ಬಂಟ್ವಾಳ:(ಮಾ.22)” ಮಂಕಿ ಮ್ಯಾನ್ ಆಫ್ ಕರ್ನಾಟಕ ” ಎಂದೇ ಖ್ಯಾತಿ ಪಡೆದಿರುವ ಜ್ಯೋತಿರಾಜ್ ದ.ಕ.ಜಿಲ್ಲೆಯ ಬಂಟ್ವಾಳಕ್ಕೆ ಬಂದಿದ್ದಾರೆ.
ಬಂಟ್ವಾಳ ತಾಲೂಕಿನ ವಗ್ಗ ಸಮೀಪದ ಪುರಾಣಪ್ರಸಿದ್ದ ಶ್ರೀ ಕಾರಿಂಜೇಶ್ವರನ ಸನ್ನಿಧಾನಕ್ಕೆ ಭೇಟಿ ನೀಡಿದ್ದಾರೆ. ಮಾ.23 ರಂದು ಆದಿತ್ಯವಾರ ಬೆಳಿಗ್ಗೆ 10 ರ ಸುಮಾರಿಗೆ ಈತ ಕಾರಿಂಜದ ಬೆಟ್ಟದ ಮೇಲಿರುವ ಶಿವನ ದೇವಾಲಯಕ್ಕೆ ಕಾಡುಪೊದೆಗಳಿಂದ ಕಲ್ಲು ಬಂಡೆಗಳಿಂದ ಅವಿತಿರುವ ಬೆಟ್ಟವನ್ನು ಏರಲಿದ್ದಾರೆ.

ಇದನ್ನೂ ಓದಿ:⭕ಸೋನು ಗೌಡ ಮಾಜಿ ಪತಿಯಿಂದಲೇ ಖಾಸಗಿ ಫೋಟೋಗಳು ಲೀಕ್!?!
ಅದೆಷ್ಟೋ ಯುವಕರು ದಾರಿ ತಪ್ಪುವ ಈ ಕಾಲದಲ್ಲಿ ಅವರಿಗೆ ಸರಿಯಾದ ದಿಕ್ಕಿನಲ್ಲಿ ತರಬೇತಿ ನೀಡಿ ಅವರನ್ನು ಕ್ರೀಡೆಯಲ್ಲಿ ಸಾಧನೆ ಮಾಡಿಸಬೇಕು ಎಂಬ ಹಂಬಲದಿಂದ ಸ್ಪೋರ್ಟ್ಸ್ ಕ್ಲಬ್ ಸಂಸ್ಥೆಯ ಕನಸು ಹೊಂದಿದ್ದು,ಅದಕ್ಕಾಗಿ ಎರಡು ಎಕರೆ ಜಾಗವನ್ನು ಖರೀದಿ ಮಾಡುವ ಉದ್ದೇಶದಿಂದ ಅರ್ಥಿಕ ನೆರವಿನ ನಿರೀಕ್ಷೆಯಲ್ಲಿದ್ದೇನೆ.
ಈ ಉದ್ದೇಶದಿಂದ ಬಂಟ್ವಾಳಕ್ಕೂ ಬಂದಿದ್ದೇನೆ. ಇಡೀ ಜಿಲ್ಲೆಯ ಜನತೆ ನನಗೆ ಸಹಕಾರ ನೀಡುವಂತೆ ಮನವಿ ಮಾಡುವುದಾಗಿ ಅವರು ತಿಳಿಸಿದ್ದಾರೆ.
ಈ ಬಗ್ಗೆ ಆತ ಸ್ವತಃ ಮಾಧ್ಯಮವರ ಜೊತೆ ತನ್ನ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಅಷ್ಟಕ್ಕೂ ಈತ ಹುಟ್ಟಿದ್ದು ತಮಿಳುನಾಡು, ಬೆಳೆದಿದ್ದು ಕರ್ನಾಟಕ. ಮಂಕಿ ಮ್ಯಾನ್ ಆಫ್ ಕರ್ನಾಟಕ ಎಂದು ಹೆಸರು ಪಡೆದಿರುವ ಜ್ಯೋತಿರಾಜ್ ಗೆ ಇನ್ನು ಕೂಡ ಸ್ವಂತ ಸೂರಿಲ್ಲ, ಚಿಕಿತ್ಸೆಗಾಗಿ ಮಾಡಿದ ಸಾಲ ಇನ್ನೂ ತೀರಿಲ್ಲ ಎಂಬುದು ಅತ್ಯಂತ ನೋವಿನ ಸಂಗತಿಯಾಗಿದೆ.
ಮೂರನೇ ವಯಸ್ಸಿಗೆ ಜ್ಯೋತಿರಾಜ್ ಅವರು ತಮಿಳುನಾಡಿನ ಜಾತ್ರೆಯಲ್ಲಿ ಪೋಷಕರಿಂದ ಕೈ ತಪ್ಪಿ ಹೋಗುತ್ತಾರೆ.
ಬಳಿಕ ತಮಿಳುನಾಡು ಮೂಲದ ವ್ಯಕ್ತಿಯೊಬ್ಬರ ಕೈಗೆ ಸಿಕ್ಕ ಜ್ಯೋತಿರಾಜ್ ಅವರನ್ನು ಚಿತ್ರದುರ್ಗದಲ್ಲಿರುವ ಅವರ ಮನೆಯಲ್ಲಿ ಸಾಕುತ್ತಾರೆ. ಅವರ ಬೇಕರಿಯಲ್ಲಿ ಕೆಲಸ ಮಾಡುತ್ತಾ ಬೆಳೆಯುವ ಇವರು ಶಿಕ್ಷಣದಿಂದ ವಂಚಿತರಾಗುತ್ತಾರೆ.
ತಂದೆ ತಾಯಿಯನ್ನು ಕಳೆದುಕೊಂಡ ಇವರಿಗೆ ದಿನ ಕಷ್ಟದ ಬದುಕು, ಹಾಗಾಗಿ ಸಾಕುಮನೆಯಿಂದ ಹೊರಬಂದು ಗಾರೆ ಕೆಲಸ ಆರಂಭಿಸುತ್ತಾರೆ.
ಆದರೆ ತಂದೆ ತಾಯಿಯ ಕೊರಗು ಕಾಡುತ್ತಲೇ ಇದ್ದ ಇವರಿಗೆ ಒಂದು ದಿನ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿ ಚಿತ್ರದುರ್ಗದ ಬೆಟ್ಟವನ್ನು ಏರುತ್ತಾರೆ.

ಆದರೆ ಈತ ಬೆಟ್ಟವನ್ನು ಏರುವ ಶೈಲಿಯನ್ನು ನೋಡಿದ ಪ್ರೇಕ್ಷಕರು ಮೂಕವಿಸ್ಮಿತರಾಗುತ್ತಾರೆ. ಮತ್ತು ಚಪ್ಪಾಳೆ ತಟ್ಟುತ್ತಾರೆ. ಆದರೆ ಸಾಯಲು ಮುಂದಾಗಿದ್ದ ಜ್ಯೋತಿರಾಜ್ ಗೆ ಜನರನ್ನು ನೋಡಿ ಇಂದು ಬೇಡ ನಾಳೆ ಎಂದು ವಾಪಸು ಬರುವಾಗ , ಕೆಳಗೆ ನೆರೆದ ಜನ ಅಭಿನಂದಿಸುತ್ತಾರೆ, ಈತನ ಜೊತೆ ಪೋಟೋ ಕ್ಲಿಕ್ಕಿಸಿಕೊಂಡು ಸಾಧನೆಯ ಬಗ್ಗೆ ಗೌರವದ ಮಾತುಗಳನ್ನಾಡುತ್ತಾರೆ. ಅ ದಿನವೇ ಜ್ಯೋತಿರಾಜ್ ನ ಜೀವನದ ಟರ್ನಿಂಗ್ ಪಾಯಿಂಟ್ ದಿನವಾಯಿತು.
ಸಾಯಲು ಹೋದ ಯುವಕ ಸಾಧನೆಯ ಶಿಖರವೇರುತ್ತಾ ಕರ್ನಾಟಕದ ಮನೆ ಮಗನಾಗಿ, ಅನೇಕರ ಪಾಲಿಗೆ ದೇವರಾಗಿ, ಅನೇಕರ ಜೀವ ಕಾಪಾಡಿದ, ಜೀವ ಕಳೆದುಹೋದವರ ಮನೆಯವರಿಗಾಗಿ ಪ್ರಾಣವನ್ನು ಪಣಕ್ಕಿಟ್ಟ ಓರ್ವ ಸಂತನಾಗಿ ಇಂದು ಎತ್ತರಕ್ಕೆ ಬೆಳೆದಿದ್ದಾನೆ.

ಶವಗಳನ್ನು ಹುಡುಕಲು ಕೋತಿರಾಜ್ ಅನೇಕ ಬಾರಿ ಜೋಗ ಜಲಪಾತವನ್ನು ಇಳಿದು ಏರಿದ್ದಾರೆ. ಜಲಪಾತದ ಕಂದಕಕ್ಕೆ ಬಿದ್ದು, ಎರಡು ದಿನ ಕಾಣೆಯಾಗಿದ್ದರು. ಇಲ್ಲಿಯತನಕ ಅವರಿಗೆ ಒಟ್ಟು 11 ಆಪರೇಷನ್ ಆಗಿದೆ. ಕೈ, ಕಾಲಿಗೆ 4 ರಾಡ್ ಹಾಕಿಸಿಕೊಂಡಿದ್ದಾರೆ. ಆದರೆ, ಇವರು ಬಂಡೆಗಳನ್ನು ಹತ್ತಿ ಬಿದ್ದಿರುವುದು ಕಡಿಮೆ. ಅವರಿವರನ್ನು ಕಾಪಾಡಲು ಹೋದಾಗ ಬಿದ್ದು ಗಾಯಳಾಗಿರುವುದೇ ಹೆಚ್ಚು ಅನ್ನೋದು ಅವರ ಮಾತು. 900 ಅಡಿ ಆಳದ ಜೋಗದಲ್ಲಿ ಸುಮಾರು ಸಲ ಇಳಿದಿದ್ದಾರೆ. ಅಷ್ಟೇಕೆ? ದೇಶಾದ್ಯಂತ ಜನರ ಕಾಪಾಡಲು ಹೋಗಿದ್ದಾರೆ. ಜೋಗ ಒಂದರಲ್ಲೇ ಒಟ್ಟು 9 ಮೃತದೇಹಗಳನ್ನು ಹೊರತೆಗೆದಿದ್ದಾರೆ. ಜಲಪಾತವನ್ನು 18 ಬಾಕಿ ಹತ್ತಿಳಿದಿದ್ದಾರೆ ಎಂದು ಅವರೇ ಹೇಳಿಕೊಂಡಿದ್ದಾರೆ. ಈ ಪೈಕಿ 3 ಬಾರಿ ಶೂಟಿಂಗ್ಗಾಗಿ ಹತ್ತಿದ್ದಾರೆ. ಕೆರೆ, ಬಾವಿಯಲ್ಲಿ ಅವರಿವರು ಬಿದ್ರೆ ಸಹಾಯ ಮಾಡ್ತಿದ್ದಾರೆ.
ಯಾರೇ ಬಿದ್ರೂ ನಮ್ಮ ತಂಗಿ, ತಮ್ಮ ಎಂದುಕೊಂಡು ಕಾಪಾಡಲು ಹೋಗ್ತೇನೆ. ಜೋಗದಲ್ಲಿ ಇಳಿದಾಗ ನಾನು ಉಳಿಯಲ್ಲ ಎಂದುಕೊಂಡಿದ್ದೆ. ಆ ದೇವರು ದೊಡ್ಡವನು, ಕಾಪಾಡಿದ. ಕರ್ನಾಟಕದ ಜನರ ಆಶೀರ್ವಾದದಿಂದ ಬದುಕಿದೆ” ಎಂದು ಕೋತಿರಾಜ್ ಹೇಳಿದರು.ಇಲ್ಲಿಯತನಕ ಒಟ್ಟು 50ಕ್ಕೂ ಹೆಚ್ಚು ಯುವಕರಿಗೆ ಕೋತಿರಾಜ್ ತರಬೇತಿ ನೀಡಿದ್ದಾರೆ. ಪ್ರಸ್ತುತ 10 ಯುವಕರು ತರಬೇತಿ ಪಡೆಯುತ್ತಿದ್ದಾರೆ. ಬಂಡೆ ಹತ್ತುವುದು ಹೇಗೆ ಎಂಬುದರ ಬಗ್ಗೆ ತರಬೇತಿ ನೀಡುತ್ತಿದ್ದಾರೆ.

ಇವರಿಂದ ತರಬೇತಿ ಪಡೆದ 16-20 ಯುವಕರು ಸೇನೆ ಸೇರಿದ್ದಾರೆ. ಇಬ್ಬರು ಅಂತಾರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದ್ದಾರೆ.
ಕರ್ನಾಟಕ ನನ್ನ ಉಸಿರು, ಹೆಸರು ನೀಡಿದ ದೇವತೆ,ಹಾಗಾಗಿ ನಾನು ಕರ್ನಾಟಕದಲ್ಲಿಯೇ ಬದುಕನ್ನು ಕಳೆಯಬೇಕು ಎಂಬ ಮಹದಾಸೆ ನನ್ನದು ಎಂದು ಹೇಳಿಕೊಂಡಿದ್ದಾರೆ.
