ವಿಟ್ಲ :(ಮಾ.24)ಎರಡು ದಿನಗಳಿಂದ ಅಪಾಯಕಾರಿ ರೀತಿಯಲ್ಲಿ ವಿಟ್ಲ – ಮುಡಿಪು ಮಧ್ಯೆ ಸಂಚರಿಸುತ್ತಿದ್ದ ಖಾಸಗಿ ಬಸ್ಸನ್ನು ಸಾರ್ವಜನಿಕರು ತಡೆದು ವಿಟ್ಲ ಪೊಲೀಸರಿಗೆ ಒಪ್ಪಿಸಿದ್ದಾರೆ.

ವಿಟ್ಲ-ಮುಡಿಪು-ಮಂಗಳೂರು ಮಧ್ಯೆ ಸಂಚರಿಸುವ ಸಾರಾ ಹೆಸರಿನ ಖಾಸಗಿ ಬಸ್ಸಿನಲ್ಲಿ ಹಿಂದಿನ ಎಡಬದಿಯ ಒಂದು ಟಯರ್ ದಿನಗಳ ಹಿಂದೆ ಒಡೆದು ಹೋಗಿತ್ತು. ಬಳಿಕ ಒಂದೇ ಟಯರಿನಲ್ಲಿ ಸಂಚಾರ ನಡೆಸುತ್ತಿತ್ತು.


ಟಯರ್ ಒಡೆದ ಹಿನ್ನೆಲೆಯಲ್ಲಿ ಕರ್ಕಶ ಶಬ್ದ ಬರುತ್ತಿದ್ದರೂ ಚಾಲಕ ಹಾಗೂ ಕಂಡಕ್ಟರ್ ಅದನ್ನು ಸರಿಪಡಿಸುವ ಗೋಜಿಗೆ ಹೋಗದೇ ಎರಡು ದಿನಗಳಿಂದ ಎಂದಿನಂತೆ ಸಂಚಾರ ನಡೆಸುತ್ತಿದ್ದರು.

ಬಸ್ಸು ಸಿಬ್ಬಂದಿಗಳ ನಿರ್ಲಕ್ಷತನದಿಂದ ಬೇಸತ್ತ ಸಾರ್ವಜನಿಕರು ಸಾಲೆತ್ತೂರು ಪೇಟೆಯಲ್ಲಿ ಬಸ್ಸನ್ನು ತಡೆಹಿಡಿದು ಚಾಲಕ ನಿರ್ವಾಹಕರನ್ನು ತರಾಟೆಗೆ ತೆಗೆದುಕೊಂಡು, ಪ್ರಯಾಣಿಕರ ಜೀವದಲ್ಲಿ ಚೆಲ್ಲಾಟವಾಡದಂತೆ ತಾಕೀತು ನೀಡಿ ವಿಟ್ಲ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಬಂಟ್ವಾಳ ಸಾರಿಗೆ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದಾರೆ.

