Fri. Apr 4th, 2025

Gadag: ಪ್ರೀತ್ಸೆ ಪ್ರೀತ್ಸೆ ಎಂದು 19ರ ಯುವತಿ ಹಿಂದೆ ಬಿದ್ದ ಅಂಕಲ್ – ಅಂಕಲ್‌ ಕಾಟಕ್ಕೆ ಸಾವಿನ ಮನೆ ಸೇರಿದ ವಿದ್ಯಾರ್ಥಿನಿ!!

ಗದಗ, (ಮಾ.21): ಪ್ರೀತ್ಸೆ ಪ್ರೀತ್ಸೆ ಅಂತ ದುಂಬಾಲು, ಮದುವೆಯಾಗುವಂತೆ 47 ವರ್ಷದ ಅಂಕಲ್ 19 ವರ್ಷದ ಯುವತಿ ಹಿಂದೆಬಿದ್ದಿದ್ದು, ಇದೀಗ ಅಂಕಲ್​ನ ಕಿರುಕುಳ ತಾಳಲಾರದೆ ಯುವತಿ ದುರಂತ ಸಾವು ಕಂಡಿದ್ದಾಳೆ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ವೀರಾಪೂರ ತಾಂಡಾ ನಿವಾಸಿ ಕಿರಣ್ ಎನ್ನುವಾತ ಪ್ರೀತಿಸುವಂತೆ ಮಗಳ ವಯಸ್ಸಿನ ಯುವತಿ ಹಿಂದೆ ಬಿದ್ದು ಕಿರುಕುಳ ನೀಡಿದ್ದಾನೆ. ಇದರಿಂದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಇದನ್ನೂ ಓದಿ: 🔴ಪದ್ಮುಂಜ : (ಮಾ.22 ) ಪದ್ಮುಂಜ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಸಹಕಾರಿ ಅಭ್ಯರ್ಥಿಗಳ ಗೆಲುವಿಗೆ

ಕಿರಣ್ ಕಳೆದ ಹಲವು ದಿನಗಳಿಂದ ವಂದನಾಗೆ ನಿತ್ಯ ಫೋನ್ ‌ಮಾಡೋದು, ಮೆಸೇಜ್ ಮಾಡಿ, ಮದುವೆ ಆಗುವಂತೆ ಕಿರುಕುಳ ನೀಡುತ್ತಿದ್ದನಂತೆ. ಮದುವೆ ಆಗದಿದ್ದರೆ ಇಬ್ಬರ ಫೋಟೋ ಎಡಿಟ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದನಂತೆ. ಹೀಗಾಗಿ ಆತನ ಕಿರುಕುಳ ತಾಳಲಾರದೆ ವಂದನಾ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

47 ವರ್ಷದ ಕಿರಣ್​​​ಗೆ ಎರಡು ಕಾಲು ಇಲ್ಲ. ಆದರೂ ತನ್ನ ವಯಸ್ಸು ಆ ಯುವತಿ ವಯಸ್ಸು ಏನು ಎನ್ನುವುದನ್ನು ಯೋಚಿಸಿದೇ ಪ್ರೀತ್ಸೆ ಪ್ರೀತ್ಸೆ ಎಂದು ದುಂಬಾಲು ಬಿದ್ದಿದ್ದಾನೆ. ಕಿರಣ್​ನ ಕಿರುಕುಳ ತಾಳಲಾರದೆ ವಂದನಾ ಫಿನಾಯಿಲ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಇದಕ್ಕೆ ಕಾರಣನಾದ ಕಿರಣ್​ನಿಗೆ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಸದ್ಯ ಬೆಟಗೇರಿ ಪೊಲೀಸ್ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ಕಿರಣ್​​ನನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.

19 ವರ್ಷದ ವಂದನಾ ಗದಗ ಜಿಮ್ಸ್ ನಲ್ಲಿ ಪ್ಯಾರಾಮೆಡಿಕಲ್ ಓದುತ್ತಿದ್ದಳು. ಮಗಳ ಬಗ್ಗೆ ಪೋಷಕರು ಸಾಕಷ್ಟು ಕನಸು ಕಂಡಿದ್ದರು. ಆದ್ರೆ, ಈ ಯುವತಿ ಹಿಂದೆ 47 ವರ್ಷದ ಕಿರಣ್ ಎನ್ನುವಾತ ಮದುವೆ ಆಗು ಎಂದು ನಿತ್ಯ ಫೋನ್​ ಮಾಡಿ ಕಿರುಕುಳ ನೀಡುತ್ತಿದ್ದನಂತೆ. ಅಲ್ಲದೇ ಇಬ್ಬರ ಫೋಟೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದನಂತೆ. ಹೀಗಾಗಿ ಗದಗ ನಗರದ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದಲ್ಲಿ ವಂದನಾ ಫಿನಾಯಿಲ್ ಕುಡಿದಿದ್ದಾಳೆ. ಇದರಿಂದ ಅಸ್ವಸ್ಥಳಾಗಿದ್ದ ವಂದನಾಳನ್ನು ಗದಗ ಜಿಮ್ಸ್ ಆಸ್ಪತ್ರೆ ದಾಖಲು‌ ಮಾಡಲಾಗಿತ್ತು. ಆದ್ರೆ‌ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ.

ಅಂದಹಾಗೆ ಮೃತ ವಂದನಾ ಹಾಗೂ ಅಂಕಲ್ ಕಿರಣ ಇಬ್ಬರು ಗದಗ ಜಿಲ್ಲೆ ಮುಂಡರಗಿ ತಾಲೂಕಿನ ವೀರಾಪೂರ ತಾಂಡಾ ನಿವಾಸಿಗಳು. ವಂದನಾ ಕುಟುಂಬಸ್ಥರು ಚಿಕ್ಕದೊಂದು ಬೀಡಿ ಶಾಪ್ ಹಾಕಿಕೊಂಡು ಜೀವನ ನಡೆಸುತ್ತಿದ್ದರು. ಅದೇ ತಾಂಡಾದಲ್ಲಿ ಕಿರಣ್ ವಾಟರ್ ಮ್ಯಾನ್ ಕೆಲಸ ಮಾಡುತ್ತಿದ್ದ. ಆದ್ರೆ, ಕಳೆದ ಒಂದು ವರ್ಷದ ಹಿಂದೆ ಕಿರಣ್​, ವಂದನಾ ಜೊತೆಗೆ ಮದುವೆ ಮಾಡಿಕೊಡಿ ಎಂದು ಕುಟುಂಬಸ್ಥರನ್ನು ಕೇಳಿದ್ದನಂತೆ ಆಗ ವಯಸ್ಸಿನ ಅಂತರ ಹಾಗೂ ಕಿರಣ್ ವಿಶೇಷ ಚೇತನ ಇರೋದರಿಂದ ಮದುವೆಗೆ ಮೃತಳ ಕುಟುಂಬಸ್ಥರು ವಿರೋಧ ಮಾಡಿದ್ದರು. ಆಗ ಸುಮ್ಮನಾಗದ ಕಿರಣ್ ಪುನಃ ಕಿರುಕುಳ ನೀಡಲು ಪ್ರಾರಂಭಿಸಿದ್ದಾನೆ. ಇದರಿಂದ ಬೇಸತ್ತ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಒಟ್ಟಿನಲ್ಲಿ ಬಾಳಿ ಬದುಕಬೇಕಾದ ಯುವತಿ ಅಂಕಲ್‌ ಕಾಟಕ್ಕೆ ಸಾವಿನ ಮನೆ ಸೇರಿದ್ದಾಳೆ. ಮತ್ತೊಂದೆಡೆ ಮನೆಗೆ ಆಧಾರವಾಗಬೇಕಾದ ಮಗಳನ್ನು ಕಳೆದುಕೊಂಡು ಹೆತ್ತವರು ಕಣ್ಣೀರು ಹಾಕುವಂತಾಗಿದೆ.

Leave a Reply

Your email address will not be published. Required fields are marked *