Fri. Apr 11th, 2025

Ujire: ಎಸ್.ಡಿ.ಎಂ ಸಾಧಕರ ದಿನ ಕಾರ್ಯಕ್ರಮ “ಯಶಸ್ಸಿನ ಸ್ವಯಂವ್ಯಾಖ್ಯಾನ ವಿನೂತನ ಸಾಧನೆಗೆ ಪೂರಕ”

ಉಜಿರೆ (ಮಾ.20): ಯಶಸ್ಸಿನ ಸೂತ್ರಗಳು ಭಿನ್ನವಾಗಿರುತ್ತವೆ. ಸಾಧಿಸುವವರು ಅವರದ್ದೇ ಆದ ಯಶಸ್ಸಿನ ವ್ಯಾಖ್ಯಾನ ಕಂಡುಕೊಳ್ಳಬೇಕು. ಹಾಗಾದಾಗ ಮಾತ್ರ ಉಳಿದವರಿಗಿಂತ ಭಿನ್ನ ಸಾಧನೆ ಸಾಧ್ಯವಾಗುತ್ತದೆ ಎಂದು ಕ್ವಿಜ್ ಮಾಸ್ಟರ್, ಬೆಂಗಳೂರಿನ ಕ್ಯೂರಿಯಾಸಿಟಿ ನಾಲೆಡ್ಜ್ ಸೊಲ್ಯೂಷನ್ಸ್ ಸಂಸ್ಥಾಪಕರಾದ ಮೇಘವಿ ಮಂಜುನಾಥ್ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ⭕ವೇಣೂರು: ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ಉಜಿರೆಯ ಎಸ್ ಡಿ ಎಂ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಗುರುವಾರದಂದು ಆಯೋಜಿಸಿದ್ದ ಸಾಧಕರ ದಿನ ಕಾರ್ಯಕ್ರಮದಲ್ಲಿ ಮುಖ್ಯ ಆಶಯ ಭಾಷಣ ಪ್ರಸ್ತುತಪಡಿಸಿ ಮಾತನಾಡಿದರು.

ಸಾಧನೆಗಳ ಹಿಂದೆ ಅನೇಕ ಪ್ರಯತ್ನಗಳಿರುತ್ತವೆ. ಹಲವು ವಿಫಲ ಯತ್ನಗಳ ನಂತರ ಯಶಸ್ಸು ದೊರಕಿರುತ್ತದೆ. ಎಲ್ಲ ಸಾಧಕರ ಹಿಂದಿನ ವಿವಿಧ ಪ್ರಯತ್ನಗಳು ಮತ್ತು ತೊಡಗಿಸಿಕೊಳ್ಳುವ ಬದ್ಧತೆಯನ್ನು ತಿಳಿದುಕೊಳ್ಳಬೇಕು. ಆಗ ಸಾಧನೆಯ ಹಾದಿಯನ್ನು ಸುಗಮಗೊಳಿಸಿಕೊಳ್ಳಬಹುದು ಎಂದು ಹೇಳಿದರು.

ತರಗತಿಗಳ ಕಲಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ಭವಿಷ್ಯದ ಹಾದಿ ಯಾವುದಾಗಿರಬೇಕು ಎಂಬ ಬಗ್ಗೆ ಸ್ಪಷ್ಟನೆ ಸಿಗುತ್ತದೆ. ಅದರಿಂದ ನಿರ್ದಿಷ್ಟ ಕ್ಷೇತ್ರದಲ್ಲಿ ಸಾಧನೆಯ ಹೆಗ್ಗುರುತು ಮೂಡಿಸಬಹುದಾದ ಆತ್ಮವಿಶ್ವಾಸ ಸಾಧ್ಯವಾಗುತ್ತದೆ ಎಂದರು. ಯಶಸ್ಸು ಮತ್ತು ವೈಫಲ್ಯಗಳನ್ನು ಪ್ರಾಯೋಗಿಕವಾಗಿ ಸ್ವೀಕರಿಸಬೇಕು. ಒಂದು ಬಗೆಯ ಸಮತೋಲನ ಪ್ರಜ್ಞೆ ಈ ಸಂದರ್ಭದಲ್ಲಿ ನೆರವಾಗುತ್ತದೆ. ಪರೀಕ್ಷೆ ಬರೆಯುವಾಗ ಮತ್ತು ಕಲಿಕೆ ನಂತರದ ವೃತ್ತಿಪರ ನಿರ್ವಹಣೆಯ ಹಂತಗಳಲ್ಲಿ ಈ ಸಮತೋಲನ ಪ್ರಜ್ಞೆ ಪೂರಕವಾಗುತ್ತದೆ ಎಂದು ಹೇಳಿದರು.

ಹೊಸ ಕ್ಷೇತ್ರಗಳಲ್ಲಿ ಸಾಧಿಸುವಾಗ ಹಲವು ಸವಾಲುಗಳು ಎದುರಾಗುತ್ತವೆ. ಕ್ವಿಜ್ ಸಂಬಂಧಿತ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು ಹವ್ಯಾಸಿ ಆದ್ಯತೆಯಾಗಿ ಪರಿಗಣಿಸಿದ್ದರು. ಕ್ವಿಜ್ ನಿರ್ವಹಣೆ ಪ್ರತ್ಯೇಕ ವೃತ್ತಿಯಾಗಿ ಪರಿಗಣಿತ ಆಗಿರಲಿಲ್ಲ. ಅದೇ ಸಂದರ್ಭದಲ್ಲಿ ಕ್ವಿಜ್ ಮಾಸ್ಟರ್ ಆದಾಗ ಸಹಜವಾಗಿಯೇ ಸವಾಲುಗಳು ಎದುರಾದವು. ಅಂಥ ಸವಾಲುಗಳನ್ನು ಸಮರ್ಥವಾಗಿ ಎದುರಿಸಿದ ನಂತರ ತಮಗೆ ಈ ಕ್ಷೇತ್ರದಲ್ಲಿ ಮುನ್ನಡೆಯಲು ಸಾಧ್ಯವಾಯಿತು” ಎಂದು ನುಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಂಗಳೂರಿನ ಕ್ಷೇಮವನದ ನಿರ್ದೇಶಕಿ ಶ್ರೀಮತಿ ಶ್ರದ್ಧಾ ಅಮಿತ್ ಅವರು ಮಾತನಾಡಿ, ಸೃಜನಶೀಲತೆ ಜೀವಂತವಾಗಿರಿಸಿಕೊಳ್ಳುವ, ಆರೋಗ್ಯಕೆ ಪೂರಕವಾಗುವ ಮತ್ತು ಜೀವನೋಪಾಯ ಕಂಡುಕೊಳ್ಳುವ ಹವ್ಯಾಸಗಳನ್ನಿರಿಸಿಕೊಳ್ಳಬೇಕು. ವಿದ್ಯಾರ್ಥಿ ಬದುಕನ್ನು ವ್ಯಕ್ತಿತ್ವ ರೂಪಿಸಿಕೊಳ್ಳುವುದಕ್ಕೆ ಪೂರಕವಾಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ ವಿಶ್ವನಾಥ ಪಿ ಅವರು ಮಾತನಾಡಿದರು.

ವಿಶ್ವಮಟ್ಟದಲ್ಲಿ ಸ್ಪರ್ಧೆಯೊಡ್ಡುವುದಕ್ಕೆ ಬೇಕಾದ ಶೈಕ್ಷಣಿಕ ಸಾಮರ್ಥ್ಯ ಮತ್ತು ಪ್ರತಿಭಾನ್ವಿತ ಕೌಶಲ್ಯವನ್ನು ಒದಗಿಸಿಕೊಡುವುದಕ್ಕೆ ಎಸ್ ಡಿ ಎಂ ಕಾಲೇಜು
ಪ್ರಾಶಸ್ತ್ಯ ನೀಡುತ್ತಿದೆ ಎಂದರು. ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವಿಭಾಗಗಳ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿ ಪ್ರತಿಭಾನ್ವಿತರಿಗೆ ಈ ಸಂದರ್ಭದಲ್ಲಿ ಪುರಸ್ಕರಿಸಲಾಯಿತು. ಕಾರ್ಯಕ್ರಮವನ್ನು ತೃತೀಯ ಬಿಸಿಎ ವಿದ್ಯಾರ್ಥಿ ಪ್ರತಿನಿಧಿಯಾದ ಸುದೇಶ್ ಗೌಡ ಸ್ವಾಗತಿಸಿದರು. ದ್ವಿತೀಯ ಎಂ ಸಿ ಜೆ ವಿದ್ಯಾರ್ಥಿ ಪ್ರತಿನಿಧಿ ಶ್ರವಣ್ ಕುಮಾರ್ ವಂದಿಸಿದರು. ಸಿಂಚನ ಕಲ್ಲೂರಾಯ ಹಾಗೂ ಧರಿತ್ರಿ ಭಿಡೆ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಕೇಂದ್ರದ ವಿವಿಧ ವಿಭಾಗದ ವಿದ್ಯಾರ್ಥಿ ಪ್ರತಿನಿಧಿಗಳಾದ ಪ್ರಕೃತಿ, ಮೇಘಾ, ಮಾರುತಿ ಭಗವಾನ್, ಅಮೀರ್, ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು