.
