ಬೆಂಗಳೂರು:(ಮಾ.25) ಸೌತಡ್ಕ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಯನ್ನು ರಾಜ್ಯ ಉಚ್ಛ ನ್ಯಾಯಾಲಯ ರದ್ದುಗೊಳಿಸಿ ಆದೇಶಿಸಿದೆ. ಜೊತೆಗೆ ನೂತನ ಸಮಿತಿ ರಚಿಸುವಂತೆ ಹೈ ಕೋರ್ಟ್ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಗೆ ತಿಳಿಸಿದೆ. ಕೆಲ ವಾರಗಳ ಹಿಂದಷ್ಟೇ ಕೊಕ್ಕಡ ಗ್ರಾಮದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಮುಂದಿನ 3 ವರ್ಷಗಳ ಅವಧಿಗೆ ವ್ಯವಸ್ಥಾಪನಾ ಸಮಿತಿಗೆ ಸದಸ್ಯರನ್ನು ನೇಮಕಗೊಳಿಸಿ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಆದೇಶಿಸಿತ್ತು.
ಸುಬ್ರಹ್ಮಣ್ಯ ಶಬರಾಯ.ಕೆ, ವಿಶ್ವನಾಥ.ಕೆ ಕೊಲ್ಲಾಜೆ,ಪ್ರಶಾಂತ್. ರೈ ಅರಂತಬೈಲು ಗೋಳಿತೊಟ್ಟು, ಗಣೇಶ್ ಕಾಶಿ, ಉದಯ ಶಂಕರ ಶೆಟ್ಟಿ ಅರಿಯಡ್ಕ, ಮಹಿಳಾ ಸ್ಥಾನದಿಂದ ಲೋಕೇಶ್ವರಿ ವಿನಯಚಂದ್ರ ವಳಂಬ್ರ ಸಿನಿ ಕೊಕ್ಕಡ ಪ.ಜಾತಿ ಮತ್ತು ಪ.ಪಂಗಡದಿಂದ ಹರಿಶ್ಚಂದ್ರ.ಜಿ. ಅರ್ಚಕ ವರ್ಗದಿಂದ ಸತ್ಯಪ್ರಿಯ ಕಲ್ಲೂರಾಯ ಅವರನ್ನು ನೇಮಕಗೊಳಿಸಿ ಆದೇಶಿಸಲಾಗಿತ್ತು. ಇದೀಗ ಈ ನೂತನ ಸಮಿತಿಯನ್ನು ರದ್ದುಗೊಳೀಸಿ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ಕೋರ್ಟ್ ಮೆಟ್ಟಿಲೇರಿದ್ದ…!
ಮಾರ್ಚ್ 3ರಂದು ರಚನೆಯಾಗಿದ್ದ ನೂತನ ಸಮಿತಿಯ ರಚನೆ ಪ್ರಶ್ನಿಸಿ ಪುತ್ತೂರಿನ ವಕೀಲ ಉದಯಶಂಕರ ಶೆಟ್ಟಿ ಅರಿಯಡ್ಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಮಧ್ಯೆ ಮಾರ್ಚ್ 5ರಂದು ಹೈಕೋರ್ಟ್ ನೂತನ ಸಮಿತಿಗೆ ಮಧ್ಯಂತರ ತಡೆ ನೀಡಿತ್ತು. ಇದೀಗ ಹೈಕೋರ್ಟ್ ಸಮಿತಿಯನ್ನೇ ರದ್ದುಗೊಳಿಸಿ ಆದೇಶಿಸಿದೆ. ನೂತನ ಸಮಿತಿಯಲ್ಲಿ ತಾನೊಬ್ಬ ಸದಸ್ಯನಾಗಿದ್ದರೂ ಬದಲಾದ ಪಟ್ಟಿಯಲ್ಲಿ ತನ್ನನ್ನು ಕೈಬಿಟ್ಟಿದ್ದರಿಂದ ಸಿಟ್ಟಿಗೆದ್ದಿದ್ದ ಉದಯಶಂಕರ ಶೆಟ್ಟಿ ಅರಿಯಡ್ಕ ಕೋರ್ಟ್ ಮೊರೆ ಹೋಗಿದ್ದರು. ವಾದ-ಪ್ರತಿವಾದ ಆಲಿಸಿದ ಕೋರ್ಟ್ ಈ ರೀತಿಯ ಆದೇಶ ಹೊರಡಿಸಿದೆ.





