Fri. Apr 11th, 2025

Haliyal : ಅಂಗನವಾಡಿ ಮಕ್ಕಳ ಆಹಾರ ಕಳ್ಳತನ – ಮೂವರ ವಿರುದ್ಧ ದೂರು ದಾಖಲು, ಇಬ್ಬರ ಬಂಧನ

ಹಳಿಯಾಳ :(ಮಾ.20) ಅಂಗನವಾಡಿ ಮಕ್ಕಳಿಗೆ ಹಾಗೂ ಬಾಣಂತಿ ಮತ್ತು ಗರ್ಭಿಣಿ ಮಹಿಳೆಯರಿಗೆ ಉಚಿತವಾಗಿ ನೀಡಲಾಗುವ ಪೌಷ್ಟಿಕ ಆಹಾರದ ಪ್ಯಾಕೆಟ್ ಮತ್ತು ಹಾಲಿನ ಪೌಡರ್ ಪ್ಯಾಕೆಟ್’ಗಳನ್ನು ಕಳ್ಳತನ ಮಾಡಿ, ಬಿ.ಕೆ ಹಳ್ಳಿಯ ಹೊಲದಲ್ಲಿರುವ ದನದ ಕೊಟ್ಟಿಗೆಯಲ್ಲಿ ಅಕ್ರಮವಾಗಿ ದಾಸ್ತಾನು ಇಡಲಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ದೂರು ದಾಖಲಾಗಿರುವ ಬಗ್ಗೆ ಮಂಗಳವಾರ ನಡೆದಿದೆ.

ಇದನ್ನೂ ಓದಿ: ⭕ಉಡುಪಿ: ಮೀನು ಕದ್ದ ಆರೋಪ

ಈ ಬಗ್ಗೆ ಖಚಿತ ಮಾಹಿತಿಯಡಿ ತಹಶೀಲ್ದಾರ್ ಪ್ರವೀಣ್ ಹುಚ್ಚಣ್ಣನವರ ಹಾಗೂ ಸಿಪಿಐ ಜೈಪಾಲ್ ಪಾಟೀಲ್ ನೇತೃತ್ವದಲ್ಲಿ ದಾಳಿ ಮಾಡಲಾಗಿತ್ತು. ಈ ಪ್ರಕರಣದ ಕುರಿತಂತೆ ಆಹಾರ ನಿರೀಕ್ಷಕರಾದ ಸಂತೋಷ್ ಶಿವಾಜಿ ತೋಂಡಲೆ ಅವರು ಹಳಿಯಾಳ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ.

ಕಾವಲವಾಡದ ನಿವಾಸಿ ವಿಷ್ಣು ಮಿಶಾಳಿ ಮತ್ತು ಬಿ.ಕೆ ಹಳ್ಳಿಯ ಸಹದೇವ ರುದ್ರಪ್ಪ ಗೌಡ ಇಬ್ಬರು ಸೇರಿಕೊಂಡು ಕರ್ನಾಟಕ ಸರಕಾರದಿಂದ ಅಂಗನವಾಡಿ ಮಕ್ಕಳಿಗೆ ಉಚಿತವಾಗಿ ಪೂರೈಕೆಯಾಗುವ ಹಾಲಿನ‌ ಪುಡಿ ಮತ್ತು ಪುಷ್ಟಿ ಪುಡಿಗಳ ಪ್ಯಾಕೆಟ್ ಗಳನ್ನು ಅಕ್ರಮವಾಗಿ ಖರೀದಿ ಮಾಡಿಕೊಂಡು, ಕೆಎ: 65/0057 ನೋಂದಣಿ ಸಂಖ್ಯೆಯ ಅಶೋಕ್ ಲೇಲ್ಯಾಂಡ್ ವಾಹನದಲ್ಲಿ ಹಳಿಯಾಳ ಪಟ್ಟಣದ ದೇಶಪಾಂಡೆ ನಗರದ ನಿವಾಸಿಯಾಗಿರುವ ಚಾಲಕ ಲಕ್ಷ್ಮಣ ನಾಗಪ್ಪ ಹುನಗುಂದ ಈತನು ಯಾವುದೇ ಪಾಸ್ ಅಥವಾ ಪರವಾನಿಗೆಯನ್ನು ಪಡೆದುಕೊಳ್ಳದೆ ಸಾಗಾಟ ಮಾಡಿಕೊಂಡು ಬಂದು ಬಿ.ಕೆ ಹಳ್ಳಿ ಸರ್ವೆ ನಂಬರ್ 23ರಲ್ಲಿನ ಸಹದೇವ ರುದ್ರಪ್ಪಗೌಡ ಇವರ ಹೊಲದ ದನದ ಕೊಟ್ಟಿಗೆಯಲ್ಲಿ ಅಕ್ರಮ ಲಾಭಕ್ಕಾಗಿ ಮಾರಾಟ ಮಾಡುವ ಉದ್ದೇಶದಿಂದ ದಾಸ್ತಾನು ಮಾಡುವ ಸಮಯದಲ್ಲಿ ತಹಶೀಲ್ದಾರ್ ಪ್ರವೀಣ್ ಹುಚ್ಚಣ್ಣನವರ ಹಾಗೂ ಸಿಪಿಐ ಜೈಪಾಲ್ ಪಾಟೀಲ್ ನೇತೃತ್ವದಲ್ಲಿ ಅಧಿಕಾರಿಗಳ ಮತ್ತು ಪೊಲೀಸರ ತಂಡ ದಾಳಿಯನ್ನು ಮಾಡಿತ್ತು. ದಾಳಿಯ ಸಂದರ್ಭದಲ್ಲಿ ಹಾಲಿನ ಪುಡಿ ತುಂಬಿದ 35 ಚೀಲಗಳು 1270.7 ಕೆಜಿ, ಅಂದಾಜು ಇದರ ಮೌಲ್ಯ ರೂ.1,52,400/-, ಅಂಗನವಾಡಿ ಮಕ್ಕಳಿಗೆ ಪೂರೈಕೆಯಾಗುವ ಪುಷ್ಠಿ ಅಂತ ಹೆಸರಿರುವ 205.4 ಕೆ.ಜಿ ತೂಕವನ್ನು ಹೊಂದಿರುವ 79 ಪ್ಯಾಕೆಟ್ ಗಳು ರೂ.20,500/- ಅಂದಾಜು ಮೌಲ್ಯದ ಸ್ವತ್ತುಗಳೊಂದಿಗೆ ಸಿಕ್ಕಿದ್ದರಿಂದ ಮೂವರ ಮೇಲೆ ದೂರನ್ನು ದಾಖಲಿಸಲಾಗಿದೆ.

ಪ್ರಕರಣದ ಪ್ರಮುಖ ಆರೋಪಿಯಾಗಿರುವ ವಿಷ್ಣು ವಿಶಾಳಿ ಈತನು ಪರಾರಿಯಾಗಿದ್ದು, ಬಿ.ಕೆ.ಹಳ್ಳಿಯ ಸಹದೇವ ರುದ್ರಪ್ಪ ಗೌಡ ಮತ್ತು ಪಟ್ಟಣದ ದೇಶಪಾಂಡೆ ನಗರದ ನಿವಾಸಿ ಲಕ್ಷ್ಮಣ ನಾಗಪ್ಪ ಹುನಗಂದ ಇವರನ್ನು ಬಂದಿಸಲಾಗಿದೆ. ಈ ಪ್ರಕರಣದ ಪ್ರಮುಖ ಆರೋಪಿ ಅಂಗನವಾಡಿಗಳಿಗೆ ಆಹಾರ ವಸ್ತುಗಳ ಪೂರೈಕೆಯನ್ನು ಗುತ್ತಿಗೆ ಪಡೆದಿರುವ, ಕಾಂಗ್ರೆಸ್ ಮುಖಂಡ ಹಾಗೂ ಕಾವಲವಾಡ ಸಹಕಾರಿ ಸಂಘದ ಅಧ್ಯಕ್ಷನಾಗಿರುವ ವಿಷ್ಣು ಮಿಶಾಳಿ ಈತನ ಬಂಧನಕ್ಕಾಗಿ ಸಿಪಿಐ ಜೈಪಾಲ್ ಪಾಟೀಲ್ ಅವರ ನೇತೃತ್ವದಲ್ಲಿ ಪಿಎಸ್ಐ ವಿನೋದ್ ರೆಡ್ಡಿ ಅವರು ಬಲೆ ಬೀಸಿದ್ದಾರೆ. ಇಡೀ ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಸಂಚಲನ ಮೂಡಿಸಿದ್ದ ಪ್ರಕರಣ ಇದಾಗಿದ್ದು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಮಗ್ರ ತನಿಖೆಯಾದರೇ ಮತ್ತಷ್ಟು ಕರ್ಮಕಾಂಡ ಹೊರಬೀಳಲಿದೆ ಎನ್ನುವ ಮಾಹಿತಿ ಸದ್ಯಕ್ಕೆ ಲಭ್ಯವಾಗಿದೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು