Fri. Apr 11th, 2025

ಉಜಿರೆ (ಮಾ.22): ಹೊಸ ಕಾಲದ ಸಂಕೀರ್ಣ ಬಿಕ್ಕಟ್ಟುಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ವಿಜ್ಞಾನ, ತಂತ್ರಜ್ಞಾನ ಮತ್ತು ಮಾನವಿಕ ಶೈಕ್ಷಣಿಕ ವಲಯಗಳ ಸಂಯೋಜಿತ ಕಾರ್ಯತಂತ್ರಗಳನ್ನು ಅನ್ವಯಿಸಬೇಕಾದ ಅಗತ್ಯವಿದೆ ಎಂದು ಸುರತ್ಕಲ್‌ನ ಎನ್‌ಐಟಿಕೆಯ ನಿರ್ದೇಶಕರಾದ ಪ್ರೊ.ಬಿ.ರವಿ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ⭕ಪುತ್ತೂರು: ಟೆಲಿಗ್ರಾಮ್ ನಲ್ಲಿ ಟಾಸ್ಕ್ ಕಂಪ್ಲೀಟ್ ಮಾಡಲು ಹೋಗಿ 9 ಲಕ್ಷ ರೂ. ಕಳೆದುಕೊಂಡ ಯುವತಿ

ಉಜಿರೆಯ ಎಸ್.ಡಿ.ಎಂ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ವಿಜ್ಞಾನ ಮತ್ತು ತಂತ್ರಜ್ಞಾನ ವಲಯಗಳಿಂದಲಷ್ಟೇ ವಿಶ್ವ, ದೇಶ ಮತ್ತು ಪ್ರದೇಶ ಮಟ್ಟದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂಬುದು ತಪ್ಪುಕಲ್ಪನೆ. ಮಾನವಿಕ ಶೈಕ್ಷಣಿಕ ವಲಯಗಳವರನ್ನೂ ಒಳಗೊಂಡು ವರ್ತಮಾನದ ಸಂಕೀರ್ಣ ಸಮಸ್ಯೆಗಳನ್ನು ನಿವಾರಿಸುವ ಪ್ರಯತ್ನಗಳಾಗಬೇಕು.

ಈ ಬಗೆಯ ಒಳಗೊಳ್ಳುವಿಕೆಯ ಸಂಯೋಜಿತ ಹೊಣೆಗಾರಿಕೆಯ ನಿರ್ವಹಣೆಯಿಂದ ಅನಿಶ್ಚಿತತೆ ಮತ್ತು ಸಂಕೀರ್ಣ ಬಿಕ್ಕಟ್ಟುಗಳಿಂದ ಉಂಟಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಬಹುದು ಎಂದರು.

ಕಲೆ, ವಿಜ್ಞಾನ ಮತ್ತು ತಂತ್ರಜ್ಞಾನ ವಲಯಗಳ ನಡುವೆ ಕೊಡುಕೊಳ್ಳುವಿಕೆ ನಡೆಯಬೇಕು. ಒಂದು ಕ್ಷೇತ್ರ ಮತ್ತೊಂದು ಕ್ಷೇತ್ರಕ್ಕೆ ಪೂರಕವಾಗುವ ಜ್ಞಾನದ ಮಾದರಿಗಳನ್ನು ಹಂಚಿಕೊಳ್ಳಬೇಕು. ಈ ವಲಯಗಳ ಜ್ಞಾನಶಿಸ್ತುಗಳ ವಿಶೇಷ ಪರಿಣತಿಯನ್ನು ಆಧರಿಸಿದ ಚರ್ಚೆ, ಸಂವಾದಗಳ ಮೂಲಕ ಜ್ಞಾನವನ್ನು ಸದ್ಯದ ಅಗತ್ಯಗಳಿಗೆ ತಕ್ಕಂತೆ ಅನ್ವಯಿಸುವ ಮಾರ್ಗಗಳು ಹೊಳೆಯುತ್ತವೆ. ಈ ಮೂಲಕ ಭಾರತಕ್ಕೆ ಬೇಕಾದ ಅಭ್ಯುದಯದ ಹಾದಿ ಸುಗಮಗೊಳ್ಳುತ್ತದೆ ಎಂದು ನುಡಿದರು.

ಬದ್ಧತೆ, ಸಾಮರ್ಥ್ಯ, ಸೃಜನಶೀಲತೆಯೊಂದಿಗೆ ಗುರುತಿಸಿಕೊಂಡಾಗ ವಿದ್ಯಾರ್ಥಿಗಳು ಕಲಿಕೆಯ ಹಂತದಿಂದಲೇ ವೃತ್ತಿಪರ ವಲಯ ನಿರೀಕ್ಷಿಸುವ ಸಾಮರ್ಥ್ಯವನ್ನು ರೂಢಿಸಿಕೊಳ್ಳಬಹುದು. ಕಲಿಕೆಯ ವಿಷಯಗಳನ್ನಷ್ಟೇ ಅಲ್ಲದೇ ಉಳಿದ ಜ್ಞಾನಶಿಸ್ತುಗಳಿಗೆ ಸಂಬಂಧಿಸಿದ ಅಂಶಗಳನ್ನು ತಿಳಿದುಕೊಳ್ಳುವ ಕುತೂಹಲದೊಂದಿಗೆ ಇದ್ದರೆ ವಿಶೇಷ ವೃತ್ತಿಪರ ಕೌಶಲ್ಯಗಳನ್ನು ಗಳಿಸಿಕೊಳ್ಳುವುದಕ್ಕೆ ¸ಸಾಧ್ಯವಾಗುತ್ತದೆ. ಕೃತಕ ಬುದ್ಧಿಮತ್ತೆಯಂತಹ ವಿಸ್ತೃತ ತಂತ್ರಜ್ಞಾನದ ಮೇಲೆ ಅವಲಂಬನೆಯಾಗದೇ ವ್ಯಕ್ತಿಗತವಾದ ಜ್ಞಾನಾಧಾರಿತ ಸಾಮರ್ಥ್ಯವನ್ನು ಹೆಚ್ಚು ನೆಚ್ಚಿಕೊಳ್ಳಬೇಕು. ಆಗ ಮಾತ್ರ ಹೊಸ ತಂತ್ರಜ್ಞಾನವನ್ನು ಎಚ್ಚರದೊಂದಿಗೆ ಬಳಸಿಕೊಂಡು ನಿರೀಕ್ಷಿತ ಯಶಸ್ಸು ಗಳಿಸಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿದರು. ಎಸ್. ಡಿ. ಎಂ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರ, ವಿಶ್ವಮಟ್ಟದಲ್ಲಿ ಹೆಗ್ಗುರುತು ಮೂಡಿಸಿದ್ದಾರೆ. ತಿಳಿದುಕೊಂಡ ಜ್ಞಾನದ ಅಂಶಗಳನ್ನು ಪುನರ್ ಮನನ ಮಾಡಿಕೊಂಡು ಕಲಿಕೆಯಲ್ಲಿ ಮುನ್ನಡೆ ಸಾಧಿಸಬೇಕು. ಹೊಸ ಕಾಲದ ಅಗತ್ಯಗಳಿಗೆ ತಕ್ಕಂತೆ ಸಾಮರ್ಥ್ಯ ರೂಪಿಸಿಕೊಂಡು ಸಾಧನೆಯ ಹೊಸ ಹೆಜ್ಜೆಗಳನ್ನು ಕ್ರಮಿಸಬೇಕು ಎಂದು ಹೇಳಿದರು.

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರ ಕುಮಾರ್, ಡಾ. ಸತೀಶ್ಚಂದ್ರ ಎಸ್., ಎಸ್.ಡಿ.ಎಂ ಕಾಲೇಜಿನ ಅಕ್ಯಾಡೆಮಿಕ್ ಸಂಯೋಕರಾದ ಎಸ್.ಎನ್.ಕಾಕತ್ಕರ್, ನಿವೃತ್ತ ಪ್ರಾಶುಂಪಾಲ ಡಾ.ಬಿ.ಎ ಕುಮಾರ ಹೆಗ್ಡೆ, ನಿವೃತ್ತ ಉಪಪ್ರಾಂಶುಪಾಲರಾದ ಡಾ. ಶಲೀಫ್.ಬಿ.ಪಿ, ನಿವೃತ್ತ ಪ್ರಾಧ್ಯಾಪಕರಾದ ಡಾ.ರಾಮಚಂದ್ರ ಪುರೋಹಿತ, ಶಾಂತಿಪ್ರಕಾಶ್, ಬೋಧಕೇತರ ಸಿಬ್ಬಂದಿ ಸದಾನಂದ್ ಬಿ.ಮುಂಡಾಜೆ, ತುಕಾರಾಂ ಸಾಲಿಯಾನ, ಪದವಿ ಹಾಗೂ ಸ್ನಾತಕೋತ್ತರ ಕೇಂದ್ರದ ವಿವಿಧ ವಿಭಾಗದ ವಿದ್ಯಾರ್ಥಿ ಪ್ರತಿನಿಧಿಗಳಾದ ಶ್ರವಣ, ಪ್ರಕೃತಿ, ಮೇಘನಾ , ಮಾರುತಿ ಭಗವಾನ್, ಅಮೀರ್, ಸುದೇಶ್ ಗೌಡ, ಉಪಸ್ಥಿತರಿದ್ದರು.

ನಿವೃತ್ತ ಬೋಧಕರು, ಬೋಧಕೇತರ ಸಿಬ್ಬಂದಿ, ರ‍್ಯಾಂಕ್ ವಿಜೇತರು, ಪಿ.ಹೆಚ್.ಡಿ ಪದವೀಧರ ಅಧ್ಯಾಪಕರು, ವಿಶೇಷ ಸಾಧಕ ಅಧ್ಯಾಪಕರು, ವಿಶೇಷ ಸಾಧಕ ವಿದ್ಯಾರ್ಥಿಗಳು,
ಕ್ರೀಡಾ ವಿಭಾಗದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಪುರಸ್ಕರಿಸಲಾಯಿತು. ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳ ಚಿಗುರು ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಶ್ವನಾಥ ಪಿ. ಸ್ವಾಗತಿಸಿದರು. ಕಾಲೇಜಿನ ಉಪಪ್ರಾಂಶುಪಾಲರಾದ ನಂದಾಕುಮಾರಿ ವರದಿವಾಚನ ಮಾಡಿದರು. ಕಾಲೇಜಿನ ಆಡಳಿತ ಮಂಡಳಿಯ ಕುಲಸಚಿವರಾದ ಶ್ರೀಧರ ಎನ್.ಭಟ್ಟ ವಂದಿಸಿದರು. ಡಾ.ನೆಫಿಸತ್ ನಿರೂಪಿಸಿದರು.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು