ದಾಂಡೇಲಿ :(ಮಾ.22) ಗೋಡಂಬಿ ಬೆಳೆಯನ್ನು ತಿನ್ನಲು ಮಂಗಗಳು ಬರುತ್ತಿದ್ದು ಅವುಗಳನ್ನು ಓಡಿಸಲೆಂದು ಹೋಗಿದ್ದ ರೈತನೋರ್ವನ ಮೇಲೆ ಎರಡು ಕರಡಿಗಳು ದಾಳಿ ನಡೆಸಿ ಗಾಯಗೊಳಿಸಿದ ಘಟನೆ ದಾಂಡೇಲಿ ತಾಲೂಕಿನ ಕೇಗದಾಳದಲ್ಲಿ ಇಂದು ಶನಿವಾರ ಬೆಳಗ್ಗೆ 6:30 ಗಂಟೆ ಸುಮಾರಿಗೆ ನಡೆದಿದೆ.

ಇದನ್ನೂ ಓದಿ: ⭕ಉಡುಪಿ: ಮೀನು ಕದ್ದ ಆರೋಪದಡಿ ಮಹಿಳೆಗೆ ಹಲ್ಲೆ ನಡೆಸಿದ ಪ್ರಕರಣ
ಡುಮ್ಮಿಂಗ್ ಜೂಜೆ ಸಿದ್ದಿ ಎಂಬ 56 ವರ್ಷದ ವಯಸ್ಸಿನ ವ್ಯಕ್ತಿಯೇ ಕರಡಿ ದಾಳಿಗೊಳಗಾಗಿ ಗಾಯಗೊಂಡು ಅದೃಷ್ಟವಶಾತ್ ಪಾರಾಗಿ ಬಂದ ವ್ಯಕ್ತಿಯಾಗಿದ್ದಾರೆ.
ಇವರು ಇಂದು ಬೆಳಿಗ್ಗೆ ಎಂದಿನಂತೆ ಗೋಡಂಬಿ ತೋಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಕರಡಿಗಳು ದಾಳಿ ಮಾಡಿದೆ. ಈ ಸಂದರ್ಭದಲ್ಲಿ ದಾಳಿಗೊಳಗಾದ ಡುಮ್ಮಿಂಗ್ ಅವರು ಕರಡಿಗಳಿಂದ ಕಾದಾಡಿ ತಪ್ಪಿಸಿಕೊಂಡು ಬಂದಿದ್ದಾರೆ. ಕೈ ಮತ್ತು ಕಾಲಿಗೆ ಗಂಭೀರ ಗಾಯವಾಗಿದ್ದು, ತಕ್ಷಣವೇ ಅವರನ್ನು ದಾಂಡೇಲಿ ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರಲಾಗಿದೆ.



ಸಾರ್ವಜನಿಕ ಆಸ್ಪತ್ರೆಗೆ ಕುಳಗಿಯ ವಲಯ ಅರಣ್ಯಾಧಿಕಾರಿ ಸಾಗರ್ ಬೋಗುರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ. ಘಟನೆಯ ಕುರಿತಂತೆ ಡುಮ್ಮಿಂಗ್ ಅವರ ಸಹೋದರ ಅಗಸ್ಟಿನ್ ಜೂಜು ಸಿದ್ದಿಯವರು ಇಂದು ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಮಾಧ್ಯಮಕ್ಕೆ ಮಾಹಿತಿಯನ್ನು ನೀಡಿದ್ದಾರೆ.

