Fri. Apr 11th, 2025

Yadagiri: ಬಣ್ಣ ಬಣ್ಣದ ಮಾತನಾಡಿ ವಿಧವೆ ಜೊತೆ ಲವ್, ದೈಹಿಕ ಸಂಬಂಧ – ಆಮೇಲೆ ಆಗಿದ್ದೇನು?!

ಯಾದಗಿರಿ(ಮಾ.22): ಯುವಕನೊಬ್ಬ ವಿಧವೆಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯ ಜತೆ ಪ್ರೀತಿಯ ನಾಟಕವಾಡಿ, ದೈಹಿಕ ಸಂಬಂಧವನ್ನೂ ಬೆಳೆಸಿದ್ದಲ್ಲದೆ ಆಕೆಯಿಂದ ಲಕ್ಷಾಂತರ ರೂ. ಹಣ ಎಗರಿಸಿದ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಬಸವಂತಪುರ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: ⭕ದಾಂಡೇಲಿ : ದಾಂಡೇಲಿ ತಾಲೂಕಿನ ಕೇಗದಾಳದಲ್ಲಿ ಕರಡಿ ದಾಳಿ

ಬಸವಂತಪುರ ಗ್ರಾಮದ ಮಹಿಳೆಯನ್ನು ದೂರದ ತೆಲಂಗಾಣದ ನಾರಾಯಣಪೇಟೆ ಜಿಲ್ಲೆಯ ಮಕ್ತಲ್ ತಾಲೂಕಿನ ಅಮೀನಾಪುರ ಗ್ರಾಮದ ಬಸನಗೌಡ ಎಂಬಾತನಿಗೆ ಸುಮಾರು ಹತ್ತು ವರ್ಷಗಳ ಹಿಂದೆ ಮದುವೆ ಮಾಡಿ ಕೊಡಲಾಗಿತ್ತು. ಮದುವೆಯಾದ ಒಂದು ವರ್ಷದಲ್ಲಿ ಮುದ್ದಾದ ಗಂಡು ಮಗು ಹುಟ್ಟಿತ್ತು. ಮಗು, ಗಂಡನ ಜೊತೆ ಸುಖ ಸಂಸಾರ ನಡೆಸುವಾಗಲೇ ಆಕೆಯ ಗಂಡ ಪಾರ್ಶ್ವವಾಯು ಸಮಸ್ಯೆಗೆ ಒಳಗಾಗಿ ಮೃತಪಟ್ಟು ಸಂಕಷ್ಟಕ್ಕೆ ಸಿಲುಕುವಂತಾಯಿತು. ನಂತರ ಆಕೆ ತವರು ಮನೆಯಾದ ಬಸವಂತಪುರಕ್ಕೆ ಬಂದಿದ್ದಾಳೆ. ನಂತರ ಅಬ್ಬೆತುಮಕೂರಿನ ಸ್ವಾಮೀಜಿಗಳ ಬಳಿ ತನ್ನ ಸಮಸ್ಯೆಯನ್ನು ಹೇಳಿಕೊಂಡಿದ್ದಳು. ಆಗ ಸ್ವಾಮೀಜಿ, ‘ನಿನ್ನ ಕಷ್ಟ ಸರಿ ಹೋಗುತ್ತದೆ, ದೇವರು ಒಳ್ಳೆಯದು ಮಾಡಲಿ’ ಎಂದು ಆಶೀರ್ವಾದ ಮಾಡಿದ್ದರು. ಅದಾದ ಬೆನ್ನಲ್ಲೇ ಅದೇ ಅಬ್ವೆತುಮಕೂರು ಮಠದಲ್ಲಿ ಮಾಳಪ್ಪ ಹತ್ತಿಕುಣಿ ಎಂಬಾತನ ಪರಿಚಯವಾಗಿದೆ. ಆತ ಬಣ್ಣ ಬಣ್ಣದ ಮಾತನಾಡಿ ವಿಧವೆ ಜತೆ ಸ್ನೇಹ ಬೆಳೆಸಿಕೊಂಡಿದ್ದಾನೆ.

ವಿಧವೆ ಜೊತೆ ಪ್ರೀತಿ-ಪ್ರೇಮದ ನಾಟಕವಾಡಿದ ಮಾಳಪ್ಪ, ‘‘ಪತಿಯನ್ನು ಕಳೆದುಕೊಂಡ‌ ನಿನಗೆ ಗಂಡನ ಸ್ಥಾನ ಕೊಡುತ್ತೇನೆ. ನಾವಿಬ್ಬರು ಹಾಲು-ಜೇನಿನಂತೆ ಸುಖ-ಸಂಸಾರದಿಂದ ಕೂಡಿ ಬಾಳೋಣ’’ ಎಂದು ಮರುಳು ಮಾಡುವ ಮಾತುಗಳನ್ನಾಡಿದ್ದಾನೆ. ಮಾಳಪ್ಪ ಮೇಲಿನ ಪ್ರೀತಿ, ವಿಶ್ವಾಸದಿಂದ ವಿಧವೆ, ತೆಲಂಗಾಣದಲ್ಲಿರುವ ತನ್ನ ನಾಲ್ಕೂವರೆ ಎಕರೆ ಜಮೀನನ್ನು ಮಾರಾಟ ಮಾಡಿದ್ದಾಳೆ. ಜಮೀನು ಮಾರಿದ ಸುಮಾರು 80 ಲಕ್ಷ ರೂ. ಹಣವನ್ನು ಆಕೆಯಿಂದ ಮಾಳಪ್ಪ ತೆಗೆದುಕೊಂಡಿದ್ದಾನೆ. ಆಕೆಯ ಹೆಸರಿನಲ್ಲಿದ್ದ ಆಸ್ತಿ-ಪಾಸ್ತಿ, ಬಂಗಾರವನ್ನು ಸಹ ಮಾರಿಕೊಂಡು ಹಣ ಗಳಿಸಿ ವಂಚಿಸಿದ್ದಾನೆ.

ಈ ಬಗ್ಗೆ ಶಹಾಪುರ ಪೋಲಿಸ್ ಠಾಣೆಯಲ್ಲಿ ಮಾಳಪ್ಪನ ವಿರುದ್ಧ ವಿಧವೆ ದೂರು ನೀಡಿದ್ದು ಕೇಸ್ ಸಹ ದಾಖಲಾಗಿದೆ. ಆದರೆ ಆರೋಪಿಯ ಬಂಧನವಾಗಿಲ್ಲ. ನ್ಯಾಯ ಬೇಕು ಎಂದು ವಿಧವೆ ಯಾದಗಿರಿ ಎಸ್​ಪಿ ಕಚೇರಿ ಮುಂದೆ ಧರಣಿ ನಡೆಸಿದ್ದಾಳೆ. ನ್ಯಾಯ ಸಿಗದಿದ್ದರೆ ಡಿಸೇಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು