ಧರ್ಮಸ್ಥಳ: (ಮಾ.27) ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಮೇಲೆ ಷಡ್ಯಂತ್ರ ನಡೆಯುತ್ತಿದೆ. ಸುಖಾಸುಮ್ಮನೆ ಅವರ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಆರೋಪಿಸಿ ಧರ್ಮಸ್ಥಳದ ಗ್ರಾಮಸ್ಥರು ಇಂದು ಬೃಹತ್ ಸಮಾವೇಶವನ್ನು ಕೈಗೊಂಡರು.

ಇದನ್ನೂ ಓದಿ: ⭕ಮಂಗಳೂರು: ಅಕ್ರಮವಾಗಿ ಕಟ್ಟಿಗೆ ಸಾಗಾಟ ಮಾಡುತ್ತಿದ್ದ ವಾಹನ ವಶಕ್ಕೆ ಪಡೆದ ಅಧಿಕಾರಿಗಳು!!!
ಸಮಾವೇಶಕ್ಕೂ ಮುನ್ನ ಧರ್ಮಸ್ಥಳದ ಅಣ್ಣಪ್ಪ ಬೆಟ್ಟಕ್ಕೆ ತೆರಳಿದ ಗ್ರಾಮಸ್ಥರು ಅಣ್ಣಪ್ಪ ಸ್ವಾಮಿ ಮುಂದೆ ತಮ್ಮ ನೋವನ್ನು ವ್ಯಕ್ತಪಡಿಸಿ ಅಲ್ಲಿ 12 ತೆಂಗಿನಕಾಯಿ ಒಡೆದು ಭಕ್ತಿಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಅಮೃತವರ್ಷಿಣಿಯಲ್ಲಿ ಧರ್ಮಸ್ಥಳ ಗ್ರಾಮ ಹಿತರಕ್ಷಣಾ ವೇದಿಕೆಯಿಂದ ಧರ್ಮಸ್ಥಳ ಗ್ರಾಮಸ್ಥರ ಬೃಹತ್ ಸಮಾವೇಶ ನಡೆಯಿತು.
ದುಷ್ಟರ ವಿರುದ್ಧ ಅಗ್ನಿಪಥ, ಕ್ಶೇತ್ರದ ಪರ ಶಾಂತಿಪಥ ಎಂಬ ಧ್ಯೇಯದಡಿ ನಡೆದ ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಕೇಶವ ಪಿ ಬೆಳಾಲು, ಕ್ಷೇತ್ರ ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆಯವರ ಬಗ್ಗೆ ಯಾರು ಅವಹೇಳನ ಮಾಡುತ್ತಿದ್ದರೋ ಅದು ಹದಿನೈದು ದಿನಗಳಲ್ಲಿ ಅಂತ್ಯ ಆಗಬೇಕು. ಅಂತಹವರಿಗೆ ದೇವರು ಸರಿಯಾದ ಶಿಕ್ಷೆ ಕೊಡಬೇಕು ಎಂದು ಹೇಳಿದರು. ಅಂದು ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸಿಬಿಐ ತನಿಖೆ ಆಗಲಿ ಎಂದು ಒತ್ತಡ ಹಾಕಿದ್ದೆ ಪೂಜ್ಯ ವೀರೇಂದ್ರ ಹೆಗ್ಗಡೆಯವರು.

ವಸಂತ್ ಬಂಗೇರ ಅವರ ಜೊತೆ ಮಾತುಕತೆ ಮಾಡಿ ಸಿಬಿಐಗೆ ಕೊಡುವಂತೆ ಮಾಡಿದ್ದಾರೆ, ಆದರೆ ಆ ಸಮಯದಲ್ಲಿ ಮಕ್ಕಳಾಗಿದ್ದವರು ಇಂದು ವಿಡಿಯೋ ಮಾಡಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ನಾವು ಸಾತ್ವಿಕ ವ್ಯಕ್ತಿಗಳು ನಾವು ತಾಮಸ ವ್ಯಕ್ತಿಗಳು ಆಗೋಕೆ ಸಾಧ್ಯವಿಲ್ಲ. ಎಲ್ಲಾ ಕೆಟ್ಟ ಶಬ್ಧಗಳು ನಮಗೆ ಗೊತ್ತು ಆದರೆ ನಾವು ಸಂಸ್ಕೃತಿ ಇರುವವರು, ಧರ್ಮಸ್ಥಳದ ನೆರಳಲ್ಲಿ ಬೆಳೆದವರು ಎಂದರು. ನಾವು ಈ ಕ್ಷೇತ್ರದಲ್ಲಿ ಹುಟ್ಟಿದ್ದೇವೆ ಹೀಗಾಗಿ ಎಲ್ಲಾ ಅಪಪ್ರಚಾರವನ್ನು ತಡೆಯುವ ಶಕ್ತಿಯು ನಮಗೆ ಇದೆ.
ಪೂಜ್ಯ ಖಾವಂದರೊಂದಿಗೆ ನಾವು ಇದ್ದೇವೆ ಎಂದರು. ಬಳಿಕ ಮಾತನಾಡಿದ ಶ್ರೀನಿವಾಸ್ ರಾವ್, ಖಾವಂದರ ಒಟ್ಟಿಗೆ ನಾವು ಇದ್ದೇವೆ ಇಂದು ನಾವು ಪ್ರಮಾಣ ಮಾಡುತ್ತಿದ್ದೇವೆ. ವೀರೇಂದ್ರ ಹೆಗ್ಗಡೆಯವರು ಶ್ವೇತ ಬಟ್ಟೆ ತೊಡುವವರು. ಅವರ ಶ್ವೇತ ಬಟ್ಟೆಗೆ ಕಪ್ಪು ಚುಕ್ಕೆಯನ್ನು ಇಡುವ ಪ್ರಯತ್ನ ನಡೆದಿದೆ. ಅದಕ್ಕೆ ನಾವು ಬಿಡೋದಿಲ್ಲ ಎಂದರು. ದೇವಸ್ಥಾನ ಯಾರದ್ದು ಅಂತ ಪ್ರಶ್ನಿಸುತ್ತಾರೆ.

ದೇವಸ್ಥಾನ ನಿರ್ಮಾಣ ಮಾಡಲು ಧರ್ಮ ದೇವತೆಗಳು ಹೇಳಿದ್ದು ಅಮ್ಮು ಬಳ್ಳಾಲ್ತಿ. ಹೀಗಾಗಿ ದೇವಸ್ಥಾನ ಹೆಗ್ಗಡೆಯವರದ್ದು. ಆದರೆ ನಮಗೆ ಈವರೆಗೆ ಇಲ್ಲಿ ಯಾವುದೇ ಸಮಸ್ಯೆ ಆಗಿಲ್ಲ ಎಂದರು. ಖಾವಂದರಿಗೆ ಯಾವುದೇ ಸಮಸ್ಯೆಯಿಲ್ಲ , ಅವರು ನೆಮ್ಮದಿ ಇಂದ ಇದ್ದಾರೆ. ಇಂತಹ ಯಾವುದೇ ವಿಚಾರಕ್ಕೆ ಅವರು ತಲೆಬಾಗುವುದಿಲ್ಲ ಎಂದರು. ನಮ್ಮದು ಕಾನೂನಾತ್ಮಕ ಹೋರಾಟ ನಡೆಯುತ್ತಿದೆ. ವೀರೇಂದ್ರ ಹೆಗ್ಗಡೆಯವರು ಮತ್ತು ಅವರ ಕುಟುಂಬಸ್ಥರ ಬಗ್ಗೆ ಯಾವುದೇ ಫೋಟೋಗಳನ್ನು ಬಳಸುವಂತಿಲ್ಲ.


ಸಾಮಾಜಿಕ ಜಾಲತಾಣ , ಸುದ್ದಿ ವಾಹಿನಿ ಮೂಲಕ ಯಾವುದೇ ಸುದ್ದಿ ಅವರ ಬಗ್ಗೆ ಬಿತ್ತರಿಸಬಾರದು. ಹತ್ತು ಕೋಟಿ ಮಾನನಷ್ಟ ಮೊಕದ್ದಮೆ ಸಲ್ಲಿಸಲಾಗಿದೆ ಎಂದರು. ಈ ವೇಳೆ ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಮಲಾ, ಚಂದನ್ ಕಾಮತ್, ಶಾಂಭವಿ ವಿ ರೈ, ಭುಜಬಲಿ, ಪ್ರಭಾಕರ್ ಪೂಜಾರಿ, ಪ್ರೀತಂ ಧರ್ಮಸ್ಥಳ, ಧನಕೀರ್ತಿ ಆರಿಗ, ನಾರಾಯಣ ಪರಪ್ಪು, ಮತ್ತಿತರು ಉಪಸ್ಥಿತರಿದ್ದರು.
