ಉಜಿರೆ (ಮಾ.25): ವಿಜ್ಞಾನದ ಎಲ್ಲಾ ವಲಯಗಳಿಗೂ ಪೂರಕವಾಗುವ ಸಂಶೋಧನಾ ಫಲಿತಗಳೊಂದಿಗೆ ಸಂಶ್ಲೇಷಿತ ಸಾವಯವ ರರಸಾಯನಶಾಸ್ತ್ರ ಗಮನ ಸೆಳೆಯುತ್ತಿದೆ ಎಂದು ಕೊಟ್ಟಾಯಂನ ಮಹಾತ್ಮಾ ಗಾಂಧಿ ವಿಶ್ವವಿದ್ಯಾಲಯದ ಕೆಮಿಕಲ್ ಸೈನ್ಸ್ ವಿಭಾಗದ ಪ್ರಾಧ್ಯಾಪಕ ಡಾ.ಜಿ.ಅನಿಲ್‌ಕುಮಾರ್ ಅಭಿಪ್ರಾಯಪಟ್ಟರು.

ಇದನ್ನೂ ಓದಿ: 🛑ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧದ ವ್ಯವಸ್ಥಿತ ಸಂಚು ವಿರೋಧಿಸಿ
ಉಜಿರೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ರಸಾಯನಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ‘ಅಡ್ವಾನ್ಸಸ್ ಇನ್ ಸಿಂಥೆಟಿಕ್ ರ‍್ಗಾನಿಕ್ ಕೆಮಿಸ್ಟ್ರಿ ಕುರಿತು ಆಯೋಜಿಸಿದ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ರಾಷ್ಟ್ರಮಟ್ಟದ ‘ಕೆಮ್‌ಶೋಧನಾ’ ಅಂತರ್‌ಕಾಲೇಜು ಸ್ಪರ್ಧಾ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಸಾಯನಶಾಸ್ತ್ರವು ವಿಜ್ಞಾನದ ಶಕ್ತಿಯನ್ನು ವಿಸ್ತರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಅದರಲ್ಲೂ ಮುಖ್ಯವಾಗಿ ಔಷಧೀಯ ಸಂಶೋಧನೆಗೆ ನೆರವಾಗುವ ನಿಟ್ಟಿನಲ್ಲಿ ಸಾವಯವ ರಸಾಯನಶಾಸ್ತ್ರ ಮಹತ್ವದ ಕೊಡುಗೆಗಳನ್ನು ನೀಡುತ್ತಿದೆ. ಸಂಶೋಧನಾ ಫಲಿತಗಳ ಸಾಮಾಜಿಕ ಪ್ರಯೋಜನದ ಸಂದರ್ಭದಲ್ಲಿ ಗಮನಾರ್ಹ ಸುಧಾರಣೆಗಳಾಗುತ್ತಿವೆ ಎಂದು ಹೇಳಿದರು. ಸಾವಯವ ರಸಾಯನಶಾಸ್ತ್ರದ ಸಂಕೀರ್ಣ ವಿಭಾಗಗಳ ಕುರಿತು ವಿಸ್ತೃತ ಅಧ್ಯಯನಕ್ಕೆ ಇರುವ ಅವಕಾಶಗಳನ್ನು ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು ಬಳಸಿಕೊಳ್ಳಬೇಕು.
ಸಂಶೋಧನೆಯ ತೊಡಗಿಸಿಕೊಳ್ಳುವಿಕೆಯೊಂದಿಗೆ ರಾಸಾಯನಿಕ ಜ್ಞಾನಶಿಸ್ತಿಗೆ ಮಹತ್ವದ ಕೊಡುಗೆಗಳನ್ನು ನೀಡುವತ್ತ ಹೆಚ್ಚು ಆಸಕ್ತಿ ವಹಿಸಬೇಕು ಎಂದು ಸಲಹೆ ನೀಡಿದರು. ಗೋವಾದ ಸೈಂಗೆಟಾ ಬಯೋಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಪ್ರಧಾನ ಸಂಶೋಧನಾ ವಿಜ್ಞಾನಿ ಡಾ.ಮಂಜುನಾಥ ಚೆನ್ನಾಪುರ ಮುಖ್ಯ ಅತಿಥಿಯಾಗಿ ಮಾತನಾಡಿದರು.


ಭವಿಷ್ಯದ ದಿನಗಳನ್ನು ಸುಸ್ಥಿರ ಅಭಿವೃದ್ಧಿಯ ನೆಲೆಗಟ್ಟಿನಲ್ಲಿ ರೂಪಿಸಿಕೊಳ್ಳಲು ಹಸಿರು ರಸಾಯನಶಾಸ್ತ್ರದ ಪರಿಕಲ್ಪನೆಯನ್ನು ಅನ್ವಯಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಪ್ರತಿಪಾದಿಸಿದರು. ಹಸಿರು ಸಮೃದ್ಧಿಯೊಂದಿಗೆ ಮನುಷ್ಯ ಬದುಕು ಸುಸ್ಥಿರವಾಗುತ್ತದೆ. ಇದನ್ನು ದೃಷ್ಟಿಯಲ್ಲಿರಿಸಿಕೊಂಡು ಹಸಿರು ರಸಾಯನಶಾಸ್ತ್ರದ ಪರಿಕಲ್ಪನೆಯನ್ನು ಗಟ್ಟಿಗೊಳಿಸುವಂಥ ಸಂಶೋಧನಾ ಹೆಜ್ಜೆಗಳು ರೂಪುಗೊಳ್ಳಬೇಕು. ಹಾಗಾದಾಗ ಮಾತ್ರ ರಸಾಯನಶಾಸ್ತ್ರದ ಸಂಶೋಧನಾತ್ಮಕತೆಗೆ ಸುಸ್ಥಿರತೆಯ ಆಯಾಮ ದೊರಕುತ್ತದೆ ಎಂದು ನುಡಿದರು.
ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿಶ್ವನಾಥ ಪಿ ಅವರು ಮಾತನಾಡಿದರು. ಹೊಸ ರೀತಿಯಲ್ಲಿ ಆಲೋಚಿಸುವ ಯುವ ಪೀಳಿಗೆ ಶಿಕ್ಷಣ ವಲಯದಲ್ಲಿ ಗಮನ ಸೆಳೆಯುತ್ತಿದೆ. ಶೈಕ್ಷಣಿಕ ಕಲಿಕೆಯ ಸ್ವರೂಪ ಬದಲಾಗುತ್ತಿದ್ದಂತೆ ಅದಕ್ಕೆ ತಕ್ಕಂತೆ ಸಾಮರ್ಥ್ಯ ರೂಪಿಸಿಕೊಳ್ಳುವ ಉತ್ಸಾಹವೂ ಕಂಡುಬರುತ್ತಿದೆ.

ಇಂತಹ ಉತ್ಸಾಹಕ್ಕೆ ಪೂರಕವಾಗಿ ರಾಷ್ಟ್ರೀಯ ವಿಚಾರ ಸಂಕಿರಣಗಳಂತಹ ಕಾರ್ಯಕ್ರಮಗಳು ಹೊಸದೊಂದನ್ನು ಆವಿಷ್ಕರಿಸುವುದಕ್ಕೆ ಪ್ರೇರಣೆ ಒದಗಿಸುವ ವೇದಿಕೆಗಳಾಗಿ ಪ್ರಮುಖ ಪಾತ್ರವಹಿಸುತ್ತವೆ ಎಂದರು. ಸ್ಪರ್ಧಾತ್ಮಕ ಉತ್ಸವಗಳು ವಿದ್ಯಾರ್ಥಿಗಳ ಜ್ಞಾನಾಧಾರಿತ ಕೌಶಲ್ಯಗಳ ಪ್ರದರ್ಶನಕ್ಕೆ ಅವಕಾಶ ಒದಗಿಸಿಕೊಡುತ್ತವೆ. ಸೃಜನಶೀಲತೆಯೊಂದಿಗೆ ಮುನ್ನಡೆಯಲು ಸ್ಫೂರ್ತಿ ನೀಡುತ್ತವೆ ಎಂದು ಹೇಳಿದರು.

ಸಹಾಯಕ ಪ್ರಾಧ್ಯಾಪಕರಾದ ಡಾ.ವಸಂತಕುಮಾರ್, ಡಾ.ರಾಜೇಶ್ ಹೆಗ್ಡೆ ಉಪಸ್ಥಿತರಿದ್ದರು. ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ಸೌಮ್ಯ ಬಿ.ಪಿ ಸ್ವಾಗತಿಸಿದರು. ಸಹ ಪ್ರಾಧ್ಯಾಪಕಿ ಡಾ.ನೆಫಿಸತ್ ವಂದಿಸಿದರು. ವಿದ್ಯಾರ್ಥಿನಿ ಸೋನಾಕ್ಷಿ ಕಾರ್ಯಕ್ರಮ ನಿರೂಪಿಸಿದರು.
