Fri. Apr 4th, 2025

Ujire: ಮಂಗಳೂರು ವಿವಿ ಮಟ್ಟದ ಅಂತರ್‌ಕಾಲೇಜು ಕನ್ನಡ ಚರ್ಚಾಸ್ಪರ್ಧೆ

ಉಜಿರೆ (ಮಾ.25) : ವಿಚಾರಗಳ ಮಂಥನಕ್ಕೆ ಅವಕಾಶವಿರುವ ಚರ್ಚೆಗಳು ಮೌಲ್ಯಯುತ ಗಮ್ಯ ತಲುಪಿಕೊಂಡಾಗಲೇ ವೈಚಾರಿಕ ಗೆಲುವು ಸಾಧ್ಯವಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪ್‌ಸಿಂಹ ನಾಯಕ್ ಅಭಿಪ್ರಾಯಪಟ್ಟರು.

ಇದನ್ನೂ ಓದಿ: 🎙ಬೆಳ್ತಂಗಡಿ: ಜೀ ಸರಿಗಮಪ ಖ್ಯಾತಿಯ ಶ್ರೀಹರ್ಷ ಅವರಿಂದ ಹಾಡು ಕಲಿಯುವ ಸುವರ್ಣಾವಕಾಶ

ಉಜಿರೆಯ ಎಸ್.ಡಿ.ಎಂ ಕಾಲೇಜಿನ ಸಮ್ಯಕ್‌ದರ್ಶನ ಸಭಾಂಗಣದಲ್ಲಿ ಶ್ರೀ ರತ್ನವರ್ಮ ಹೆಗ್ಗಡೆ ಸ್ಮರಣಾರ್ಥ ಮಂಗಳವಾರ ಆಯೋಜಿಸಿದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಕನ್ನಡ ಚರ್ಚಾ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಚರ್ಚೆ ಎಂದರೆ ಉತ್ತಮ ವಿಚಾರಗಳ ಮಂಥನ. ಮೌಲ್ಯಗಳ ಕುರಿತ ಸರಿಯಾದ ಅರ್ಥೈಸುವಿಕೆಯೇ ಚರ್ಚೆಯ ಸಂದರ್ಭದಲ್ಲಿ ಪ್ರಧಾನ ಪಾತ್ರವಹಿಸುತ್ತದೆ. ವ್ಯಕ್ತಿಯ ಮೂಲಕ ಅಭಿವ್ಯಕ್ತವಾಗುವ ಅಭಿಪ್ರಾಯಗಳು ವ್ಯಕ್ತಿಗತ ಪೊರೆಯನ್ನು ಕಳಚಿಕೊಂಡು ನಿಜವಾದ ಮೌಲ್ಯಗಳ ನಿಷ್ಕರ್ಷೆಗೆ ಬೇಕಾಗುವ ಒತ್ತಾಸೆ ಮೂಡಿಸುತ್ತವೆ. ಹಾಗಾದಾಗ ಮಾತ್ರ ಚರ್ಚೆ ರಚನಾತ್ಮಕವಾಗುತ್ತದೆ. ಚಿಂತನೆಯ ಗೆಲುವು ಸಾಧ್ಯವಾಗುತ್ತದೆ ಎಂದರು.

ಮಾತುಗಳು ವ್ಯಕ್ತಿಯೊಬ್ಬನ ಜೀವನದ ಸಂಸ್ಕಾರ ಹಾಗೂ ಮೌಲ್ಯಬದ್ಧತೆ ಎಂಥದ್ದು ಎಂಬುದನ್ನು ತೋರ್ಪಡಿಸುತ್ತವೆ. ಮಾತುಗಳ ಪ್ರೇರಣೆಯಿಂದಲೇ ಶಿಸ್ತುಬದ್ಧ ಬದುಕು ರೂಪುಗೊಳ್ಳುತ್ತದೆ. ಸತತ ಅಧ್ಯಯನದ ಮೂಲಕ ಸಂವಹನ ಸಾಮರ್ಥ್ಯ ಹೆಚ್ಚಿಸಿಕೊಂಡು ವ್ಯಕ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಚರ್ಚಾಸ್ಪರ್ಧೆಗಳು ಒಳಿತು-ಕೆಡಕುಗಳ ವಿವೇಚನೆ ತಂದುಕೊಳ್ಳುವುದಕ್ಕೆ ನೆರವಾಗುತ್ತವೆ. ಸಮಾಜಕ್ಕೆ ಬೇಕಾದ ಒಳಿತಿನ ಮಾದರಿಗಳನ್ನು ಕಟ್ಟಿಕೊಡುವುದರ ಕಡೆಗೆ ಹೆಚ್ಚಿನ ಆಸಕ್ತಿ ವಹಿಸಬೇಕು. ಆ ನಿಟ್ಟಿನಲ್ಲಿ ಚರ್ಚೆ ಹುಟ್ಟುಹಾಕುವ ಸಾಮರ್ಥ್ಯವನ್ನು ರೂಢಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಮಾತನಾಡಿದರು. ಚರ್ಚೆಯು ಸಂವಹನ ಕೌಶಲ್ಯದ ಒಂದು ಮುಖ್ಯ ಭಾಗವಾಗಿದೆ. ವಿದ್ಯಾರ್ಥಿಗಳು ಚರ್ಚಾ ಕಲೆಯನ್ನು ಕೌಶಲ್ಯವಾಗಿ ಅನ್ವಯಿಸಿಕೊಂಡಾಗ ವಿಭಿನ್ನ ಹೆಗ್ಗುರುತು ಮೂಡಿಸಲು ಸಾಧ್ಯವಾಗುತ್ತದೆ ಎಂದರು.


ಕಾರ್ಯಕ್ರಮದ ಆರಂಭದಲ್ಲಿ ರತ್ನವರ್ಮ ಹೆಗ್ಗಡೆಯವರ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿಶ್ವನಾಥ. ಪಿ ಉಪಸ್ಥಿತರಿದ್ದರು. ಡಾ.ಕೃಷ್ಣಾನಂದ, ಪದ್ಮರಾಜ್, ಡಾ.ಮಾಧವ ಎಂ ಕೆ ಚರ್ಚಾಸ್ಪರ್ಧೆಯ ತೀರ್ಪುಗಾರರಾಗಿದ್ದರು. ಸಹಾಯಕ ಪ್ರಾಧ್ಯಾಪಕರಾದ ನಾಗಣ್ಣ ಡಿ. ಎ ಸ್ವಾಗತಿಸಿ, ಡಾ. ಸುಧೀರ್.ಕೆ.ವಿ ವಂದಿಸಿದರು.

Leave a Reply

Your email address will not be published. Required fields are marked *